'ಜೆಡಿಎಸ್ ಪಕ್ಷವೇ ಅಲ್ಲ, ಅದೊಂದು ಕಂಪನಿ : ಅಲ್ಲಿ ಲೆಕ್ಕಾಚಾರವೇ ಮೇಲು'
- ಜೆಡಿಎಸ್ ಪಕ್ಷವೇ ಅಲ್ಲ. ಅದೊಂದು ಕಂಪನಿ ಎಂದ ಚಾಮರಾಜನಗರ ಸಂಸದ ವಿ. ಶ್ರೀನಿವಾಸಪ್ರಸಾದ್
- ಒಂದೇ ಕುಟುಂಬದವರು ಇರುವ ಕಂಪನಿ ಅದು ಎಂದು ಗೇಲಿ
ಮೈಸೂರು(ಅ.26): ಜೆಡಿಎಸ್ (JDS) ಪಕ್ಷವೇ ಅಲ್ಲ. ಅದೊಂದು ಕಂಪನಿ ಎಂದು ಚಾಮರಾಜನಗರ (Chamarajanagar) ಸಂಸದ ವಿ. ಶ್ರೀನಿವಾಸಪ್ರಸಾದ್ (Shrinivas Prasad) ಕಟುವಾಗಿ ಟೀಕಿಸಿದರು.
ಮೈಸೂರಿನಲ್ಲಿ (Mysuru) ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ಶ್ರೀನಿವಾಸ ಪ್ರಸಾದ್ ಎಚ್.ಡಿ. ದೇವೇಗೌಡ (HD Devegowda), ಎಚ್.ಡಿ. ಕುಮಾರಸ್ವಾಮಿ (HD Kumaraswamy), ಎಚ್.ಡಿ. ರೇವಣ್ಣ (HD Revanna), ಅನಿತಾ, ಭವಾನಿ, ಪ್ರಜ್ವಲ್, ನಿಖಿಲ್- ಹೀಗೆ ಒಂದೇ ಕುಟುಂಬದವರು ಇರುವ ಕಂಪನಿ ಅದು ಎಂದು ಗೇಲಿ ಮಾಡಿದರು.
ದೇಶದ ಹಿರಿಯ ರಾಜಕಾರಣಿಯಾದ ಎಚ್.ಡಿ. ದೇವೇಗೌಡರಿಗೆ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಅತಂತ್ರ ಫಲಿತಾಂಶ ಬಯಸುತ್ತಾರೆ. ಅವರು ಯಾವಾಗ ಆ ರೀತಿಯ ಫಲಿತಾಂಶ ಬರುತ್ತದೆ ಎಂದು ಲೆಕ್ಕಾಚಾರ ಹಾಕಿಕೊಂಡು ಕುಳಿತಿರುತ್ತಾರೆ ಎಂದು ವಾಗ್ದಾಳಿ ನಡೆಸಿದರು.
ತಾಕತ್ತಿದ್ರೆ ಮೈಸೂರಿಗೆ ಬಂದು ಗೆದ್ದು ತೋರಿಸಿ: ಸಿದ್ದರಾಮಯ್ಯಗೊಂದು ಬಹಿರಂಗ ಸವಾಲು
ಜೆಡಿಎಸ್ ಪಕ್ಷ ಎರಡನೇ ಸ್ಥಾನ ಪಡೆದು ಎರಡೂ ಬಾರಿಯೂ ಮುಖ್ಯಮಂತ್ರಿಯಾಗಿಲ್ಲ (CM). ಮೂರನೇ ಸ್ಥಾನ ಪಡೆದೆ ಒಮ್ಮೆ ಬಿಜೆಪಿ (BJP), ಮತ್ತೊಮ್ಮೆ ಕಾಂಗ್ರೆಸ್ (Congress) ಬೆಂಬಲದಿಂದ ಸಿಎಂ ಆಗಿದ್ದಾರೆ. ನಾಲ್ಕೈದು ಜಿಲ್ಲೆಗಳಿಗೆ ಸೀಮಿತವಾಗಿರುವ ಅವರು ತಮ್ಮ ಇತಿಮಿತಿ ನೋಡಿಕೊಂಡು ಮಾತನಾಡಲಿ ಎಂದು ಸಲಹೆ ಮಾಡಿದರು.
