ಮಂಡ್ಯ [ಸೆ.18]:  ನಿಖಿಲ್‌ ಕುಮಾರಸ್ವಾಮಿ ಒಳ್ಳೆ ಹುಡುಗ. ರಾಜಕಾರಣ ಮಾಡೋದಿಕ್ಕೆ ಸಾಕಷ್ಟುಸಮಯವಿತ್ತು. ಜಿಲ್ಲೆಯ ಕೆಲವರು ಅವನನ್ನು ಕರೆತಂದು ಸೋಲಿಸಿದರು ಎಂದು ಮಾಜಿ ಸಚಿವ ಎನ್‌ .ಚಲುವರಾಯಸ್ವಾಮಿ ಜಿಲ್ಲೆಯ ಜೆಡಿಎಸ್‌ ಶಾಸಕರ ವಿರುದ್ಧ ಕಿಡಿಕಾರಿದರು.

ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ನಿಖಿಲ್ ಎಲ್ಲೋ ಒಂದು ಕಡೆ ರಾಜಕಾರಣ ಮಾಡಿಕೊಳ್ಳುತ್ತಿದ್ದ. ಕೆಲವರು ದೊಡ್ಡದಾಗಿ ಮೀಸೆ ತಿರುಗಿ ಅವನನ್ನು ಕರೆತಂದು ಸೋಲಿಸಿದರು. ಪುಟ್ಟರಾಜು ಚುನಾವಣೆ ಜವಾಬ್ದಾರಿ ತಗೆದುಕೊಂಡಿದ್ದರು ಎನ್ನವ ಮೂಲಕ ಪರೋಕ್ಷವಾಗಿ ನಿಖಿಲ್  ಸೋಲಿಗೆ ಪುಟ್ಟರಾಜು ಕಾರಣ ಎಂದು ಆರೋಪಿಸಿದರು. ನನಗೂ ಕುಮಾರಸ್ವಾಮಿಗೂ ವೈರತ್ವ ಇದೆ. ಹಾಗಂತ ನಿಖಿಲ… ವಿರುದ್ಧವೂ ವೈರತ್ವ ಸಾಧಿಸಲು ಆಗಲ್ಲ. ಅವನೂ ನನ್ನ ಮಗ ಇದ್ದಂತೆ. ಸಿ.ಎಸ್‌.ಪುಟ್ಟರಾಜು ಜಿಲ್ಲೆಯ ಪ್ರಶ್ನಾತೀತ ನಾಯಕ. ರಾಜ್ಯಕ್ಕೆ ದೇವೇಗೌಡ್ರು ಹೆಂಗೋ ಮಂಡ್ಯಕ್ಕೆ ಸಿ.ಎಸ್‌.ಪುಟ್ಟರಾಜು ಹಂಗೇ ಎಂದರು.

ಚುನಾವಣೆಯಲ್ಲಿ ಬುದ್ಧಿ ಕಲಿಸಿಲ್ವಾ?. ಹಾಗೆ ನಾರಾಯಣಗೌಡ್ರುಗೂ ಬುದ್ದಿ ಕಲಿಸ್ತಾರೆ ಅಂತಾರೆ. ಲೋಕಸಭೆ ಚುನಾವಣೆಯಲ್ಲಿ ಇವರೆಗೂ ಜನ ಬುದ್ಧಿ ಕಲಿಸಲಿಲ್ವಾ. ಪುಟ್ಟರಾಜು ಕ್ಷೇತ್ರದಲ್ಲಿ ನಿಖಿಲ್ಗೆ ಎಷ್ಟುಲೀಡ್‌ ಕೊಟ್ಟಿದ್ದಾರೆ. ಸಚಿವರಾಗಿದ್ದಾಗ ಕುದುರೆ ಮೇಲಿದ್ದರು, ಮಾತನಾಡುತ್ತಿದ್ದರು. ಈಗ ಕುದುರೆ ಮೇಲಿಂದ ಇಳಿದ ಮೇಲೆ ಮಾತನಾಡುವುದನ್ನು ಎಲ್ಲೂ ನೋಡಿಲ್ಲ ಎಂದು ಲೇವಡಿ ಮಾಡಿದರು.

ನಿಮ್ಮ ಜಿಲ್ಲೆಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಖಿಲ್‌ಗೆ ಎರಡೂವರೆ ಲಕ್ಷ ಲೀಡ್‌ ಬರದಿದ್ದರೆ ರಾಜಕೀಯ ನಿವೃತ್ತಿ ಅಂದಿದ್ದರು. ಆ ಮೇಲೆ ತಮಾಷೆಗೆ ಅಂದೆ ಅಂತಾರೆ. ರಾಜಕಾರಣದಲ್ಲಿ ಸ್ವಲ್ಪ ಹಿಡಿತದಲ್ಲಿ ಮಾತನಾಡಬೇಕು. ಜಿಲ್ಲೆಗೆ 8 ಸಾವಿರ ಕೋಟಿ ಕೊಟ್ಟಿದ್ದೀವಿ ಅಂತಾರೆ. ಎಲ್ಲಿ ಟೆಂಡರ್‌ ಆಗಿದೆ?. ಯಾವ ಕೆಲಸ ಪ್ರಾರಂಭವಾಗಿದೆ?. ಇದಕ್ಕೆಲ್ಲ ಕೆ.ಆರ್‌.ಪೇಟೆ ಚುನಾವಣೆಗೂ ಮುನ್ನ ಕೊಡಬೇಕಲ್ವ ಎಂದು ಪ್ರಶ್ನೆ ಮಾಡಿದರು.