ಬೆಂಗಳೂರು [ಆ.18]: ಮೈತ್ರಿ ಸರ್ಕಾರ ಪತನಗೊಳ್ಳುವಲ್ಲಿ ಪಾತ್ರ ವಹಿಸಿದ್ದ ಜೆಡಿಎಸ್‌ನ ಅನರ್ಹ ಶಾಸಕ ಕೆ.ಗೋಪಾಲಯ್ಯ ವಿರುದ್ಧ ಮಹಾಲಕ್ಷ್ಮೀ ಲೇಔಟ್‌ ವಿಧಾನಸಭೆ ಕ್ಷೇತ್ರದಲ್ಲಿ ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಜೆಡಿಎಸ್‌ ತಂತ್ರಗಾರಿಕೆ ನಡೆಸಿದ್ದು, ಎರಡನೇ ಬಾರಿಗೆ ಕ್ಷೇತ್ರದ ಕಾರ್ಯಕರ್ತರ ಸಭೆ ಆಯೋಜಿಸಿದೆ.

ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ನೇತೃತ್ವದಲ್ಲಿ ಮಹಾಲಕ್ಷ್ಮೀ ಲೇಔಟ್‌ ವಿಧಾನಸಭೆ ಕ್ಷೇತ್ರದ ಕಾರ್ಯಕರ್ತರ ಸಭೆಯನ್ನು ಭಾನುವಾರ ಕರೆಯಲಾಗಿದೆ. ಇತ್ತೀಚೆಗಷ್ಟೆ ಮಹಾಲಕ್ಷ್ಮೀ ಲೇಔಟ್‌ ಕ್ಷೇತ್ರದ ಕಾರ್ಯಕರ್ತರ ಮತ್ತು ನಾಯಕರ ಸಭೆ ನಡೆಸಿದ ದೇವೇಗೌಡರು ಸ್ಥಳೀಯ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದರು. ಇದೀಗ ಮತ್ತೊಮ್ಮೆ ಸಭೆ ಕರೆಯಲಾಗಿದ್ದು, ಕಾರ್ಯಕರ್ತರ ಅಭಿಮತಗಳನ್ನು ಸ್ವೀಕರಿಸಲಿದ್ದಾರೆ.

ಮಹಾಲಕ್ಷ್ಮೀ ಲೇಔಟ್‌ನಲ್ಲಿನ ದೇವಮ್ಮ ಕರಿಗೌಡ ಕನ್ವೆನ್ಷನ್‌ ಹಾಲ್‌ನಲ್ಲಿ ಸಭೆ ನಡೆಯಲಿದೆ. ಸಭೆಯಲ್ಲಿ ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ಜೆಡಿಎಸ್‌ನ ಬೆಂಗಳೂರು ನಗರ ಘಟಕ ಅಧ್ಯಕ್ಷ ಪ್ರಕಾಶ್‌, ವಿಧಾನ ಪರಿಷತ್‌ ಸದಸ್ಯ ಟಿ.ಎ.ಶರವಣ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ. ಸಭೆಯಲ್ಲಿ ಗೋಪಾಲಯ್ಯ ಪಕ್ಷಕ್ಕೆ ಮಾಡಿರುವ ದ್ರೋಹದ ಕುರಿತು ಸಮಾಲೋಚನೆ ನಡೆಸಿ ಪರ್ಯಾಯ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ವಿಸ್ತೃತವಾಗಿ ಸಮಾಲೋಚನೆ ನಡೆಸಲಿದ್ದಾರೆ.

ಇತ್ತೀಚೆಗಷ್ಟೆಅನರ್ಹಗೊಂಡಿರುವ ಬೆಂಗಳೂರಿನ ಶಾಸಕರ ಕ್ಷೇತ್ರಗಳ ಸಭೆಯನ್ನು ದೇವೇಗೌಡ ಅವರು ನಡೆಸಿದ್ದರು. ಸಮ್ಮಿಶ್ರ ಪತನಕ್ಕೆ ಕಾರಣವಾಗಿರುವ ಬೆಂಗಳೂರಿನ ಅನರ್ಹ ಶಾಸಕರು ಯಾವುದೇ ಕಾರಣಕ್ಕೂ ಮುಂದಿನ ಚುನಾವಣೆಯಲ್ಲಿ ಗೆಲ್ಲಬಾರದು ಹಾಗೂ ಅವರ ರಾಜಕೀಯ ಭವಿಷ್ಯಕ್ಕೆ ಪೆಟ್ಟುಕೊಡುವಂತೆ ಕಾರ್ಯತಂತ್ರ ಮಾಡಲು ಸಿದ್ಧತೆ ನಡೆಸಿದ್ದಾರೆ ಎಂದು ಹೇಳಲಾಗಿದೆ.