ಮಂಡ್ಯ (ಆ.13) : ಜಿಲ್ಲಾ ಪಂಚಾಯಿತಿಯ ಐದು ಸ್ಥಾಯಿ ಸಮಿತಿ ಸದಸ್ಯ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜನಪ್ರತಿನಿಧಿಗಳು ಭಾಗವಹಿಸುವ ಮೂಲಕ ಹೊಸ ಚರಿತ್ರೆ ಸೃಷ್ಟಿಗೆ ಕಾರಣರಾದರು.

ಇದುವರೆಗೆ ಸ್ಥಾಯಿ ಸಮಿತಿ ಸದಸ್ಯ ಸ್ಥಾನಗಳಿಗೆ ಚುನಾವಣೆಯೇ ನಡೆಯುತ್ತಿರಲಿಲ್ಲ. ಒಮ್ಮೆ ನಡೆದರೂ ಅದು ಯಾರ ಅರಿವಿಗೂ ಬರುತ್ತಿರಲಿಲ್ಲ. ಆಡಳಿತಾರೂಢ ಪಕ್ಷದವರೇ ಸದಸ್ಯರನ್ನು ಸದ್ದುಗದ್ದಲವಿಲ್ಲದೇ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಸದಸ್ಯರು ಅಧ್ಯಕ್ಷರನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಜನಪ್ರತಿನಿಧಿಗಳ ಆಗಮನದಿಂದಾಗಿ ಈ ಬಾರಿ ನಡೆದ ಚುನಾವಣೆ ವಿಶೇಷ ಮಹತ್ವವನ್ನು ಪಡೆದುಕೊಂಡಿತ್ತು.

ಭಾಗವಹಿಸಲು ಕಾರಣವೇನು?:

ಜೆಡಿಎಸ್‌ನಿಂದ ಸದಸ್ಯೆಯಾಗಿ ಆಯ್ಕೆಯಾಗಿ ಅಧ್ಯಕ್ಷೆ ಗದ್ದುಗೆ ಏರಿದ ನಾಗರತ್ನಸ್ವಾಮಿ ಒಪ್ಪಂದದಂತೆ ಅಧಿಕಾರ ಬಿಟ್ಟುಕೊಡದೆ ವರಿಷ್ಠರ ವಿರುದ್ಧವೇ ಸೆಟೆದು ನಿಂತಿದ್ದಾರೆಂಬ ಆರೋಪಕ್ಕೆ ಗುರಿಯಾಗಿದ್ದಾರೆ. ಇವರಿಗೆ ತಕ್ಕ ಪಾಠ ಕಲಿಸಲು ಹಾಗೂ ಚುನಾವಣೆಯಲ್ಲಿ ಮುಖಭಂಗ ಉಂಟುಮಾಡುವ ಸಲುವಾಗಿ ವರಿಷ್ಠರ ಸೂಚನೆಯನ್ವಯ ಜೆಡಿಎಸ್‌ ಶಾಸಕರು ಆಗಮಿಸಿದ್ದರು. ಅಧ್ಯಕ್ಷರು ಕೆಲವು ಜೆಡಿಎಸ್‌ ಸದಸ್ಯರು ಹಾಗೂ ಕಾಂಗ್ರೆಸ್‌ ಸದಸ್ಯರ ಬೆಂಬಲದೊಂದಿಗೆ ಅಖಾಡಕ್ಕಿಳಿದಿದ್ದಾರೆ. ಇವರಿಗೆ ಬೆಂಬಲವಾಗಿ ಸಚಿವರು, ಸಂಸದೆ ಆಗಮಿಸಿದ್ದರೆಂದು ಹೇಳಲಾಗಿದೆ.

33 ಸ್ಥಾನಗಳಿಗೆ ಚುನಾವಣೆ:

ಜಿಲ್ಲಾ ಪಂಚಾಯಿತಿಯಲ್ಲಿರುವ ಸಾಮಾನ್ಯ ಸ್ಥಾಯಿ ಸಮಿತಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ, ಹಣಕಾಸು, ಲೆಕ್ಕಪರಿಶೋಧನೆ, ಯೋಜನಾ ಸ್ಥಾಯಿ ಸಮಿತಿ ಸೇರಿ ಐದು ಸ್ಥಾಯಿ ಸಮಿತಿಗಳಿಗೆ ಬುಧವಾರ ಚುನಾವಣೆ ನಿಗದಿಯಾಗಿತ್ತು. ಹಣಕಾಸು, ಲೆಕ್ಕಪರಿಶೋಧನೆ, ಯೋಜನಾ ಸ್ಥಾಯಿ ಸಮಿತಿಗೆ ಜಿಪಂ ಅಧ್ಯಕ್ಷರೇ ಅಧ್ಯಕ್ಷರಾಗಿರುತ್ತಾರೆ. ಸಾಮಾನ್ಯ ಸ್ಥಾಯಿ ಸಮಿತಿಗೆ ಉಪಾಧ್ಯಕ್ಷರು ಅಧ್ಯಕ್ಷರಾಗಿದ್ದ ಕಾರಣ ಎರಡು ಸ್ಥಾನಗಳನ್ನು ಹೊರತುಪಡಿಸಿ 33 ಸ್ಥಾನಗಳಿಗೆ ಚುನಾವಣೆ ನಡೆಯಿತು. ಎಲ್ಲಾ ಸಮಿತಿಗಳ ಸದಸ್ಯರ ಸಂಖ್ಯೆ 7ನ್ನು ಮೀರಬಾರದೆಂಬ ನಿಯಮವಿದೆ.

