ಸಮಸ್ಯೆ ಅರಿಯಲು ಗ್ರಾಮಸಭೆಗೆ ಹಾಜರಿ ಕಡ್ಡಾಯ
- ಸಮಸ್ಯೆ ಅರಿಯಲು ಗ್ರಾಮಸಭೆಗೆ ಹಾಜರಿ ಕಡ್ಡಾಯ
- ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕಿ ಕುಸುಮಾವತಿ ಶಿವಳ್ಳಿ ಸೂಚನೆ
ಹುಬ್ಬಳ್ಳಿ (ಆ.25) : ಗ್ರಾಮೀಣ ಭಾಗದ ಸಮಸ್ಯೆ ಅರಿಯುವ ನಿಟ್ಟಿನಲ್ಲಿ ಗ್ರಾಮಸಭೆಗೆ ತಾಲೂಕುಮಟ್ಟದ ಅಧಿಕಾರಿಗಳು, ಸಿಬ್ಬಂದಿ ಕಡ್ಡಾಯವಾಗಿ ಭಾಗವಹಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕಿ ಕುಸುಮಾವತಿ ಸಿ. ಶಿವಳ್ಳಿ ಸೂಚಿಸಿದರು. ಬುಧವಾರ ಇಲ್ಲಿನ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗ್ರಾಮೀಣರಿಗೆ ಉತ್ತಮ ಆರೋಗ್ಯ ನೀಡುವ ಗುರಿ: ಸಚಿವ ಸುಧಾಕರ್
ಗ್ರಾಮಸಭೆಯಲ್ಲಿ ಅಧಿಕಾರಿಗಳು ಪಾಲ್ಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರಿಂದ ದೂರು ಬಂದಿವೆ. ಜತೆಗೆ ಹಲವೆಡೆ ಅಧಿಕಾರಿಗಳ ಭಾಗವಹಿಸುವಿಕೆ ಇಲ್ಲದಿರುವುದರಿಂದ ಸಭೆ ರದ್ದಾದ ಉದಾಹರಣೆ ಇದೆ. ಹೀಗಾಗಿ ಅಧಿಕಾರಿಗಳು ಗ್ರಾಮೀಣ ಭಾಗದ ಸಮಸ್ಯೆ ಅರಿತು ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮೊದಲು ಗ್ರಾಮಸಭೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಾಕೀತು ಮಾಡಿದರು. ತಾಪಂ ಇಒ ಗಂಗಾಧರ ಕಂದಕೂರ ಮಾತನಾಡಿ, ಸಭೆಯಲ್ಲಿ ಹಿರಿಯ ಅಧಿಕಾರಿ ಭಾಗವಹಿಸದಿದ್ದರೆ ಇಲಾಖೆ ಕುರಿತು ಮಾಹಿತಿಯುಳ್ಳ ಅಧಿಕಾರಿಗಳಾದರೂ ಭಾಗವಹಿಸಲೇಬೇಕು. ಇಲ್ಲದಿದ್ದರೆ ಅಂತಹವರ ವಿರುದ್ಧ ಕ್ರಮಕೈಲಾಗುವುದು ಎಂದು ಎಚ್ಚರಿಸಿದರು.
ಜಲಜೀವನ್ ಮಿಷನ್ ಯೋಜನೆಯಡಿ ಎಲ್ಲ ಮನೆಗಳಿಗೆ ನೂತನ ನೀರಿನ ಸಂಪರ್ಕ ಕಲ್ಪಿಸಬೇಕು. ಅಂಬೇಡ್ಕರ್ ಭವನ, ವಾಲ್ಮೀಕಿ ಭವನ, ಅಂಗನವಾಡಿ ಕಾಮಗಾರಿಗೆ ಎದುರಾಗಿರುವ ಸ್ಥಳದ ಕೊರತೆ ಕುರಿತು ಪರಿಶೀಲನೆ ನಡೆಸಿ ಸಮಸ್ಯೆ ಪರಿಹಾರದ ಬಗ್ಗೆ ವಾರದೊಳಗೆ ವರದಿ ನೀಡುವಂತೆ ಇಒ ಸೂಚನೆ ನೀಡಿದರು.] 2016-17ರಲ್ಲಿ 13 ಗ್ರಾಮಗಳಿಗೆ ಅಂಬೇಡ್ಕರ್ ಭವನ ಮಂಜೂರಾಗಿದೆ. 8 ಗ್ರಾಮಗಳಲ್ಲಿ ಕಾಮಗಾರಿ ಪೂರ್ಣಗೊಂಡಿದೆ. ಕೆಲವೆಡೆ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಇನ್ನು ಕೆಲವೆಡೆ ಜಾಗದ ಸಮಸ್ಯೆ ಎದುರಾಗಿದೆ ಎಂದು ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಎಚ್.ಜಿ. ಗುಂಡಳ್ಳಿ ಮಾಹಿತಿ ನೀಡಿದರು.
ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕೆ.ಬಿ. ಚಾಟೆ, ಅತಿವೃಷ್ಟಿಯಿಂದ ಹಾಳಾಗಿರುವ ರಸ್ತೆ ಕುರಿತು ಮಾಹಿತಿ ಸಂಗ್ರಹಿಸಿ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ. 7 ರಸ್ತೆ ಕಾಮಗಾರಿಗೆ ಅನುಮೋದನೆ ದೊರೆತಿದೆ. 15 ದಿನದೊಳಗೆ ಕೆಲಸ ಆರಂಭವಾಗಲಿದೆ ಎಂದು ಮಾಹಿತಿ ನೀಡಿದರು.
ಪರಸಾಪುರದ ಸರ್ಕಾರಿ ಶಾಲೆಗೆ 2 ಎಕರೆ ಜಾಗ ಮಂಜೂರಾಗಿದೆ. ಜಿಪಂ ಸಿಇಒ ಅನುದಾನ ಬಿಡುಗಡೆ ಮಾಡಿದ್ದಾರೆ. ಗ್ರಾಮಸಭೆಯಲ್ಲಿಯೂ ನಿರ್ಣಯ ಕೈಗೊಳ್ಳಲಾಗಿದೆ. ಇದಕ್ಕೆ ಶೀಘ್ರ ಆಡಳಿತಾತ್ಮಕ ಅನುಮೋದನೆ ಒದಗಿಸಲು ಕ್ರಮಕೈಗೊಳ್ಳುವಂತೆ ತಹಸೀಲ್ದಾರ್‌ಗೆ ಶಾಸಕರು ಸೂಚಿಸಿದರು. ತಾಲೂಕು ಆರೋಗ್ಯ ಇಲಾಖೆ, ಹಿಂದುಳಿದ ವರ್ಗಗಳ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆಹಾರ, ಪಶುಸಂಗೋಪನಾ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿ ಇಲಾಖೆ ಪ್ರಗತಿ ಕುರಿತು ಮಾಹಿತಿ ನೀಡಿದರು. ತಹಸೀಲ್ದಾರ್ ಪ್ರಕಾಶ ನಾಶಿ ಹಾಗೂ ತಾಲೂಕುಮಟ್ಟದ ಎಲ್ಲ ಅಧಿಕಾರಿಗಳು ಸಭೆಯಲ್ಲಿದ್ದರು.
Yadgir: ನರೇಗಾದಡಿ ಗ್ರಾಮೀಣ ಭಾಗದ ಕೆರೆಗಳ ಪುನರುಜ್ಜೀವನ
ಸಮಯ ಪಾಲಿಸಲು ಸಲಹೆ: ತಾಲೂಕುಮಟ್ಟದ ಅಧಿಕಾರಿಗಳು ಸಂಪೂರ್ಣ ಮಾಹಿತಿಯೊಂದಿಗೆ, ಸಮಯಕ್ಕೆ ಸರಿಯಾಗಿ ಕೆಡಿಪಿ ಸಭೆಗೆ ಹಾಜರಾಗಬೇಕು. ಕೆಲಸ ಮಾಡಿದರೆ ಸಾಲದು, ಸಮಯ ಪಾಲನೆಯನ್ನೂ ಮಾಡಬೇಕು ಎಂದು ಶಾಸಕಿ ಕುಸುಮಾವತಿ ಶಿವಳ್ಳಿ ಸಲಹೆ ನೀಡಿದರು. ಅಧಿಕಾರಿಗಳು ತಡವಾಗಿ ಬಂದಿದ್ದರಿಂದ ಬೆಳಗ್ಗೆ 11 ಗಂಟೆಗೆ ಆರಂಭವಾಗಬೇಕಿದ್ದ ಸಭೆ 12ಕ್ಕೆ ಶುರುವಾಯಿತು. ಹೀಗಾಗಿ ಸಮಯಕ್ಕೆ ಸರಿಯಾಗಿ ಸಭೆಗೆ ಹಾಜರಾಗುವಂತೆ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು.