ಹಾಸನ [ಡಿ. 24]: ಮಂಗಳೂರಿನಲ್ಲಿ ನಡೆದ ಗೋಲಿಬಾರ್ ಬಗ್ಗೆ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿಯೇ ತನಿಖೆ ನಡೆಯಲಿ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.  

ಹಾಸನದಲ್ಲಿ ಮಾತನಾಡಿದ ಮಾಜಿ ಸಚಿವ ಎಚ್ ಡಿ ರೇವಣ್ಣ ಮಂಗಳೂರು ಪ್ರಕರಣದ ಬಗ್ಗೆ ನಿಷ್ಪಕ್ಷಪಾತವಾದ ತನಿಖೆ ನಡೆಯಲಿ ಎಂದರು. 

ಮಂಗಳೂರಲ್ಲಿ ಪ್ರತಿಭಟನೆ ವೇಳೆ ಹಿಂಸಾಚಾರ ನಡೆದಿದೆ. ಆದರೆ ಬೆಂಗಳೂರಿನಲ್ಲಿ ಸಾವಿರಾರು ಜನರು ಸೇರಿ ನಡೆಸಿದ ಪ್ರತಿಭಟನೆ ಶಾಂತವಾಗಿರಲಿಲ್ಲವೇ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಏಕೆ ಅಂಜಿಕೆ ಇದೆ. ಈ ಹಿಂಸಾಚಾರದ ಬಗ್ಗೆ ನ್ಯಾಯಾಂಗ ತನಿಖೆ ನಡೆಸಲಿ ಎಂದು ರೇವಣ್ಣ ಹೇಳಿದರು. 

ಮಂಗಳೂರು ಗೋಲಿಬಾರ್ ಪ್ರಕರಣದ ಬಗ್ಗೆ ಇದೇ ತಿಂಗಳ 28 ರಂದು ಹಾಸನದಲ್ಲಿ ಜೆಡಿಎಸ್ ನಿಂದ ಬೃಹತ್ ಪ್ರತಿಭಟನೆ ನಡೆಸಲಾಗುವುದು. ಸರ್ಕಾರಕ್ಕೆ ದೇಶದಲ್ಲಿ ದಿಢೀರ್ ಆಗಿ ಈ ಕಾಯ್ದೆಯನ್ನು ಜಾರಿ ಮಾಡುವ ಅಗತ್ಯ ಏನಿತ್ತು.? ಯಾವ ಉದ್ದೇಶದಿಂದ ಕಾಯ್ದೆ ಜಾರಿ  ಮಾಡಿದ್ದಾರೋ ಗೊತ್ತಿಲ್ಲ. ಕಾಯಿದೆ ಬಗ್ಗೆ ಜನರಲ್ಲಿ ಜಾಗೃತಿ ಮೂಡುವವರೆಗೂ ರಾಜ್ಯದಲ್ಲಿ ಅನುಷ್ಠಾನ ಮಾಡುವುದು  ಅಗತ್ಯವಿಲ್ಲ ಎಂದು ರೇವಣ್ಣ ಹೇಳಿದರು. 

ಮಂಗಳೂರಿನಲ್ಲಿ ನಡೆದ ಗಲಭೆ ಸಂಬಂಧ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಬಿಡುಗಡೆ ಮಾಡಿದ್ದು, ತಪ್ಪು ಮಾಡಿದವರ ವಿರುದ್ಧ ಕ್ರಮ ಬೇಡ ಎಂದು ಯಾರು ಹೇಳಿದ್ದಾರೆ. ಯು.ಟಿ.ಖಾದರ್ ಹೇಳಿಕೆಯಿಂದಲೇ ಗಲಭೆ ನಡೆದಿದೆ ಎನ್ನಲಾಗುತ್ತಿದ್ದು, ಆದರೆ ಅವರ ಕ್ಷೇತ್ರದಲ್ಲಿ ಮಾತ್ರ ಏಕೆ ಗಲಾಟೆ ನಡೆದಿಲ್ಲ. ಬಿಜೆಪಿ ನಾಯಕರೂ ಕೂಡ ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಅವರು ಹೇಳಿರುವುದು ತಪ್ಪಲ್ಲವೇ ಎಂದು ರೇವಣ್ಣ ಪ್ರಶ್ನೆ ಮಾಡಿದ್ದಾರೆ. 

ಓಟಿಗಾಗಿ ಯಾರೂ ರಾಜಕೀಯ ಮಾಡಬಾರದು. ಹಿಂದೂ ಮುಸ್ಲಿಂರನ್ನು ಸಮಾನರಾಗಿ ಕಾಣಬೇಕು. ಈ ವಿಚಾರದಲ್ಲಿ ಜೆಡಿಎಸ್,  ಕಾಂಗ್ರೆಸ್ ಮುಖಂಡರು ಜೊತೆಯಾಗಿ ಸದನದಲ್ಲಿ ಹೋರಾಟ ಮಾಡುತ್ತೇವೆ. ಇಂತಹ ವಿಚಾರಗಳಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಆದ್ದರಿಂದ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ಈ ಬಗ್ಗೆ ತನಿಖೆ ನಡೆಸಲಿ ಎಂದು ಎಚ್ ಡಿ ರೇವಣ್ಣ ಹೇಳಿದರು. 

ಇನ್ನು ರಾಜ್ಯದಲ್ಲಿ ಯಡಿಯೂರಪ್ಪ ಅಧಿಕಾರಕ್ಕೆ ಬಂದಾಗಲೆಲ್ಲಾ ಗುಂಡು ಹೊಡೆಸುವುದು ಆಗುತ್ತದೆ. ಹಿಂದೆ ಅಧಿಕಾರಕ್ಕೆ ಬಂದಾಗ ರೈತರ ಮೇಲೆ  ಗೋಲಿಬಾರ್ ಮಾಡಿಸಿದ್ದರು. ಈಗ ಅಲ್ಪ ಸಂಖ್ಯಾತರ ಮೇಲೆ ಗುಂಡು ಹೊಡೆಸಿದ್ದಾರೆ.  ಮತ ಹಾಕಿಲ್ಲ ಎಂದು ಗುಂಡು ಹೊಡೆಸುವುದು ಸರಿಯೇ ಎಂದರು.