ಪದೇ ಪದೇ ಅನಾರೋಗ್ಯದ ನೆಪವೊಡ್ಡಿ ನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ ಮುಂದೂಡುತ್ತಿರುವ ಮೇಯರ್‌ ವಿರುದ್ಧ ನಗರ ಪಾಲಿಕೆಯ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಸದಸ್ಯರು ಪ್ರತ್ಯೇಕವಾಗಿ ಬುಧವಾರ ಪ್ರತಿಭಟಿಸಿದರು.

ಮೈಸೂರು : ಪದೇ ಪದೇ ಅನಾರೋಗ್ಯದ ನೆಪವೊಡ್ಡಿ ನಗರ ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರ ಚುನಾವಣೆ ಮುಂದೂಡುತ್ತಿರುವ ಮೇಯರ್‌ ವಿರುದ್ಧ ನಗರ ಪಾಲಿಕೆಯ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಸದಸ್ಯರು ಪ್ರತ್ಯೇಕವಾಗಿ ಬುಧವಾರ ಪ್ರತಿಭಟಿಸಿದರು.

ನಗರಪಾಲಿಕೆ ವಿರೋಧಪಕ್ಷ ನಾಯಕರ ಕಚೇರಿ ಎದುರು ಕಾಂಗ್ರೆಸ್‌ ಸದಸ್ಯರು ಪ್ರತಿಭಟಿಸಿದರು. ನಗರ ಪಾಲಿಕೆಯ ದ್ವಾರದಲ್ಲಿ ಜೆಡಿಎಸ್‌ ಸದಸ್ಯರು ಪ್ರತಿಭಟಿಸಿದರು.

ನಾಲ್ಕು ಸ್ಥಾಯಿ ಸಮಿತಿಗಳಾದ ತೆರಿಗೆ ನಿರ್ಧರಣೆ, ಹಣಕಾಸು ಮತ್ತು ಅಪೀಲುಗಳಿಗಾಗಿ ಸ್ಥಾಯಿ ಸಮಿತಿ, ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಸ್ಥಾಯಿ ಸಮಿತಿ, ಪಟ್ಟಣ ಯೋಜನೆ ಮತ್ತು ಸುಧಾರಣೆ ಸ್ಥಾಯಿ ಸಮಿತಿ ಮತ್ತು ಲೆಕ್ಕಪತ್ರಗಳ ಸ್ಥಾಯಿ ಸಮಿತಿ ಚುನಾವಣೆಯನ್ನು ಎರಡು ಬಾರಿ ಮುಂದೂಡಲಾಗಿದೆ ಎಂದು ದೂರಿದರು.

ಎರಡು ಬಾರಿಯು ಮೇಯರ್‌ ಅವರು ಅನಾರೋಗ್ಯದ ನೆಪ ಹೇಳಿಕೊಂಡು ಮುಂದೂಡಿದ್ದಾರೆ. ಮಾಚ್‌ರ್‍ ಅಂತ್ಯದೊಳಗೆ ನಗರ ಪಾಲಿಕೆ ಬಜೆಟ್‌ ಮಂಡಿಸಬೇಕು. ಆದರೆ ಈವರೆಗೂ ಸ್ಥಾಯಿ ಸಮಿತಿ ಅಧ್ಯಕ್ಷರನ್ನು ನೇಮಿಸಿಲ್ಲ. ಇದರಿಂದಾಗಿ ಆಡಳಿತ ಯಂತ್ರ ಸಂಪೂರ್ಣ ಕುಸಿದಿದೆ ಎಂದು ಅವರು ಆರೋಪಿಸಿದರು.

ಸ್ಥಾಯಿ ಸಮಿತಿ ಚುನಾವಣೆ ಮಾತ್ರವಲ್ಲದೆ, ಕೌನ್ಸಿಲ್‌ ಸಭೆಯನ್ನು ಮುಂದೂಡಿಕೊಂಡು ಕಾಲಹರಣ ಮಾಡುತ್ತಿದ್ದಾರೆ. ಮುಂದಿನ ತಿಂಗಳಿಂದ ಯಾವುದೇ ಹೊಸ ಕಾಮಗಾರಿ ನಡೆಸಲು ಅಥವಾ ನೌಕರರಿಗೆ ವೇತನ ಪಾವತಿಸಲು ಆಗುವುದಿಲ್ಲ ಎಂದು ಅವರು ದೂರಿದರು.

ಕೂಡಲೇ ಸ್ಥಾಯಿ ಸಮಿತಿ ಚುನಾವಣೆ ನಡೆಸಬೇಕು ಎಂದ ಪ್ರತಿಭಟನಾಕಾರರು, ಮೇಯರ್‌ ಮತ್ತು ಬಿಜೆಪಿ ವಿರುದ್ಧ ಘೋಷಣೆ ಕೂಗಿದರು.

ಪ್ರತಿಭಟನೆಯಲ್ಲಿ ವಿಪಕ್ಷ ನಾಯಕ ಅಯೂಬ್‌ಖಾನ್‌, ಮಾಜಿ ಉಪ ಮೇಯರ್‌ಗಳಾದ ಶಾಂತಕುಮಾರಿ, ಶ್ರೀಧರ್‌, ಅನ್ವರ್‌ಬೇಗ್‌, ಸದಸ್ಯರಾದ ಶೋಭಾ ಸುನಿಲ್‌, ಪ್ರದೀಪ್‌, ಎಂ. ಶಿವಕುಮಾರ್‌ ಇದ್ದರು. ಜೆಡಿಎಸ್‌ ಪ್ರತಿಭಟನೆಯಲ್ಲಿ ನಾಗರಾಜು, ಎಸ್‌ಬಿಎಂ ಮಂಜು, ಅಶ್ವಿನಿ ಅನಂತು, ತಸ್ಲೀಂ, ಎಂ.ಎಸ್‌. ಶೋಭಾ, ಸಾವೂದ್‌ ಖಾನ್‌ ಮೊದಲಾದವರು ಇದ್ದರು.

