ಹಾಸನ(ಸೆ.13): ಜೆಡಿಎಸ್‌ ಶಾಸಕರೂ ಆದ ಮಾಜಿ ಸಚಿವ ಜಿ.ಟಿ.ದೇವೇಗೌಡ ಬಿಜೆಪಿಗೆ ಆಸ್ಪೃಶ್ಯರಲ್ಲ. ಅವರು ಬಿಜೆಪಿಗೆ ಬಂದರೆ ಒಳ್ಳೆಯದು ಎಂದು ಕಾನೂನು ಮತ್ತು ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ನೇರವಾಗಿ ಆಹ್ವಾನ ನೀಡಿದರು.

ಜೆಡಿಎಸ್‌ನ ಕೆಲ ಶಾಸಕರು ಮತ್ತು ಜಿ.ಡಿ. ದೇವೇಗೌಡರು, ಬಿಜೆಪಿಗೆ ಬಾಹ್ಯ ಬೆಂಬಲ ಕೊಡೋಣ ಎಂದಿದ್ದರು. ಅವರವರ ಕ್ಷೇತ್ರಗಳ ಅಭಿವೃದ್ಧಿ ದೃಷ್ಟಿಯಿಂದ ಅದು ಒಳ್ಳೇದು ಎಂದು ಅವರು ಹೇಳಿದ್ದರು. ಅವರನ್ನು ಗೃಹಮಂಡಳಿ ಅಧ್ಯಕ್ಷರನ್ನಾಗಿ ಮಾಡಿದ್ದು ಬಿಜೆಪಿ. ಹಾಗಾಗಿ ಅವರು ಬಿಜೆಪಿಗೆ ಬಂದರೆ ಸೂಕ್ತ ಎಂದು ಗುರುವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅಭಿಪ್ರಾಯಪಟ್ಟರು.

ದೊಡ್ಡ ಪ್ರತಿಭಟನೆ ಒಳ್ಳೆಯದಲ್ಲ

ಡಿಕೆಶಿ ಇಡಿ ಕಸ್ಟಡಿ ವಿರೋಧಿಸಿ ಈ ದೊಡ್ಡ ಪ್ರತಿಭಟನೆ ಒಳ್ಳೇದಲ್ಲ. ಒಂದು ಸಮುದಾಯ ಹೋರಾಟಕ್ಕೆ ಇಳಿಯುವುದು ಒಳ್ಳೆಯದಲ್ಲ. ಬಿಜೆಪಿ ಒಕ್ಕಲಿಗ ಸಮುದಾಯದ ವಿರುದ್ಧವಾಗಿಲ್ಲ. ಡಿಕೆಶಿ ಬಂಧಿಸಿ ಎಂದು ಬಿಜೆಪಿ ಹೇಳಿಲ್ಲ. ಹಾಗಿದ್ದರೇ ಡಿ.ವಿ.ಸದಾನಂದಗೌಡ ಅವರನ್ನು ಕೇಂದ್ರದಲ್ಲಿ ಮಂತ್ರಿ ಮಾಡುತ್ತಿರಲಿಲ್ಲ. ಕಂದಾಯ ಸಚಿವರು ಯಾರು? ಅಶ್ವತ್ಥ್‌ ನಾರಾಯಣ ಡಿಸಿಎಂ ಆಗಿಲ್ಲವೇ? ಎಂದು ಪ್ರಶ್ನಿಸಿದರು.

ಜಾತಿ ಜಾತಿಯವರು ಹೋರಾಟಕ್ಕಿಳಿದರೆ ಕಾನೂನು ಏನು ಮಾಡಬೇಕು. ಡಿಕೆಶಿ ತನಿಖೆಗೆ ಸಹಕಾರ ನೀಡಬೇಕು. ಅದಕ್ಕಾಗಿ ಇಡಿ ವಶಕ್ಕೆ ಪಡೆದಿದೆ. ನಾವು ಒಕ್ಕಲಿಗರ ವಿರೋಧವಾಗಿಲ್ಲ. ಇಡೀ ಒಕ್ಕಲಿಗರು ಡಿಕೆಶಿ ಪರವಾಗಿಲ್ಲ. ಎಲ್ಲರೂ ಹೋರಾಟಕ್ಕೆ ಬಂದಿಲ್ಲ. ಅವರ ಬೆಂಬಲಿಗರು ಮಾತ್ರ ಪ್ರತಿಭಟನೆ ಮಾಡಿದ್ದಾರೆ ಎಂದು ಹೇಳಿದರು.

ಅಂತಿಮ ವರದಿ ಸಿದ್ಧವಾಗಿಲ್ಲ:

ಅತಿವೃಷ್ಟಿಕುರಿತ ಅಂತಿಮ ವರದಿ ಸಿದ್ಧವಾಗಿಲ್ಲ. ವರದಿ ಸಿದ್ಧವಾದ ಬಳಿಕ ಕೇಂದ್ರದ ಬಳಿ ಹೋಗುತ್ತೇವೆ. ಉತ್ತರ ಕರ್ನಾಟಕ ಭಾಗದಲ್ಲಿ ಹೊಸದಾಗಿ ಮನೆ ಕಟ್ಟಲು ಆಗಲ್ಲ. ಮುಂದಿನ ಸೆಪ್ಟಂಬರ್‌ ವರೆಗೆ ಶಾಶ್ವತ ಪರಿಹಾರ ಕಲ್ಪಿಸಲು ಸಾಧ್ಯವಾಗುವುದಿಲ್ಲ. ಕೇಂದ್ರ ನೆರವು ಕೊಟ್ಟಿಲ್ಲ ಅಂತ ರಾಜ್ಯ ಸರ್ಕಾರ ಸುಮ್ಮನೆ ಕುಳಿತಿಲ್ಲ. ಕೇಂದ್ರ ಪರಿಹಾರ ಕೊಡೋ ವಿಶ್ವಾಸ ಇದೆ. ಸ್ವಲ್ಪ ವಿಳಂಬವಾಗಬಹುದು ಅಷ್ಟೇ ಎಂದು ಕೇಂದ್ರವನ್ನು ಮಾಧುಸ್ವಾಮಿ ಸಮರ್ಥಿಸಿಕೊಂಡರು.

ಅಕ್ಬೋಬರ್‌ನಲ್ಲಿ ಅಧಿವೇಶನ

ಮುಂದಿನ ಅಕ್ಟೋಬರ್‌ನಲ್ಲಿ ಅಧಿವೇಶನ ಕರೆಯಲಾಗುವುದು. ಅದಕ್ಕೂ ಮುನ್ನ ರೈತರ ಎಲ್ಲಾ ಸಾಲದ ಬಗ್ಗೆ ಮಾಹಿತಿ ಪಡೆಯಲಾಗುವುದು. ಎಲ್ಲವನ್ನೂ ಲೆಕ್ಕಾಚಾರ ಮಾಡಿ ಸಾಲ ಮನ್ನಾ ವಿಚಾರದ ಬಗ್ಗೆ ಒಂದು ತೀರ್ಮಾನಕ್ಕೆ ಬರಲಾಗುತ್ತದೆ. ರೈತರಿಗೆ ಏನಾದರೂ ಮಾಡಬೇಕು ಎಂಬುದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಕನಸಾಗಿದೆ ಎಂದು ಮಾಧುಸ್ವಾಮಿ ಹೇಳಿದ್ದಾರೆ.