ಹುಬ್ಬಳ್ಳಿ(ಮಾ.06): ರಾಜ್ಯದ ಬೊಕ್ಕಸದ ಸ್ಥಿತಿ ಚಿಂತಾಜನಕವಾಗಿದೆ ಎಂಬುದು ರಾಜ್ಯ ಬಜೆಟ್‌ ಮಂಡನೆಯಿಂದ ಬಯಲಾಗಿದೆ ಎಂದು ಜೆಡಿಎಸ್‌ ಮುಖಂಡ ವೈಎಸ್‌ವಿ ದತ್ತಾ ಟೀಕಿಸಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳು ಸತ್ಯ ಹೇಳಿದ್ದಾರೆ. ಹೀಗಾಗಿ ಅವರ ಧೈರ್ಯವನ್ನು ಮೆಚ್ಚಿಕೊಳ್ಳಬೇಕು. ಕೇಂದ್ರ ಸರ್ಕಾರದಿಂದ 21 ಸಾವಿರ ಕೋಟಿ ಹಣ ಬರಬೇಕಿತ್ತು. ಆ ಹಣ ಖೋತಾ ಆಗಿದೆ ಎಂದು ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಹದಾಯಿ ವಿಷಯವನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿಲ್ಲ ಎಂಬುದು ಈ ಯೋಜನೆಗೆ ಬರೀ 500 ಕೋಟಿ ರು. ಮೀಸಲಿಟ್ಟಿದ್ದೆ ಸಾಕ್ಷಿ ಎಂದ ಅವರು, ಮಹದಾಯಿಗಾಗಿ ಕನಿಷ್ಠವೆಂದರೂ 2 ಸಾವಿರ ಕೋಟಿ ರು. ಬಿಡುಗಡೆ ಮಾಡಬೇಕಿತ್ತು. ಮಹದಾಯಿಗೆ ಈಗಲೂ ಗೋವಾ ಸರ್ಕಾರ ಅಡ್ಡಿಪಡಿಸಬೇಕೆಂದು ಯೋಚಿಸುತ್ತಿದೆ. ಈ ಕಾರಣಕ್ಕಾಗಿ ಮಹದಾಯಿಗೆ ಎಷ್ಟು ಬೇಕೋ ಅಷ್ಟು ದುಡ್ಡನ್ನು ಒಂದೇ ಸಲ ಬಿಡುಗಡೆ ಮಾಡಿ ಕಾಮಗಾರಿ ಪೂರ್ಣಗೊಳಿಸಬೇಕು. ಇಲ್ಲದಿದ್ದಲ್ಲಿ ಮತ್ತೆ ತೊಂದರೆಯಾಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ ಎಂದು ನುಡಿದರು.

ಕೃಷ್ಣಾ ಮೇಲ್ದಂಡೆ, ಮಲಪ್ರಭಾ ಸೇರಿದಂತೆ ಯಾವೊಂದು ನೀರಾವರಿ ಯೋಜನೆಗೂ ಹಣವನ್ನೇ ನೀಡಿಲ್ಲ. ಇವರಿಗೆ ಆದಾಯದ ಮೂಲವೇ ಇಲ್ಲದಂತಾಗಿದೆ. ಅಬಕಾರಿ, ನೋಂದಣಿ ಮತ್ತು ಮುದ್ರಾಂಕವನ್ನೇ ರಾಜ್ಯ ಸರ್ಕಾರ ನೆಚ್ಚಿಕೊಂಡಿದೆ. ಹಳೆಯ ಪುಸ್ತಕವನ್ನು ಹೊಸದಾಗಿ ಪ್ರಿಂಟ್‌ ಮಾಡಿ ಓದಿದಂತಾಗಿದೆ ಎಂದು ಹೇಳಿದ್ದಾರೆ.