ಹಾಸನ [ಸೆ.17]:  ಜಿಲ್ಲೆಯಲ್ಲಿ ಸುಮಾರು 500 ಕೋಟಿಗೂ ಅಧಿಕ ಪ್ರಮಾಣದಲ್ಲಿ ಹಾನಿ ಉಂಟಾಗಿದೆ. ಆದರೆ, ಇದು ವರೆಗೂ ರಾಜ್ಯ ಸರ್ಕಾರ ಬಿಡಿಗಾಸು ಬಿಡುಗಡೆ ಮಾಡಿಲ್ಲ. ಜಿಲ್ಲೆಯ ಬಗ್ಗೆ ತಾತ್ಸಾರ ಮನೋಭಾವನೆ ಮುಂದುವರಿದರೇ ಪ್ರತಿಭಟನೆ ಮಾಡಲಾಗುವುದು ಎಂದು ಮಾಜಿ ಸಚಿವ ಎಚ್‌.ಡಿ. ರೇವಣ್ಣ ಎಚ್ಚರಿಕೆ ನೀಡಿದರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹೇಳುವವರು, ಕೇಳುವವರು ಯಾರೂ ಇಲ್ಲದಂತಾಗಿದೆ. ಜಿಪಂಗೆ ನೆರೆ ಪರಿಹಾರಕ್ಕೆ ನೀಡಿದ್ದ 60 ಲಕ್ಷ ರು.ಗಳನ್ನು ವಾಪಸ್‌ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿಗಳನ್ನು ಕೇಳಿದರೆ ಐ ಯಾಮ್‌ ಹೆಲ್ಪ್‌ ಲೆಸ್‌ ಎನ್ನುತ್ತಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಿಮ್ಮ ಜಿಲ್ಲೆಯ ಬಗೆಗಿನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

14 ತಿಂಗಳಲ್ಲಿ ಕೆಲವರು ಜಿಲ್ಲೆಗೆ ಏನು ಆಗಿಲ್ಲ ಎಂದು ಹೇಳುತ್ತಾರೆ. ತೆಂಗು ಬೆಳೆ ಪರಿಹಾರ 200 ಕೋಟಿ ರು., ಆಲೂಗಡ್ಡೆ ಬಿತ್ತನೆ ಬೀಜ ಮತ್ತು ಔಷಧಿಗಳಿಗೆ ಸಬ್ಸಿಡಿ ನೀಡಲು 700 ಕೋಟಿ ರು. ಜಿಲ್ಲಾ ಸಹಕಾರ ಬ್ಯಾಂಕ್‌ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾವಿರ ಕೋಟಿ ರು. ಸಾಲ ಮನ್ನಾ ಮಾಡಿದ್ದು ಯಾರು ಎಂದು ಪ್ರಶ್ನಿಸಿದ ರೇವಣ್ಣ, ಹಾಸನದಲ್ಲಿ ಹವಾಯ್‌ ಚಪ್ಪಲಿ ಹಾಕಿಕೊಂಡು ಓಡಾಡುವವರು ಬೆಂಗಳೂರಿನಲ್ಲಿ ಬೂಟು ಹಾಕಿಕೊಂಡು ತಿರುಗಾಡುತ್ತಾರೆ ಎಂದು ಪರೋಕ್ಷವಾಗಿ ಮಾಜಿ ಶಾಸಕ ಪುಟ್ಟೇಗೌಡರನ್ನು ಕುಟುಕಿದರು.