ಹಾಸನ [ಮಾ.07]:  ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಇಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಅನುದಾನ ಹರಿದು ಬರುತ್ತದೆ ಎಂದು ಸುಳ್ಳು ಬಿತ್ತಿದ್ದ ಬಿಜೆಪಿಯ ನಿಜ ಬಣ್ಣ ಬಜೆಟ್‌ನಲ್ಲಿ ಬಯಲಾಗಿದೆ ಎಂದು ಸಂಸದ ಪ್ರಜ್ವಲ್‌ ರೇವಣ್ಣ ಟೀಕಿಸಿದ್ದಾರೆ.

ಬಜೆಟ್‌ ಕುರಿತು ಹೇಳಿಕೆ ನೀಡಿರುವ ಅವರು, ಬಿಜೆಪಿ ಅಧಿಕಾರಕ್ಕೆ ಬಂದ ನಂತರ ನಮ್ಮ ರಾಜ್ಯದ ತೆರಿಗೆ ಹಣವನ್ನು ವಾಪಾಸ್‌ ಕೊಡಿ ಎಂದು ಕೇಂದ್ರಕ್ಕೆ ಕೇಳುವ ಹಕ್ಕನ್ನು ರಾಜ್ಯ ಕಳೆದುಕೊಂಡಿದೆ. ಕೇಂದ್ರ ಸರ್ಕಾರದಿಂದ ಅನುದಾನ ಪಡೆಯಲು ವಿಫಲವಾದ ಕಾರಣದಿಂದ ಮುಖ್ಯಮಂತ್ರಿ ಯಡಿಯೂರಪ್ಪನವರು ಕಳಪೆ ಬಜೆಟ್‌ ಮಂಡಿಸಿದ್ದಾರೆ ಎಂದು ಟೀಕಿಸಿದ್ದಾರೆ.

ಸಂಸದ ಪ್ರಜ್ವಲ್ ರೇವಣ್ಣಗೆ ಸುಪ್ರೀಂಕೋರ್ಟ್ ನೋಟಿಸ್..!..

ಹಸಿರು ಶಾಲು ಧರಿಸಿ ಯಾವಾಗಲೂ ರೈತ ಹೋರಾಟಗಾರರು ಎಂದು ಬಿಂಬಿಸಿಕೊಳ್ಳುವ ಮುಖ್ಯಮಂತ್ರಿಗಳು ಬಜೆಟ್‌ನಲ್ಲಿ ರೈತ ಪರ ಯೋಜನೆ ನೀಡಿಲ್ಲ. ಬಜೆಟ್‌ ವಿಶ್ಲೇಷಣೆ ಸಂದರ್ಭದಲ್ಲಿ ‘ಹೊಸ ಬಾಟಲಿಯಲ್ಲಿ ಹಳೇ ಮದ್ಯ’ ಎಂದು ಬಣ್ಣಿಸುತ್ತಿದ್ದರು. ಆದರೆ, ಈ ಬಜೆಟ್‌ ಬಗ್ಗೆ ಇದೇ ಮಾದರಿಯಲ್ಲಿ ಹೇಳುವುದಾದರೆ ‘ಬಾಟಲಿಯೂ ಇಲ್ಲ, ಮದ್ಯವೂ ಇಲ್ಲ’ ಎಂದು ವ್ಯಂಗ್ಯವಾಡಿದರು.

‘ಬಂಡವಾಳವಿಲ್ಲದ ಬಡಾಯಿ’ ಎಂದೇ ಹೇಳಬಹುದಾಗಿದೆ. ರಾಜ್ಯದ ಜನರ ನಿರೀಕ್ಷೆ ಹುಸಿಯಾಗಿದೆ. ನಿರಾಶಾದಾಯಕ ಬಜೆಟ್‌ ನಿಂದ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದು ತಿಳಿಸಿದ್ದಾರೆ.