Asianet Suvarna News Asianet Suvarna News

ಪಂಚಮಸಾಲಿ 2ಎ ಮೀಸಲಾತಿಗೆ ಆಗ್ರಹಿಸಿ ಫೆ.14ಕ್ಕೆ ಇಷ್ಟಲಿಂಗ ಪೂಜೆ: ಕೂಡಲ ಶ್ರೀ

ನಾವೆಲ್ಲಾ ಲಿಂಗಾಯಿತರು ರೈತರಾಗಿದ್ದೇವೆ. ಎಲ್ಲಾ ಒಳಪಂಗಡದವರಿಗೆ ಒಬಿಸಿಗೆ ಸೇರಿಸಬೇಕು. ಗೌಡ, ಮಲೆಗೌಡ ಲಿಂಗಾಯಿತರಿಗೆ 2ಎ ಮೀಸಲಾತಿಗಾಗಿ ಕಳೆದ ಮೂರು ವರ್ಷದಿಂದ ಹೋರಾಟ ನಡೆಸಿದ್ದೇವೆ. ಬಿ.ಎಸ್‌.ಯಡಿಯೂರಪ್ಪ ಸರ್ಕಾರ ಇದ್ದಾಗ ಹಿಂದುಳಿದ ವರ್ಗದ ಆಯೋಗ ರಚಿಸಿದ್ದರು. ಬೊಮ್ಮಾಯಿ ಸರ್ಕಾರ ಶಿಫಾರಸು ಮಾಡಿದ್ದರಿಂದ ಕೇಂದ್ರ ಸರ್ಕಾರ 2ಡಿ ಎಂಬ ಹೊಸ ಕೆಟಗರಿ ಕೊಟ್ಟಿತ್ತು ಎಂದ ಕೂಡಲ ಸಂಗಮದ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ 

Jayamrutunjaya Swamiji Talks Over Panchamasali 2A Reservation grg
Author
First Published Feb 9, 2024, 1:00 AM IST

ಶಿವಮೊಗ್ಗ(ಫೆ.09): ಪಂಚಮಸಾಲಿ ಲಿಂಗಾಯಿತ ಸಮಾಜಕ್ಕೆ 2-ಎ ಮೀಸಲಾತಿ ನೀಡಬೇಕು ಎಂದು ಒತ್ತಾಯಿಸಿ ಫೆ.14ರಂದು ನಗರದ ಗೋಪಿವೃತ್ತದಲ್ಲಿ ಸಾಮೂಹಿಕ ಇಷ್ಟಲಿಂಗ ಪೂಜೆ ಮಾಡುವ ಮೂಲಕ ಪ್ರತಿಭಟನೆ ನಡೆಸಲಾಗುವುದು ಎಂದು ಕೂಡಲ ಸಂಗಮದ ಪಂಚಮಸಾಲಿ ಪೀಠದ ಶ್ರೀ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೆಲ್ಲಾ ಲಿಂಗಾಯಿತರು ರೈತರಾಗಿದ್ದೇವೆ. ಎಲ್ಲಾ ಒಳಪಂಗಡದವರಿಗೆ ಒಬಿಸಿಗೆ ಸೇರಿಸಬೇಕು. ಗೌಡ, ಮಲೆಗೌಡ ಲಿಂಗಾಯಿತರಿಗೆ 2ಎ ಮೀಸಲಾತಿಗಾಗಿ ಕಳೆದ ಮೂರು ವರ್ಷದಿಂದ ಹೋರಾಟ ನಡೆಸಿದ್ದೇವೆ. ಬಿ.ಎಸ್‌.ಯಡಿಯೂರಪ್ಪ ಸರ್ಕಾರ ಇದ್ದಾಗ ಹಿಂದುಳಿದ ವರ್ಗದ ಆಯೋಗ ರಚಿಸಿದ್ದರು. ಬೊಮ್ಮಾಯಿ ಸರ್ಕಾರ ಶಿಫಾರಸು ಮಾಡಿದ್ದರಿಂದ ಕೇಂದ್ರ ಸರ್ಕಾರ 2ಡಿ ಎಂಬ ಹೊಸ ಕೆಟಗರಿ ಕೊಟ್ಟಿತ್ತು ಎಂದರು.

