ಯಡಿಯೂರಪ್ಪ ಸಿಎಂ ಆಗಿ ಮುಂದುವರೆಯಲಿ: ಜೆಡಿಎಸ್ ನಾಯಕ H D ರೇವಣ್ಣ
ನಾವ್ ಎಲ್ಲ ಮೈತ್ರಿ ನೋಡಿ ಆಗಿದೆ| ನನ್ನನ್ನು ಬಿಜೆಪಿಯವರು ಯಾರು ಭೇಟಿ ಮಾಡಿಲ್ಲ|ನಮಗೆ ಯಾವ ಸಿಎಂ, ಡಿಸಿಎಂ ಬೇಡ, ಎಲ್ಲವನ್ನೂ ನೋಡಿ ಆಗಿದೆ| ಗ್ರಾಪಂ ಚುನಾವಣೆ ನಡೆಸದಿದ್ದರೇ ಪ್ರಜಾಪ್ರಭುತ್ವದ ಕಗ್ಗೂಲೆ| ಸರ್ಕಾರ ಎಲೆಕ್ಷನ್ ಅಂದಾಗ ಕೊರೋನಾ ಎಂದು ಸಬೂಬು ಹೇಳುತ್ತದೆ. ಸರ್ಕಾರದ ರಬ್ಬರ್ ಸ್ಟಾಂಪ್‌ಗಳ ಹಾಗೆ ಜಿಲ್ಲಾಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ|
ಹಾಸನ(ಮೇ.30): ನನ್ನನ್ನು ಮಾಜಿ ಸಚಿವ ಉಮೇಶ್ ಕತ್ತಿ ಸೇರಿದಂತೆ ಬಿಜೆಪಿಯ ಯಾವ ನಾಯಕರು ಭೇಟಿ ಮಾಡಿಲ್ಲ, ನಮಗೆ ಯಾವ ಅಧಿಕಾರವೂ ಬೇಡ. ಎಲ್ಲವನ್ನು ಅನುಭವಿಸಿ ಆಗಿದೆ. ಜನರ ಅಭಿವೃದ್ಧಿ ಮುಖ್ಯವೋ ಹೊರತು ತಮಗೆ ಯಾವ ಅಧಿಕಾರದಾಸೆಯಿಲ್ಲ ಎಂದು ಜೆಡಿಎಸ್ ಹಿರಿಯ ಮುಖಂಡ ಎಚ್.ಡಿ. ರೇವಣ್ಣ ಹೇಳಿದ್ದಾರೆ.
ಬಿಜೆಪಿಯ 25 ಅತೃಪ್ತ ಶಾಸಕರು ಸಭೆ ನಡೆಸಿರುವ ಹಿನ್ನೆಲೆಯಲ್ಲಿ ತಮ್ಮನ್ನು ಕತ್ತಿ ಮತ್ತಿತರರು ಭೇಟಿ ಆಗಿದ್ದಾರೆ ಎಂಬುದು ಆಧಾರರಹಿತ. ನಾನು ಹಾಸನ, ಹೊಳೆನರಸೀಪುರದಲ್ಲೇ ಇದ್ದೀನಿ. ನನ್ನತ್ರ ಫೋನ್ ಇಲ್ಲ. ನನ್ನತ್ರ ಮುರುಕಲು ಫೋನ್ ಇದೆ ಅಷ್ಟೇ. ಈ ಮುರುಕಲು ಫೋನ್‌ಗೆ ಯಾರು ಫೋನ್ ಮಾಡ್ತಾರೆ ಹೇಳಿ ಎಂದು ತಮ್ಮದೇ ಶೈಲಿಯಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.
ಕೊರೋನಾ ಹೋರಾಟ ಬಿಟ್ಟು ಅಧಿಕಾರಕ್ಕೆ ಬಿಜೆಪಿ ಕಚ್ಚಾಟ: ಕಾಂಗ್ರೆಸ್ ಕಿಡಿ
ಬಿಜೆಪಿಯವರ ಅಸಮಾಧಾನ ಕಟ್ಕೊಂಡು ನನಗೇನು?
ನಮಗೆ ಯಾವ ಸಿಎಂ ಬೇಡ, ಡಿಸಿಎಂ ಬೇಡ. ಎಲ್ಲಾ ಮೈತ್ರಿ ನೋಡಿ ಆಗಿದೆ. ನಾನು ಅನೇಕ ಖಾತೆಗಳ ಸಚಿವನಾಗಿ ಕೆಲಸ ಮಾಡಿದ್ದೇನೆ. ತಮಗೆ ಪಕ್ಷ ಮತ್ತು ಜನರ ಹಿತ ಮುಖ್ಯವಾಗಿದೆ. ಯಾವ ಶಾಸಕರೂ ನನ್ನನ್ನ ಕರೆದೂ ಇಲ್ಲ, ಭೇಟಿನೂ ಮಾಡಿಲ್ಲ, ಬಿಜೆಪಿಯವರ ಅಸಮಾಧಾನ ಕಟ್ಕೊಂಡು ನನಗೇನು ಎಂದರು.