ನಪ್ರತಿನಿಧಿಗಳ ಆಗಮನ:

ಮಧ್ಯಾಹ್ನ 12 ಗಂಟೆಗೆ ಚುನಾವಣಾ ಪ್ರಕ್ರಿಯೆ ಆರಂಭಿಸಲು ವಿಶೇಷ ಸಭೆ ನಡೆಸಲಾಯಿತು. ಈ ಸಭೆಗೆ 29 ಸದಸ್ಯರ ಕೋರಂ ಅವಶ್ಯಕತೆ ಇತ್ತು. ಕಾಂಗ್ರೆಸ್‌-ಜೆಡಿಎಸ್‌-ಪಕ್ಷೇತರ ಸದಸ್ಯರೆಲ್ಲರೂ ಸಭೆಗೆ ಆಗಮಿಸಿದ್ದರು. ಕಾಂಗ್ರೆಸ್‌ ಸದಸ್ಯರು ಮೊದಲು ಬಂದು ಆಸೀನರಾಗಿದ್ದರು.

ಬಿಜೆಪಿ ಸೇರಲು ಜೆಡಿಎಸ್‌ನ ನಾಲ್ವರು ಶಾಸಕರ ಉತ್ಸುಕ...

ಆನಂತರ ಜೆಡಿಎಸ್‌ ಶಾಸಕರಾದ ಎಂ.ಶ್ರೀನಿವಾಸ್‌, ಸಿ.ಎಸ್‌.ಪುಟ್ಟರಾಜು, ಡಿ.ಸಿ.ತಮ್ಮಣ್ಣ, ರವೀಂದ್ರ ಶ್ರೀಕಂಠಯ್ಯ, ಡಾ.ಕೆ.ಅನ್ನದಾನಿ, ವಿಧಾನಪರಿಷತ್‌ ಸದಸ್ಯರಾದ ಮರಿತಿಬ್ಬೇಗೌಡ, ಎನ್‌.ಅಪ್ಪಾಜಿಗೌಡ ಅವರೊಂದಿಗೆ ಜೆಡಿಎಸ್‌ ಸದಸ್ಯರು ಸಭಾಂಗಣ ಪ್ರವೇಶಿಸಿದರು. ಇದಾದ ಸ್ವಲ್ಪ ಸಮಯದಲ್ಲೇ ಸಂಸದೆ ಸುಮಲತಾ ಅಂಬರೀಶ್‌ ಸಭೆಗೆ ಆಗಮಿಸಿದರೆ, ತದನಂತರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಸಿ.ನಾರಾಯಣಗೌಡರ ಪ್ರವೇಶವಾಯಿತು. ಸಚಿವರು, ಸಂಸದರು, ಶಾಸಕರು, ವಿಧಾನಪರಿಷತ್‌ ಸದಸ್ಯರೆಲ್ಲರೂ ಸದಸ್ಯರ ಕುರ್ಚಿಯಲ್ಲಿ ಆಸೀನರಾಗಿದ್ದರು. ಕೊರೋನಾ ಸೋಂಕಿಗೊಳಗಾಗಿರುವ ನಾಗಮಂಗಲ ಕ್ಷೇತ್ರದ ಶಾಸಕ ಕೆ.ಸುರೇಶ್‌ ಗೌಡರು ಗೈರುಹಾಜರಾಗಿದ್ದರು.

ಅಧ್ಯಕ್ಷ ಸ್ಥಾನದಲ್ಲಿ ಕೂರಬಹುದೇ?:

ಜಿಪಂ ಅಧ್ಯಕ್ಷೆ ನಾಗರತ್ನಸ್ವಾಮಿ, ಜಿಪಂ ಸಿಇಒ ಜ್ಹುಲ್‌ಫಿಖಾರ್‌ ಉಲ್ಲಾ ತಮ್ಮ ಕುರ್ಚಿಯಲ್ಲಿ ಆಸೀನರಾಗಿದ್ದರು. ಇದನ್ನು ಗಮನಿಸಿದ ಸದಸ್ಯ ರವಿ ಅವರು, ಸ್ಥಾಯಿ ಸಮಿತಿ ಚುನಾವಣೆ ಪ್ರಕ್ರಿಯೆ ನಡೆಯುವ ವೇಳೆ ಅಧ್ಯಕ್ಷರು ತಮ್ಮ ಸ್ಥಾನದಲ್ಲಿ ಕೂರುವುದಕ್ಕೆ ಅವಕಾಶವಿದೆಯೇ ಎಂದು ಕೇಳಿದರು. ಅದಕ್ಕೆ ಉತ್ತರಿಸಿದ ಸಿಇಒ ಜ್ಹುಲ್‌ಫಿಖಾರ್‌ ಉಲ್ಲಾ, ಇನ್ನೂ ಚುನಾವಣಾ ಪ್ರಕ್ರಿಯೆ ಆರಂಭಗೊಂಡಿಲ್ಲ. ಸಭೆಯ ಅಧ್ಯಕ್ಷತೆ ವಹಿಸಬೇಕಿರುವುದರಿಂದ ಅವರು ಇಲ್ಲಿ ಕುಳಿತಿದ್ದಾರೆ. ಚುನಾವಣೆ ಶುರುವಾಗುತ್ತಿದ್ದಂತೆ ಅಧ್ಯಕ್ಷರು ಸದಸ್ಯರ ಸಾಲಿನಲ್ಲಿ ಕೂರುವರು ಎಂದು ಸ್ಪಷ್ಟಪಡಿಸಿದರು.

ಸರ್ಕಾರದ ಮನೆಹಾಳು ನಿರ್ಧಾರ ಎಂದ ಕುಮಾರಸ್ವಾಮಿಯಿಂದ ಎಚ್ಚರಿಕೆ ಸಂದೇಶ

ಐದೈದು ನಿಮಿಷ ಅಂತರದಲ್ಲಿ ನಡೆಸಿ:

ಒಂದು ಸ್ಥಾಯಿ ಸಮಿತಿ ಚುನಾವಣೆಗೂ ಮತ್ತೊಂದು ಸ್ಥಾಯಿ ಸಮಿತಿ ಚುನಾವಣೆಗೂ 40 ನಿಮಿಷ ಅಂತರವಿದೆ. ಇದು ಏಕೆ ಎಂದು ಅರ್ಥವಾಗುತ್ತಿಲ್ಲ. ಐದು ನಿಮಿಷಗಳ ಅಂತರದಲ್ಲಿ ಒಂದೊಂದು ಸ್ಥಾಯಿ ಸಮಿತಿಗಳ ಚುನಾವಣೆ ನಡೆಸಿ. ವೃಥಾ ಕಾಲಹರಣ ಮಾಡುವುದೇಕೆ ಎಂದು ಶಾಸಕ ಸಿ.ಎಸ್‌.ಪುಟ್ಟರಾಜು ಸಿಇಒ ಅವರನ್ನು ಪ್ರಶ್ನಿಸಿದರು.

ಜಿಪಂ ವಿನಿಯಮಗಳಲ್ಲಿ ಮಾಡಿಕೊಂಡಿರುವಂತೆ ಚುನಾವಣೆ ಸಮಯ ನಿಗದಿಪಡಿಸಲಾಗಿದೆ. ಎಲ್ಲರೂ ಒಪ್ಪಿದರೆ ಐದೈದು ನಿಮಿಷಕ್ಕೆ ಚುನಾವಣೆ ನಡೆಸಬಹುದು. ನಮ್ಮ ಆಕ್ಷೇಪವೇನೂ ಇಲ್ಲ ಎಂದರು.

ಕೊನೆಗೆ ಸುಮಾರು 30 ನಿಮಿಷದ ಅಂತರದಲ್ಲಿ ಐದು ಸಮಿತಿಗಳ ಚುನಾವಣೆ ಪೂರ್ಣಗೊಂಡಿತು.

ಅಂತಮವಾಗಿ ಜಿಪಂ 5 ಸ್ಥಾಯಿಸಮಿತಿ ಚುನಾವಣೆಯಲ್ಲಿ ಜೆಡಿಎಸ್‌ ಮೇಲುಗೈ ಸಾಧಿಸಿದೆ. ಒಟ್ಟು 33 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಜೆಡಿಎಸ್‌ 31 ಸ್ಥಾನಗಳಲ್ಲಿ ಗೆಲುವು ಸಾಧಿಸಿದರೆ ಎರಡು ಸ್ಥಾನಗಳಲ್ಲಿ ಕಾಂಗ್ರೆಸ್‌ ಜಯಗಳಿಸಿದೆ. ಕಾಂಗ್ರೆಸ್‌ನಿಂದ ತೂಬಿನಕೆರೆ ರಾಮಲಿಂಗಯ್ಯ ಹಾಗೂ ಹಲಗೂರು ಚಂದ್ರಕುಮಾರ್‌ ಮಾತ್ರ ಸಮಿತಿಗಳಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಜೆಡಿಎಸ್‌ ಪರ ನಿಂತಿದ್ದ ಕಾಂಗ್ರೆಸ್‌ನ ಹನುಮಂತು ಅವರಿಗೂ ಸ್ಥಾನ ಲಭಿಸಿದೆ.