ಬೆಂಗಳೂರು (ಜ.21):  ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಕಳೆದ ನಾಲ್ಕು ವರ್ಷಗಳಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಆಪ್ತೆ ಶಶಿಕಲಾ ನಟ​ರಾ​ಜನ್‌ ಅವರ ಆರೋ​ಗ್ಯ​ದಲ್ಲಿ ಏರು​ಪೇರಾಗಿರುವ ಹಿನ್ನೆಲೆಯಲ್ಲಿ ಬುಧವಾರ ದಿಢೀರ್‌ ಆಸ್ಪ​ತ್ರೆಗೆ ದಾಖ​ಲಿ​ಸಲಾಗಿ​ದೆ.

ಎರಡು ದಿನ​ಗ​ಳಿಂದ ಜ್ವರ ಮತ್ತು ಕಫದಿಂದ ಬಳಲುತ್ತಿದ್ದ ಶಶಿಕಲಾ ಅವರಿಗೆ ಬೆನ್ನುನೋವು ಹೆಚ್ಚಾಗಿತ್ತು. ​ಜೈಲಿನ​ ಆಸ್ಪ​ತ್ರೆ​ಯ​ಲ್ಲಿ ಚಿಕಿತ್ಸೆ ನೀಡಲಾಗಿತ್ತಾದರೂ ಜ್ವರ ಕಡಿಮೆಯಾಗಿರಲಿಲ್ಲ. ಜ್ವರ ಹೆಚ್ಚಾದ ಹಿನ್ನೆಲೆಯಲ್ಲಿ ಬುಧ​ವಾರ ಸಂಜೆ ಐದು ಗಂಟೆ ಸುಮಾ​ರಿಗೆ ಹೆಚ್ಚಿನ ಚಿಕಿ​ತ್ಸೆ​ಗಾಗಿ ಬೌರಿಂಗ್‌ ಆಸ್ಪ​ತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಉಸಿ​ರಾ​ಟದ ಸಮಸ್ಯೆ ಕೂಡ ಕಾಣಿ​ಸಿ​ಕೊಂಡಿತ್ತು. ಹೀಗಾಗಿ ಆಕ್ಸಿಜನ್‌ ನೀಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಬೆಂಗಳೂರು ಜೈಲಿಂದ ಜ.27ರಂದು ಶಶಿಕಲಾ ಬಿಡುಗಡೆ: ವಕೀಲ ...

ಶಶಿಕಲಾ ಅವರಿಗೆ ಉಸಿ​ರಾ​ಟದ ಸಮಸ್ಯೆ ಇರುವುದರಿಂದ ಕೊರೋನಾ ಪರೀ​ಕ್ಷೆ​ಗೊ​ಳ​ಪ​ಡಿ​ಸ​ಲಾ​ಗಿದ್ದು, ಆ್ಯಂಟಿಜೆನ್‌ ವರದಿ ನೆಗೆಟಿವ್‌ ಬಂದಿದೆ. ಆರ್‌ಟಿಪಿಸಿಆರ್‌ ವರದಿಗಾಗಿ ಕಾಯಲಾಗುತ್ತಿದೆ. ವರದಿ ಬಂದ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು. ಶಶಿಕಲಾ ಅವರಿಗೆ ಆಕ್ಸಿಜನ್‌ ನೀಡಲಾಗುತ್ತಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ಬೌರಿಂಗ್‌ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

ಜ.27ರಂದು ಜೈಲಿನಿಂದ ಬಿಡುಗಡೆಯಾಗಲಿರುವ ಶಶಿಕಲಾ ಅವರಿಗೆ ಪರಪ್ಪನ ಅಗ್ರಹಾರದಿಂದ ತಮಿಳುನಾಡಿನ ಚೆನ್ನೈವರೆಗೂ ಅದ್ಧೂರಿ ಮೆರವಣಿಗೆಗೆ ಸಿದ್ಧತೆ ನಡೆಸಲಾಗಿದ್ದು, ಲಕ್ಷಾಂತರ ಮಂದಿ ಸೇರುವ ಸಾಧ್ಯ​ತೆ​ಯಿದೆ ಎಂದು ಹೇಳ​ಲಾ​ಗಿದೆ. ಈ ನಡುವೆ ‘ಚಿನ್ನ​ಮ್ಮ​ನ’ ಆರೋ​ಗ್ಯ​ದಲ್ಲಿ ಸಮಸ್ಯೆ ಉಂಟಾ​ಗಿ​ರು​ವುದು ಅವರ ಅಭಿ​ಮಾ​ನಿ​ಗಳು ಮತ್ತು ಪಕ್ಷದ ಮುಖಂಡ​ರಲ್ಲಿ ಆತಂಕ ಉಂಟುಮಾಡಿದೆ.

ಅಕ್ರಮ ಆಸ್ತಿ​ ಗ​ಳಿಕೆ ಆರೋಪ ಪ್ರಕ​ರ​ಣ​ದಲ್ಲಿ 2017ರಲ್ಲಿ ಶಶಿ​ಕಲಾ ನಟ​ರಾ​ಜನ್‌ ಮತ್ತು ಅವರ ಆಪ್ತೆ ಇಳವರಸಿ ಸೇರಿ ನಾಲ್ವ​ರಿಗೆ ನ್ಯಾಯಾಲಯ ನಾಲ್ಕು ವರ್ಷ ಜೈಲು ಶಿಕ್ಷೆ, 10 ಕೋಟಿ ರು. ದಂಡ ವಿಧಿಸಿತ್ತು.