ಹುಬ್ಬಳ್ಳಿ(ಜ.01): ಪ್ರಾದೇಶಿಕ ಅಸಮಾನತೆ ಹೋಗಲಾಡಿಸುವ ನಿಟ್ಟಿನಲ್ಲಿ ಸಂಪ್ರದಾಯದಂತೆ ಚಳಿಗಾಲದ ವಿಧಾನಸಭೆ ಅಧಿವೇಶನವನ್ನು ಅಥವಾ ಮೈಲುಗಲ್ಲು ಎಂಬಂತೆ ಬಜೆಟ್ ಅಧಿವೇಶನವನ್ನು ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಸಲು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಆಗ್ರಹಿಸಿದ್ದಾರೆ. 

ಈ ಕುರಿತು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿರುವ ಅವರು, ಚಳಿಗಾಲದ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸಲು ಹಿಂದೇಟು ಹಾಕಿ ಬೆಂಗಳೂರಿನಲ್ಲಿ ಫೆಬ್ರವರಿಯಲ್ಲಿ ನಡೆಸಲು ತೀರ್ಮಾನಿಸಿರುವ ಕುರಿತು ತಿಳಿದು ಬಂದಿದೆ. ಅಲ್ಲದೆ, ಮುಂದಿನ 8-10 ದಿನಗಳಲ್ಲಿ ಬಜೆಟ್ ಅಧಿವೇಶನವನ್ನು ಕೂಡ ಬೆಂಗಳೂರಿನಲ್ಲಿಯೆ ನಡೆಸಲು ನಿರ್ಧರಿಸಿದ್ದಾಗಿ ತಿಳಿದಿದೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಬೆಳಗಾವಿಯಲ್ಲಿ ಗಡಿ ಸಮಸ್ಯೆ, ಮಹದಾಯಿ ವಿಷಯ, ಪ್ರವಾಹದ ಪರಿಹಾರ, ಪುನರ್ವಸತಿ ವಿಳಂಬ ಹಾಗೂ ಉತ್ತರ ಕರ್ನಾಟಕದ ನಿರ್ಲಕ್ಷ್ಯ ಸಂಬಂಧಿಸಿ ಅನೇಕ ಸಮಸ್ಯೆಗಳಿದ್ದು, ಅವನ್ನು ಪರಿಹರಿಸುವ ಸಂಬಂಧ ಚಳಿಗಾಲದ ಅಧಿವೇಶನ ಅಥವಾ ಮುಂದಿನ ಬಜೆಟ್ ಅಧಿವೇಶನವನ್ನು ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಸಲು ಸರ್ಕಾರ ಮುಂದಾಗಬೇಕು. ಸರ್ಕಾರ ಈ ನಿಲುವು ತಳೆದಲ್ಲಿ ಪ್ರಾದೇಶಿಕ ಅಸಮಾನತೆ ಹೋಗಲಾಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಂಡಂತಾಗುತ್ತದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.