ಮಲ್ಲಿಕಾರ್ಜುನ ಹೊಸಮನಿ‌

ಗೋಕಾಕ್(ನ.28): ರಾಜ್ಯದಲ್ಲಿ ಹೈ ವೋಲ್ಟೇಜ್ ಕದನವೆಂದೇ ಬಿಂಬಿತವಾಗಿರೋ ಗೋಕಾಕ್ ವಿಧಾನಸಭಾ ಮತಕ್ಷೇತ್ರದಲ್ಲಿ ಜಾತಿವಾರು ಲೆಕ್ಕಾಚಾರವೂ ಸಹ ಜೋರಾಗಿದ್ದು, ಇದೀಗ ಮಾಜಿ ಸಿಎಂ ಸಿದ್ದರಾಮಯ್ಯನಂತಹ ರಾಜ್ಯ ನಾಯಕರನ್ನ ಟಾರ್ಗೆಟ್ ಮಾಡಿಕೊಂಡು ಮಾದಿಗ ದಲಿತ ಸಮುದಾಯ ಬಿಜೆಪಿ ಬೆಂಬಲಿಸಲು ಮುಂದಾಗಿದೆ.  ಇದರಿಂದ ಸಾಂಪ್ರದಾಯಿಕ ಮತಗಳನ್ನ ಉಳಿಸಿಕೊಳ್ಳಲು ಕಾಂಗ್ರೆಸ್ ಮುಂದಾಗಿದೆ. 

ರಾಜ್ಯದ ಮಾದಿಗ ಸಮುದಾಯದ ಮುಖಂಡರು ಹಿಂದೆ ರಾಜ್ಯ ವಿಧಾನಸಭಾ ಚುನಾವಣೆಯಲ್ಲೂ ಸಿದ್ದರಾಮಯ್ಯ ತಮ್ಮ ಸಮುದಾಯಕ್ಕೆ ಅನ್ಯಾಯ ಮಾಡಿದ್ದಾರೆಂದು ರಾಜ್ಯಾದ್ಯಂತ ಪ್ರಚಾರ ಮಾಡಿ ಕಾಂಗ್ರೆಸ್‌ನ ಹಿನ್ನಡೆಗೆ ಕಾರಣವಾಗಿದ್ರು. ಆದ್ರೆ ಇದೀಗ ಅದೇ ಪರಿಸ್ಥಿತಿ ರಾಜ್ಯದಲ್ಲಿ ನಡೆಯುತ್ತಿರುವ ಬೈ ಎಲೆಕ್ಷನ್‌ಗೂ ಹಬ್ಬಿದ್ದು, ಗೋಕಾಕ್ ಮತಕ್ಷೇತ್ರದಲ್ಲಿ ಬಿಜೆಪಿಯನ್ನ ಬೆಂಬಲಿಸಿದ ಸದಾಶಿವ ಆಯೋಗ ವರದಿ ಜಾರಿ ಹೋರಾಟ ಸಮಿತಿ ಸದಸ್ಯರು ಮನೆ ಮನೆ ಪ್ರಚಾರ ನಡೆಸಿದ್ದಾರೆ. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಸದಾಶಿವ ಆಯೋಗವನ್ನ ಸಿದ್ದರಾಮಯ್ಯ ಮಾತು ಕೊಟ್ಟಂತೆ ಶಿಫಾರಸ್ಸು ಮಾಡಲಿಲ್ಲ, ಇತ್ತ ದಲಿತ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಮುನಿಯಪ್ಪನಂತವರನ್ನ ಕಡೆಗಣಿಸಿದ್ದಾರೆ. ಹೀಗಾಗಿ ಇಂತವರ ಪಕ್ಷವನ್ನ ಬೆಂಬಲಿಸದೇ ಪರಿಶಿಷ್ಟ ಜಾತಿ ಮತ್ತು ಪಂಗಡದ ಮೀಸಲಾತಿ ಹೆಚ್ಚಳಕ್ಕಾಗಿ ನ್ಯಾ. ನಾಗಮೋಹನ್ ದಾಸ ನೇತೃತ್ವದಲ್ಲಿ ಆಯೋಗ ನೇಮಿಸಿ, ದಲಿತ ನಾಯಕ ಗೋವಿಂದ ಕಾರಜೋಳ ಅವರನ್ನ ಉಪ ಮುಖ್ಯಮಂತ್ರಿ ಮಾಡಿರುವ ಬಿಜೆಪಿ ಪಕ್ಷವನ್ನ ಬೆಂಬಲಿಸಲು ರಾಜ್ಯಾದ್ಯಂತ ಸಮುದಾಯ ನಿರ್ಧರಿಸಿದೆ ಎಂದು ದಲಿತ ಮುಖಂಡ ಮುತ್ತಣ್ಣ ಬೆಣ್ಣೂರ ಅವರು ಹೇಳಿದ್ದಾರೆ. 