ಇಂದಿನ ಸಭೆಯೂ ರದ್ದು: ಮಾ.16 ರಂದು ಮಧ್ಯಾಹ್ನ 3ಕ್ಕೆ ನಡೆಯಬೇಕಿದ್ದ ಸಾಮಾನ್ಯ ಕೌನ್ಸಿಲ್‌ ಸಭೆಯನ್ನು ಕೂಡ ಮೇಯರ್‌ ಶಿವಕುಮಾರ್‌ ಅವರ ಅನಾರೋಗ್ಯದ ನೆಪವೊಡ್ಡಿ ಮುಂದೂಡಲಾಗಿದೆ.

ನ್ಯಾಯಸಮ್ಮತ ಚುನಾವಣೆಗೆ ಆಗ್ರಹ

 ಮೈಸೂರು : ಮುಂಬರುವ ಸಾರ್ವತ್ರಿಕ ವಿಧಾನಸಭೆ ಚುನಾವಣೆಯನ್ನು ನ್ಯಾಯಸಮ್ಮತವಾಗಿ ನಡೆಸಲು ಜಿಲ್ಲಾಡಳಿತಕ್ಕೆ ಎಲ್ಲರ ಸಹಕಾರ ಮುಖ್ಯ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದರು.

ತಮ್ಮ ಕಚೇರಿ ಸಭಾಂಗಣದಲ್ಲಿ ವಿವಿಧ ರಾಜಕೀಯ ಪಕ್ಷಗಳ ಜೊತೆ ಸಭೆ ನಡೆಸಿ ಮಾತನಾಡಿದ ಅವರು, ಬ್ಯಾಂಕ್‌ ಖಾತೆಗಳಲ್ಲಿ ಅನುಮಾನಾಸ್ಪದವಾಗಿ ಹೆಚ್ಚು ಮೊತ್ತದ ಹಣದ ವರ್ಗಾವಣೆ, ಒಂದೇ ಖಾತೆಯಿಂದ ಹೆಚ್ಚು ಖಾತೆಗಳಿಗೆ ಹಣ ವರ್ಗಾವಣೆ, ಖಾತೆಯಿಂದ ದೊಡ್ಡ ಮೊತ್ತದ ನಗದು ಹಣ ತೆಗೆಯುವುದು ಕಂಡುಬಂದಲ್ಲಿ ನಿಗವಹಿಸಿ ಪರಿಶೀಲಿಸಿ ವರದಿ ನೀಡುವಂತೆ ಬ್ಯಾಂಕ್‌ ವ್ಯವಸ್ಥಾಪಕರ ಸಭೆ ನಡೆಸಿ ತಿಳಿಸಲಾಗಿದೆ ಎಂದರು.

ಚುನಾವಣಾ ವೇಳಾಪಟ್ಟಿಪ್ರಕಟವಾದ ದಿನಾಂಕದಿಂದ ಮಾದರಿ ನೀತಿ ಸಂಹಿತೆ ಜಾರಿಗೆ ಬರುತ್ತಿತ್ತು. ಈ ಬಾರಿ ಮಾದರಿ ನೀತಿ ಸಂಹಿತೆ ಜಾರಿಗೂ ಮುನ್ನವೇ ಸಂಭಾವ್ಯ ಅಭ್ಯರ್ಥಿಗಳು, ರಾಜಕೀಯ ಪಕ್ಷಗಳು ಹಾಗೂ ಇನ್ನಿತರೆ ಮೂಲಗಳಿಂದ ಮತದಾರರಿಗೆ ಹಣದ ಆಮಿಷ ಒಡ್ಡುವುದು, ಬೇರೆ ವಸ್ತುಗಳನ್ನು ಹಂಚಿಕೆ ಮಾಡುವುದು ಕಂಡುಬಂದಲ್ಲಿ ದಾಳಿ ನಡೆಸಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.

ಚುನಾವಣಾ ಆಯೋಗ ನೀಡುವ ಸೂಚನೆ ಪಾಲಿಸಬೇಕು. ಈಗಿನಿಂದಲೇ ಚುನಾವಣೆಗೆ ಸಂಬಂಧಿಸಿದಂತೆ ಇರುವ ನಿಯಮ ಹಾಗೂ ಕಾಯ್ದೆಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರು.

ಖಾಸಗಿ ಮನೆ, ಗೋಡೆ ಹಾಗೂ ರಸ್ತೆಗಳಲ್ಲಿ, ರಸ್ತೆ ಬದಿಗಳಲ್ಲಿ , ಸ್ಥಳೀಯ ಸಂಸ್ಥೆಗಳ ಕಟ್ಟಡಗಳು ಹಾಗೂ ಇತ್ಯಾದಿಗಳಲ್ಲಿ ರಾಜಕೀಯ ಪಕ್ಷದ ವಿಷಯಗಳ ಕುರಿತ ಗೋಡೆ ಬರಹ, ಪೋಸ್ಟರ್ಸ್‌, ಬ್ಯಾನರ್‌, ಕಟೌಟ್‌ಗಳು ಹಾಕಲಾಗಿದ್ದು ಅದನ್ನು ಇಂದಿನಿಂದ ತೆರವುಗೊಳಿಸಲು ಸೂಚಿಸಲಾಗಿದೆ.