ಇದೇ ವೇಳೆ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ
ಸಿದ್ದರಾಮಯ್ಯನಿಗೆ (Siddaramaiah) ಉಪಕಾರ ಸ್ಮರಣೆ ಎಂಬುದೇ ಇಲ್ಲ. ಕಾಂಗ್ರೆಸ್ ಸೇರಿದ ನಂತರ ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ (By election) ದೇವೇಗೌಡ, ರಾಜಶೇಖರಮೂರ್ತಿ, ಎಚ್.ಡಿ. ಕುಮಾರಸ್ವಾಮಿ ಸೇರಿಕೊಂಡು ಸೋಲಿಸುತ್ತಾರೆ. ಗೆಲುವು ಕಷ್ಟಇದೆ ಎಂದು ನೀವು, ಖರ್ಗೆ, ಧರ್ಮಸಿಂಗ್, ಕಾಗೋಡು ತಿಮ್ಮಪ್ಪ ನನ್ನ ಮನೆ ಬಾಗಿಲಿಗೆ ಬರಲಿಲ್ಲವೇ?. ಆವತ್ತು ನಾನು ಬರದಿದ್ದರೆ ಗೆಲ್ಲುತ್ತಿದ್ದರೇ? ಈ ಉಪಕಾರ ಸ್ಮರಣೆ ಬೇಡ‚ವೆ?. ಕಳೆದ ಚುನಾವಣೆಯಲ್ಲಿ ಬಾದಾಮಿಯಲ್ಲಿ 1600 ಮತಗಳಿಂದ ಗೆಲ್ಲದಿದ್ದರೆ ನಿಮ್ಮ ಕಥೆ ಏನಾಗುತ್ತಿತ್ತು? . ಚಾಮುಂಡೇಶ್ವರಿಯಲ್ಲಿ ಸೋತಿದ್ದ ನೀವು ಕಾಟೂರು ಜಮೀನಿಗೆ, ಸಿದ್ದರಾಮನಹುಂಡಿ ಅಥವಾ ಬೆಂಗಳೂರು ವಿಜಯನಗರ ಮನೆಗೆ ಹೋಗಿ ಹೋಗಿರಬೇಕಿತ್ತು ಎಂದರು.
ಸ್ಥಳೀಯ ಸಂಸ್ಥೆ ಚುನಾವಣೆ- ಬಿಜೆಪಿಯಲ್ಲಿ ಹೆಚ್ಚು ಆಕಾಂಕ್ಷಿಗಳಿಲ್ಲ
ಮೈಸೂರು- ಚಾಮರಾಜನಗರ ದ್ವಿಸದಸ್ಯ ಕ್ಷೇತ್ರದಿಂದ ಮೇಲ್ಮನೆಗೆ ನಡೆಯುವ ಚುನಾವಣೆಗೆ ಬಿಜೆಪಿ (BJP) ಟಿಕೆಟ್‌ಗೆ ಹೆಚ್ಚು ಆಕಾಂಕ್ಷಿಗಳಿಲ್ಲ. ಇರುವವರ ಪೈಕಿ ಯಾರಿಗೆ ಕೊಡಬೇಕು ಎಂಬುದನ್ನು ಹೈಕಮಾಂಡ್ ಗಮನಕ್ಕೆ ತರುವುದಾಗಿ ಚಾಮರಾಜನಗರ ಸಂಸದ ವಿ. ಶ್ರೀನಿವಾಸಪ್ರಸಾದ್ ಹೇಳಿದರು.
ನೀವು ಎಂಡಿಎ ಮಾಜಿ ಅಧ್ಯಕ್ಷ ಸಿ. ಬಸವೇಗೌಡರ ಪರ ಲಾಬಿ ಮಾಡುವಿರಾ? ಎಂದು ಪ್ರಶ್ನಿಗೆ ಉತ್ತರಿಸಿ, ನಮ್ಮದು ರಾಷ್ಟ್ರೀಯ ಪಕ್ಷ. ಟಿಕೆಟ್ ಕೊಡುವುದು, ಬಿಡುವುದು ಹೈಕಮಾಂಡ್‌ಗೆ ಬಿಟ್ಟದ್ದು. ಹೀಗಾಗಿ ನಾನು ಬಹಿರಂಗವಾಗಿ ಇಂಥವರಿಗೆ ಟಿಕೆಟ್ ಕೊಡಿ ಎಂದು ಹೇಳುವುದಿಲ್ಲ. ಆದರೆ ಹೈಕಮಾಂಡ್ ಕೇಳಿದಾಗ ಯಾರಿಗೆ ಕೊಟ್ಟರೆ ಸೂಕ್ತ ಎಂದು ಹೇಳುತ್ತೇನೆ ಎಂದರು.