ಮುಸ್ಲಿಂ ಗುರುಗಳನ್ನು ಬಿಡುಗಡೆ ಮಾಡಿ, ಜ್ಞಾನವ್ಯಾಪಿ ಮಸೀದಿಗೆ ತೊಂದರೆ ಮಾಡಬೇಡಿ; ಮುಸ್ಲಿಮರ ಪ್ರತಿಭಟನೆ

ಆದರೆ, ಇನ್ನೇನು ಜಾರಿಯಾಗಬೇಕು ಬೊಮ್ಮಾಯಿ ಸರ್ಕಾರದ ಅವಧಿ ಪೂರ್ಣವಾಯಿತು. ಹೀಗಾಗಿ ಅದೂ ಕೂಡ ಸರಿಯಾಗಿ ಜಾರಿಯಾಗಿಲ್ಲ. ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದಾಗ ವಾರದೊಳಗೆ ಮೀಸಲು ಪ್ರಕಟಿಸುವ ಬಗ್ಗೆ ಭರವಸೆ ನೀಡಿದ್ದರು. ಬಳಿಕ ಬೆಳಗಾವಿ ಅಧಿವೇಶನ ವೇಳೆ ಕಾನೂನು ತಜ್ಞರ ಸಲಹೆ ಪಡೆದು ಮುಂದಿನ ಕ್ರಮ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದರು. ಆದರೆ, ಈವರೆಗೆ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಆರೋಪಿಸಿದರು.

ಸರ್ಕಾರ ಕೊಟ್ಟ ಮಾತಿನಿಂದ ಹಿಂದೆ ಸರಿದ ಪರಿಣಾಮ ಹೋರಾಟ ಅನಿವಾರ್ಯವಾಗಿದೆ. ಭದ್ರಾವತಿ ತಾಲೂಕು, ಸಾಗರ, ಸೊರಬದಲ್ಲಿ ಪ್ರವಾಸ ಮಾಡಿ ಫೆ.14 ರಂದು ಶಿವಮೊಗ್ಗದಲ್ಲಿ ಪ್ರತಿಭಟಿಸಲಾಗುತ್ತಿದೆ. ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ಹೆದ್ದಾರಿಯಲ್ಲಿ ಇಷ್ಟಲಿಂಗ ಪೂಜೆ ಸಲ್ಲಿಸುವ ಮೂಲಕ ನಾವು ಪ್ರತಿಭಟನೆಯನ್ನು ಆರಂಭಿಸಿದ್ದೇವೆ. ಈಗಾಗಲೇ 9 ಜಿಲ್ಲೆಗಳಲ್ಲಿ ರಸ್ತೆ ತಡೆ ನಡೆಸಿದ್ದೇವೆ. ಈಗ ಶಿವಮೊಗ್ಗದಲ್ಲೂ ಕೂಡ ಈ ಪ್ರತಿಭಟನೆ ನಡೆಯುತ್ತದೆ. ಫೆ.14ರಂದು ಬೆಳಿಗ್ಗೆ 10ಕ್ಕೆ ಶಿವಪ್ಪನಾಯಕ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರತಿಭಟನಾ ಮೆರವಣಿಗೆಯನ್ನು ಆರಂಭಿಸಿ ಗೋಪಿವೃತ್ತದಲ್ಲಿ ಸಾಮೂಹಿಕವಾಗಿ ಇಷ್ಟಲಿಂಗ ಪೂಜೆ ಮಾಡುವ ಮೂಲಕ ನಮ್ಮ ಬೇಡಿಕೆಯನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸುತ್ತಿದ್ದೇವೆ. ಈ ಪ್ರತಿಭಟನೆಯಲ್ಲಿ ಸಮಾಜದ ಸಾವಿರಾರು ಜನರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಈ ಸಂದರ್ಭ ಪಂಚಮಸಾಲಿ ಸಮಾಜದ ಪ್ರಮುಖರಾದ ಎಚ್.ವಿ.ಮಹೇಶ್ವರಪ್ಪ, ಬಿ.ಎಸ್.ಶಿವಕುಮಾರ್, ಬಳ್ಳಕೆರೆ ಸಂತೋಷ್, ಮಹೇಶ್‌ಮೂರ್ತಿ, ಡಾ.ಲಿಂಗಪ್ಪ ಚಳಗೇರಿ, ವಿಜಯ್‌ಕುಮಾರ್, ರುದ್ರೇಗೌಡ, ಸತೀಶ್, ಶಿವರಾಜ್, ರಾಜಶೇಖರ್ ಮತ್ತಿತರರು ಇದ್ದರು.

Follow Us:
Download App:
  • android
  • ios