ಮೈಸೂರು(ಮಾ.01): ‘ತವರು ಜಿಲ್ಲೆಯಲ್ಲಿಯೇ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಜೆಡಿಎಸ್‌ ಶಕ್ತಿಯನ್ನು ತೋರಿಸಿದ್ದೇವೆ, ಮೈತ್ರಿ ಗೊಂದಲಕ್ಕೆ ಸಿದ್ದರಾಮಯ್ಯ ಅವರೇ ಕಾರಣ’ ಎಂದು ಜೆಡಿಎಸ್‌ ಶಾಸಕ ಸಾ.ರಾ. ಮಹೇಶ್‌ ಆರೋಪಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಜಿ.ಟಿ. ದೇವೇಗೌಡ ಮತ್ತು ವಿಧಾನ ಪರಿಷತ್‌ ಸದಸ್ಯ ಸಂದೇಶ್‌ ನಾಗರಾಜ್‌ ಚುನಾವಣಾ ಸಭೆಗೆ ಆಗಮಿಸದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಜೊತೆ ಮೈತ್ರಿ ಆಗಲು ಕಾರಣವಾಯಿತು. ಇಲ್ಲದಿದ್ದರೆ ಸ್ವತಂತ್ರವಾಗಿ ಸ್ಪರ್ಧಿಸುತ್ತಿದ್ದೆವು. ಮುಂದಿನ ಬಾರಿ ಕಾಂಗ್ರೆಸ್‌ಗೆ ಮೇಯರ್‌ ಸ್ಥಾನ ನೀಡುತ್ತೇವೆ. ಈ ಬಾರಿಯೇ ಅವರಿಗೆ ಮೇಯರ್‌ ಸ್ಥಾನ ಬಿಟ್ಟುಕೊಡಲಾಗುತ್ತಿತ್ತು. ಆದರೆ ಅವರು ಪಕ್ಷದ ಬಗ್ಗೆ ಹಗುರವಾಗಿ ಮಾತನಾಡಿದ್ದರಿಂದ ಕೊಡಲಿಲ್ಲ. ನಮ್ಮ ಶಕ್ತಿ ತೋರಿಸಲು ನಮ್ಮ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆವು ಅಷ್ಟೆ ಎಂದರು.

ಶಾಸಕ ಸಾರಾ, ಡಿಸಿ ರೋಹಿಣಿ ನಡುವೆ ‘ಮಾಸ್ಕ್‌ ಟಾಕ್‌’!

ಜೆಡಿಎಸ್‌ಗೆ ಬರಲಿ:

ನಾವು ಯಾವ ಪಕ್ಷದಲ್ಲಿಯೂ ಬೆಂಕಿ ಹಚ್ಚಿಲ್ಲ. ಎಲ್ಲವೂ ಆ ಕ್ಷಣದಲ್ಲಿ ಕೈಗೊಡ ನಿರ್ಧಾರ. ಇದರಿಂದ ಶಾಸಕ ತನ್ವೀರ್‌ಸೇಠ್‌ಗೆ ಸಮಸ್ಯೆಯಾದರೆ ಅವರು ಜೆಡಿಎಸ್‌ಗೆ ಬರಲಿ. ಕಾಂಗ್ರೆಸ್‌ನಲ್ಲಿ ತೊಂದರೆಯಾಗಿ ಬಂದರೆ ಜೆಡಿಎಸ್‌ ಅವರನ್ನು ಸ್ವಾಗತಿಸುತ್ತದೆ ಎಂದರು.

ಡಿಕೆಶಿ ಫೋನ್‌ ಮಾಡಿದ್ರು:

ಬಿಜೆಪಿ ಬಳಗ ನನ್ನ ಕಚೇರಿಗೆ ಬಂದಿತ್ತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಕೂಡಾ ಎರಡು ಬಾರಿ ಫೋನ್‌ನಲ್ಲಿ ಮಾತನಾಡಿದ್ದರು. ತನ್ವೀರ್‌ ಸೇಠ್‌ ಸಹ ನನ್ನೊಂದಿಗೆ ಮಾತನಾಡಿದ್ದರು. ಎಲ್ಲವೂ ಕುಮಾರಸ್ವಾಮಿ ಅವರಿಗೆ ತಿಳಿದಿತ್ತು. ಧ್ರುವನಾರಾಯಣ್‌ ಕೂಡ ಕುಮಾರಸ್ವಾಮಿ ಜತೆ ಮಾತುಕತೆ ನಡೆಸಿದ್ದರು. ಕೊನೆ ಕ್ಷಣದಲ್ಲೂ ಡಿಕೆಶಿ ಮತ್ತೆ ಫೋನ್‌ ಮಾಡಿದ್ದರು ಎಂದರು.