ಮುಖ್ಯಮಂತ್ರಿ ಗಳು ದೇವೇಗೌಡರ ಮನೆ ಭೇಟಿ ನೀಡಿದ್ದು ಸಿಎಂ ಅವರ ಹೃದಯ ವೈಶಾಲ್ಯತೆಯನ್ನು ತೋರಿಸುತ್ತದೆ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಕೆ ಕುಮಾರಸ್ವಾಮಿ ಹೇಳಿಕೆ
ಹಾಸನ (ಆ.08): ಮುಖ್ಯಮಂತ್ರಿ ಗಳು ದೇವೇಗೌಡರ ಮನೆ ಭೇಟಿ ನೀಡಿದ್ದು ಸಿಎಂ ಅವರ ಹೃದಯ ವೈಶಾಲ್ಯತೆಯನ್ನು ತೋರಿಸುತ್ತದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ಕೆ ಕುಮಾರಸ್ವಾಮಿ ಹೇಳಿದರು.
ಹಾಸನದಲ್ಲಿಂದು ಮಾತನಾಡಿದ ಕುಮಾರಸ್ವಾಮಿ ನಾನು ಬೊಮ್ಮಾಯಿ ಅವರ ಹೃದಯ ವಿಶಾಲತೆಯನ್ನು ಸ್ವಾಗತಿಸುತ್ತೇನೆ. ದೇವೇಗೌಡರು ರಾಜ್ಯದ ಹಿರಿಯ ಮುತ್ಸದಿ ಎಂಬ ಕಾರಣಕ್ಕೆ ಭೇಟಿ ನೀಡಿದ್ದಾರೆ. ಅವರ ಭೇಟಿಗೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಹೇಳಿದರು.
'ಸಿಎಂ ಆದ ಕೂಡಲೆ ದೇವೇಗೌಡರ ಭೇಟಿ ಅಗತ್ಯವೇನಿತ್ತು, ಹೊಂದಾಣಿಕೆ ರಾಜಕೀಯ ಬೇಡ'
ಎಸ್.ಆರ್ ಬೊಮ್ಮಾಯಿ ಸರ್ಕಾರ ಕೆಡವಿದ ದೇವೇಗೌಡರು ಎಂದು ಹಾಸನ ಶಾಸಕ ಪ್ರೀತಂ ಹೇಳಿದ್ದಾರೆ. ಇದು ಅವರ ರಾಜಕೀಯ ಅನುಭವದ ಕೊರತೆ ತೋರಿಸುತ್ತದೆ.
ಎಸ್.ಆರ್ ಬೊಮ್ಮಾಯಿ ಸರ್ಕಾರದಲ್ಲಿ ನಾನು ಶಾಸಕನಾಗಿದ್ದೆ. ಆ ಸಂದರ್ಭ ಪ್ರೀತಂ ಗೌಡ ಇನ್ನು 5, 6 ವರ್ಷದ ಬಾಲಕ. ಅವರಿಗೆ ಸರ್ಕಾರ ಬೀಳಿಸಿದ್ದು ಯಾರು ಎಂದು ಹೇಗೆ ತಿಳಿದಿತ್ತು ಎಂದು ಪ್ರಶ್ನೆ ಮಾಡಿದ್ದಾರೆ.
ಆ ವಿಷಯವನ್ನು ಯಾವ ಪುಸ್ತಕದಿಂದ ಓದಿದ್ದಾರೆ.? ನಮ್ಮ ಜಿಲ್ಲೆಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ ಎಂಬ ನೋವು ನಮಗೂ ಇದೆ. ಕೊಡಗಿನ ಬೋಪಣ್ಣರಂತ ಹಿರಿಯ ಶಾಸಕರಿಗೇ ಸಚಿವ ಸ್ಥಾನ ಸಿಕ್ಕಿಲ್ಲ. ಬೋಪಣ್ಣನವರಿಗಾದರೂ ಸಚಿವ ಸ್ಥಾನ ನೀಡಬೇಕಿತ್ತು ಎಂದು ಕುಮಾರಸ್ವಾಮಿ ಹೇಳಿದರು.
