ನಗರದಲ್ಲಿ ಪಾದಚಾರಿಗಳಿಗೆ, ವಾಹನ ಸವಾರರಿಗೆ ಮತ್ತು ವ್ಯಾಪಾರಿಗಳಿಗೆ ತೊಂದರೆ ನೀಡುತ್ತಿದ್ದ ಕತ್ತೆಗಳನ್ನು ನಗರಸಭೆ ಸ್ಥಳಾಂತರಿಸಿದೆ. ಕತ್ತೆಗಳ ಮಾಲೀಕರು ಪ್ರತಿ ಕತ್ತೆಗೆ ₹20,000 ದಂಡ ಕಟ್ಟಬೇಕು, ಇಲ್ಲದಿದ್ದರೆ ಕತ್ತೆಗಳನ್ನು ಶಾಶ್ವತವಾಗಿ ಸ್ಥಳಾಂತರಿಸುವ ಬಗ್ಗೆ ನಗರಸಭೆ ಎಚ್ಚರಿಕೆ ನೀಡಿದೆ.
ವರದಿ; ಮಲ್ಲಿಕಾರ್ಜುನ ಹೊಸಮನಿ, ಏಷ್ಯಾನೆಟ್ ಸುವರ್ಣ ನ್ಯೂಸ್
ಬಾಗಲಕೋಟೆ (ಜೂ. 25): ಜಿಲ್ಲೆಯ ಜಮಖಂಡಿ ನಗರದಲ್ಲಿ ಪಾದಾಚಾರಿಗಳಿಗೆ ವಾಹನ ಸವಾರರಿಗೆ, ವ್ಯಾಪಾಸ್ಥರಿಗೆ ತೊಂದರೆ ನೀಡುತ್ತಿದ್ದ ಕತ್ತೆಗಳನ್ನ ಈಗ ಸ್ಥಳಾಂತರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಗರಸಭೆ ಸಿಬ್ಬಂದಿ ಕತ್ತೆಗಳನ್ನು ಕಟ್ಟಿಹಾಕಿ, ಮಾಲೀಕರಿಗೆ ಬುದ್ಧಿ ಕಲಿಸಲು ಮುಂದಾಗಿದ್ದಾರೆ.
ಕಳೆದ ಕೆಲವು ದಿನಗಳಿಂದ ಜಮಖಂಡಿ ನಗರದಲ್ಲಿ ಕತ್ತೆಗಳ ಹಾವಳಿ ತೀವ್ರ ಹೆಚ್ಚಾಗಿತ್ತು. ಪಾದಚಾರಿ, ವಾಹನ ಸವಾರರು, ವ್ಯಾಪಾರಸ್ಥರಿಗೆ ಕತ್ತೆಗಳು ಅಡ್ಡ ಬರುವುದು, ಓಡಿಬಂದು ಬೀಳುವುದು, ಒದೆಯುವುದು ಹಾಗೂ ಆಹಾರ ಸಾಮಗ್ರಿಗಳನ್ನು ತಿನ್ನುವವುದು, ರಸ್ತೆಯಲ್ಲಿ ಎಲ್ಲೆಂದರಲ್ಲಿ ಮಲಗುವುದು ಹಾಗೂ ನಿಲ್ಲುವ ಮೂಲಕ ತೀffರ ತೊಂದರೆ ನೀಡುತ್ತಿದ್ದವು. ಕತ್ತೆಗಳ ಉಪಟಳವನ್ನು ತಪ್ಪಿಸಲು ಟ್ರಾಫಿಕ್ ಪೊಲೀಸರು ಹಾಗೂ ಜನರು ಕತ್ತೆಗಳನ್ನು ರಸ್ತೆಯಿಂದ ಓಡಿಸುವ ಕೆಲಸ ಮಾಡುತ್ತಿದ್ದರು.