ಯಡಿಯೂರಪ್ಪ ಸಿಎಂ ಆಗಿ ಮುಂದುವರೆಯಲಿ
ಬೇಕಾದರೇ ಯಡಿಯೂರಪ್ಪ ಸಿಎಂ ಆಗಿದ್ದಾರೆ. ಅವರೇ ಮುಂದುವರೆಯಲಿ. ಎಲ್ಲರೂ ನಾವು ಕುಂತ್ರೇ, ನಿಂತ್ರೆ ತಪ್ಪು ಅಂತ ಪ್ರಚಾರ ಮಾಡ್ತಾರೆ. ನಮಗೆ ಸಾಕಾಗಿದೆ. ಈ ಶಾಸ್ತ್ರದವ್ರು ನನ್ನನ್ನು ಬಿಟ್ಟು ಹೋಗಿದ್ದಾರೆ. ಈಗ ಇವ್ರಅತ್ರ ಏನು ಸಿಗುತ್ತೆ ಅಂತ. ಸದ್ಯಕ್ಕೆ ಜನ ನೋಡ್ಕೊಂಡ್ರೆ ಸಾಕು ಎಂದರು. ಡಿ.ಕೆ. ಶಿವಕುಮಾರ್ ಸಿಎಂ, ನೀವು ಡಿಸಿಎಂ ಆಗೋ ಚಾನ್ಸ್ ಇದೆಯೇ ಎಂಬ ಪ್ರಶ್ನೆಗೆ ರೇವಣ್ಣ, ಅಯ್ಯೋ ನಂಗ್ಯಾವ ಆಸೆ ಇಲ್ಲ ಕಣಪ್ಪ ಎಂದು ಉತ್ತರಿಸಿದರು.
ಗ್ರಾಪಂ ಚುನಾವಣೆ ನಡೆಸದೇ ಕಗ್ಗೂಲೆ:
ಚುನಾವಣೆ ಆಯೋಗದವರು 6 ತಿಂಗಳ ಮುಂಚೆ ಗ್ರಾಪಂ ಚುನಾವಣೆ ನಡೆಸುವ ಬಗ್ಗೆ ಸಿದ್ಧತೆ ಮಾಡಿಕೊಳ್ಳದೇ ಚುನಾವಣೆ ಮುಂದೂಡುವುದು ಸರಿಯಲ್ಲ. ಅದು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದಂತೆ. ಚುನಾವಣಾ ಆಯೋಗ ಈ ವಿಚಾರದಲ್ಲಿ ಪಾರದರ್ಶಕವಾಗಿರಬೇಕು. ಕಳೆದ 11 ತಿಂಗಳ ಆಡಳಿತದಲ್ಲಿ ಬಿಜೆಪಿ ಸಂಪೂರ್ಣ ವಿಫಲವಾಗಿದೆ. ಸೋಲುವ ಭೀತಿಯಿಂದ ಬಿಜೆಪಿ ಚುನಾವಣೆ ಮುಂದೂಡುವ ರಾಜಕೀಯ ಮಾಡುತ್ತಿದೆ ಎಂದು ಟೀಕಿಸಿದರು.
ಚುನಾವಣಾ ಆಯೋಗ ಸರ್ಕಾರದ ಜೊತೆ ಶಾಮೀಲಾಗಿದೆ ಎಂಬ ಮಾತುಗಳು ಸಾರ್ವಜನಿಕವಾಗಿ ಕೇಳಿ ಬರುತ್ತಿದೆ. ಬಸ್ ಸೇರಿ ವಾಹನಗಳನ್ನು ಓಡಾಟ ಮಾಡೋದಕ್ಕೆ ಅವಕಾಶ ಕೊಡಲಾಗಿದೆ. ಆದರೆ, ಸರ್ಕಾರ ಎಲೆಕ್ಷನ್ ಅಂದಾಗ ಕೊರೋನಾ ಎಂದು ಸಬೂಬು ಹೇಳುತ್ತದೆ. ಸರ್ಕಾರದ ರಬ್ಬರ್ ಸ್ಟಾಂಪ್‌ಗಳ ಹಾಗೆ ಜಿಲ್ಲಾಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ. ಚುನಾವಣಾ ಆಯೋಗ ಜಿಲ್ಲಾಧಿಕಾರಿಗಳಿಂದ ಏಕೆ ಅಭಿಪ್ರಾಯ ಕೇಳಬೇಕಿತ್ತು ಎಂದು ಖಂಡಿಸಿದರು.