ಇನ್ನು ಗೋಕಾಕ್‌ನಲ್ಲಿ ಬೀಡು ಬಿಟ್ಟಿರುವ ಸದಸ್ಯರು ಮನೆ ಮನೆಗಳ ಪ್ರಚಾರಕ್ಕೆ ತೆರಳಿ ಯುವಕರು, ಯುವತಿಯರು, ಮಹಿಳೆಯರಿಗೆ ಕರೆದುಕೊಂಡು ಅವರಿಗೆ ಸಿದ್ದರಾಮಯ್ಯ ದಲಿತರಿಗೆ ಮಾಡಿದ ಅನ್ಯಾಯ ಮನವರಿಕೆ ಮಾಡಿ ಆ ಮೂಲಕ ಬಿಜೆಪಿಯನ್ನ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. 

ಹೀಗಾಗಿ ಗೋಕಾಕ್ ಮತಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಜಾರಕಿಹೊಳಿಗೆ ಮತ ನೀಡುವಂತೆ ಮನವಿ ಮಾಡ್ತಿದ್ದಾರೆ. ಈ ಮಧ್ಯೆ ಇತ್ತ ಕಾಂಗ್ರೆಸ್‌ನ ಲಖನ್ ಜಾರಕಿಹೊಳಿ ಸಾಂಪ್ರದಾಯಿಕ ದಲಿತ ಮತಗಳನ್ನ ಉಳಿಕೊಳ್ಳೋಕೆ ಇನ್ನಿಲ್ಲದ ಕಸರತ್ತು ನಡೆಸಿದ್ದು, ಆದ್ರೆ ಖರ್ಗೆ, ಮುನಿಯಪ್ಪನಂತಹ ನಾಯಕರ‍್ಯಾರು ಗೋಕಾಕ್ ಮತಕ್ಷೇತ್ರಕ್ಕೆ ಇನ್ನೂ ಸಹ ಬಾರದೇ ಇರೋದು ಅನುಮಾನಕ್ಕೂ ಕಾರಣವಾಗ್ತಿದೆ. ಹೀಗಾಗಿ ಬಿಜೆಪಿ ಜೊತೆ ಕಾಂಗ್ರೆಸ್ ಸಹ ದಲಿತ ಮತಗಳನ್ನ ಸೆಳೆಯೋಕೆ ಇನ್ನಿಲ್ಲದ ಕಸರತ್ತು ನಡೆಸಿದೆ. ಇವುಗಳ ಮಧ್ಯೆ ಮನೆ ಮನೆ ಪ್ರಚಾರ ನಡೆಸಿ ಬಿಜೆಪಿ ಪರ ಪ್ರಚಾರಕ್ಕೆ ದಲಿತ ಮುಖಂಡರು ಮುಂದಾಗಿದ್ದಾರೆ.

ಡಿಸೆಂಬರ್ 5ರಂದು ಕರ್ನಾಟಕದಲ್ಲಿ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, 9ರಂದು ಫಲಿತಾಂಶ ಪ್ರಕಟವಾಗಲಿದೆ.