ಇನ್ನು ಕತ್ತೆಗಳ ಹಾವಳಿಗೆ ಬೇಸತ್ತ ಪೊಲೀಸ್ ಇಲಾಖೆ ಮತ್ತು ಸಾರ್ವಜನಿಕರು ಕತ್ತೆಗಳನ್ನು ಹಿಡಿದು ಉಪಟಳ ತಪ್ಪಿಸುವಂತೆ ನಗರಸಭೆಗೆ ದೂರುಗಳ ಸುರಿಮಳೆಯನ್ನೇ ಸುರಿಸಿದ್ದರು. ಜೊತೆಗೆ, ನಗರಸಭೆಯ ಮೀಟಿಂಗ್‌ನಲ್ಲಿಯೂ ಕತ್ತೆಗಳದ್ದೇ ಚರ್ಚೆಯಾಗಿತ್ತು. ಇದರ ಬೆನ್ನಲ್ಲಿಯೇ ಕತ್ತೆಗಳು ಹಾಗೂ ಕತ್ತೆಗಳ ಮಾಲೀಕರಿಗೆ ಬುದ್ಧಿ ಕಲಿಸಲು ನಗರದ ಪ್ರಮುಖ ಭಾಗಗಳಲ್ಲಿ ಓಡಾಡುತ್ತಿದ್ದ ಬಿಡಾಡಿ ಕತ್ತೆಗಳನ್ನ ಸೆರೆಹಿಡಿದು ಕಟ್ಟಿಹಾಕಿದ್ದಾರೆ. ನಂತರ ನಗರಸಭೆಯ ಅಧಿಕಾರಿಗಳು ಎಲ್ಲ ಕತ್ತೆಗಳನ್ನು ವಶಕ್ಕೆ ಪಡೆದು ನಗರದ ಹೊರವಲಯದ ದಡ್ಡಿ ಪ್ರದೇಶದಲ್ಲಿ ಇರಿಸಲಾಗಿದೆ.
ನಿರಂತರವಾಗಿ ಈ ಕತ್ತೆಗಳು ಸಾರ್ವಜನಿಕರಿಗೆ ಅಡಚಣೆ ಉಂಟುಮಾಡುತ್ತಿದ್ದ ಹಿನ್ನೆಲೆಯಲ್ಲಿ, ನಗರಸಭೆ ಕಳೆದ ವಾರವೇ ಕತ್ತೆಗಳ ಮಾಲೀಕರಿಗೆ ಎಚ್ಚರಿಕೆಯ ಸೂಚನೆ ನೀಡಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಇದರಿಂದಾಗಿ ನಗರಸಭೆ ನೇರವಾಗಿ ಕಾನೂನುಬದ್ಧವಾಗಿ ಕಾರ್ಯಾಚರಣೆ ಕೈಗೊಂಡಿದೆ. ಪೌರಾಯುಕ್ತ ಜ್ಯೋತಿ ಗಿರೀಶ ಸ್ಪಷ್ಟನೆ ನೀಡುತ್ತಾ, 'ಕತ್ತೆಗಳ ಮಾಲೀಕರು ತಮ್ಮ ಪ್ರಾಣಿಗಳನ್ನು ಹಿಂದಕ್ಕೆ ಪಡೆದುಕೊಳ್ಳಬೇಕಾದರೆ ಪ್ರತಿ ಕತ್ತೆಗೆ ₹20,000 ದಂಡ ಕಟ್ಟಬೇಕಾಗುತ್ತದೆ. ಇಲ್ಲವಾದರೆ ಈ ಪ್ರಾಣಿಗಳನ್ನು ನಗರದಿಂದ ದೂರದ ಪ್ರದೇಶಗಳಿಗೆ ಶಾಶ್ವತವಾಗಿ ಸ್ಥಳಾಂತರಿಸಲಾಗುತ್ತದೆ' ಎಂದು ಎಚ್ಚರಿಕೆ ರವಾನಿಸಿದ್ದಾರೆ.
ಈ ಕಾರ್ಯಾಚರಣೆಗೆ ನಾಗರಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಪರಿಸರ ಸ್ವಚ್ಛತೆಗೆ ಮತ್ತು ಸಾರ್ವಜನಿಕ ಸುರಕ್ಷತೆಗೆ ಈ ರೀತಿಯ ಕ್ರಮಗಳನ್ನು ನಿರಂತರವಾಗಿ ತೆಗೆದುಕೊಳ್ಳಬೇಕೆಂಬ ಮಾತುಗಳು ಕೇಳಿಬರುತ್ತಿವೆ.
