ಸಿದ್ದಾಪುರ [ಮಾ.08]: ಅವೈಜ್ಞಾನಿಕವಾಗಿ ಹೆಚ್ಚಿಸಿರುವ ಕುಮಟಾ- ಹೆಗಡೆ ಬಸ್ ದರವನ್ನು ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿ ಜೆಡಿಎಸ್ ಮುಖಂಡ ಸೂರಜ್ ನಾಯ್ಕ ಸೋನಿ ನೇತೃತ್ವದಲ್ಲಿ ಹೆಗಡೆ ಗ್ರಾಮಸ್ಥರು ಕುಮಟಾ ಬಸ್ ನಿಲ್ದಾಣಕ್ಕೆ ಶನಿವಾರ ಮುತ್ತಿಗೆ ಹಾಕಿ ಪ್ರತಿಭಟಿಸಿದರು. 

ಸೂರಜ್ ನಾಯ್ಕ ಸೋನಿ ಮಾತನಾಡಿ, ಕೆಲ ದಿನಗಳ ಹಿಂದೆ ಕುಮಟಾದಿಂದ ಹೆಗಡೆಗೆ ಸಂಚರಿಸುವ ಬಸ್ ದರ 9 ರು. ಆಗಿದ್ದು ಇದೀಗ 14 ರು.ಗೆ ಹೆಚ್ಚಿಸಲಾಗಿದೆ. ರಾಜ್ಯ ಸರ್ಕಾರದಿಂದ ಬಸ್ ದರ ಶೇ. 12ರಷ್ಟು ಹೆಚ್ಚಿಸಲಾಗಿದೆ. 9 ರು.ರಿಂದ 14ರು.ಗೆ ಹೆಚ್ಚಿಸಿರುವುದು ಸಮಂಜಸವಲ್ಲ. ಸಾರಿಗೆ ಇಲಾಖೆ ಈ ರೀತಿಯಲ್ಲಿ ಪ್ರಯಾಣಿಕರಿಂದ ಹೆಚ್ಚಿನ ಸುಲಿಗೆ ನಡೆಸುತ್ತಿದೆ. ಶೇ. 12 ಎಂದರೆ ಇಷ್ಟು ಪ್ರಮಾಣದಲ್ಲಿ ಹೆಚ್ಚಾಗಲು ಸಾಧ್ಯವಿಲ್ಲ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಹೀಗಾಗಿ ಇದನ್ನು ಇನ್ನೊಮ್ಮೆ ಪರಿಷ್ಕರಿಸಿ ಪ್ರಯಾಣದ ದರ ಕಡಿಮೆ ಮಾಡಬೇಕು, ಇಲ್ಲವಾದಲ್ಲಿ ಗ್ರಾಮಸ್ಥರೆಲ್ಲ ಸೇರಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಬಸ್ ನಿಲ್ದಾಣಕ್ಕೆ ಡಿಪೋ ಮ್ಯಾನೇಜರ್ ಸೌಮ್ಯಾ ನಾಯಕ ಭೇಟಿ ನೀಡಿ ಪ್ರತಿಭಟನಾಕಾರ ಜೊತೆ ಮಾತುಕತೆ ನಡೆಸಿ ಪ್ರಯಾಣ ದರವನ್ನು ಕಡಿತಗೊಳಿಸುವ ಕುರಿತು ವಿಭಾಗಿಯ ಕೇಂದ್ರ ಕಚೇರಿಗೆ ಮನವಿ ಸಲ್ಲಿಸಲಾಗುವುದು. 

ಶೀಘ್ರದಲ್ಲಿ ದರ ಕಡಿಮೆಯಾಗಲಿದೆ ಎಂದು ಭರವಸೆ ನೀಡಿದ್ದಾರೆ. ಅಣ್ಣಪ್ಪ ನಾಯ್ಕ, ರವಿ ನಾಯ್ಕ, ಶೇಖರ ಬೀರಾ ಮುಕ್ರಿ, ಗಣೇಶ ಮುಕ್ರಿ, ಈಶ್ವರ ಪಟಗಾರ, ವತ್ಸಲ ನಾಯ್ಕ, ಶಿಲ್ಪ ನಾಯ್ಕ, ಕಾರ್ತಿಕ ನಾಯ್ಕ, ದಿನೇಶ್ ನಾಯ್ಕ, ರವಿ ನಾಯ್ಕ, ಗಜಾನನ ನಾಯ್ಕ, ಉದಯ ಲಕ್ಷ್ಮೀಕಾಂತ ನಾಯ್ಕ ಇನ್ನಿತರರು ಇದ್ದರು