Asianet Suvarna News Asianet Suvarna News

ಬಿಜೆಪಿ 150 ಸ್ಥಾನ ಗೆದ್ದು ಅಧಿಕಾರಕ್ಕೆ ಬರುವುದು ನಿಶ್ಚಿತ

ಬಿಜೆಪಿ  ಅಭಿವೃದ್ದಿಯ ಮಂತ್ರದಿಂದ 150 ಸ್ಥಾನಗಳನ್ನು ಗಳಿಸಿ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ವಿಶ್ವಾಸ ವ್ಯಕ್ತಪಡಿಸಿದರು.

It is certain that BJP will win 150 seats and come to power snr
Author
First Published Oct 30, 2022, 5:23 AM IST

  ನಂಜನಗೂಡು(ಅ.30): ಕಾಂಗ್ರೆಸ್‌(Congress)  ಪಕ್ಷದಲ್ಲಿ ಮುಂದಿನ ಮುಖ್ಯಮಂತ್ರಿ ವಿಚಾರವಾಗಿ ಒಳಜಗಳ ಹೆಚ್ಚಾಗಿದೆ. ಡಿಕೆಶಿಯವರನ್ನು, ಸಿದ್ದರಾಮಯ್ಯ ಸೋಲಿಸಲಿದ್ದಾರೆ. ಸಿದ್ದರಾಮಯ್ಯರನ್ನು ಡಿಕೆಶಿ (DKS) ಸೋಲಿಸುತ್ತಾರೆ, ಕೇವಲ ಕಾಂಗ್ರೇಸ್‌ ಪಕ್ಷದ ಒಳಬೇಗುದಿಯಿಂದ ಅಲ್ಲ ಬಿಜೆಪಿ (BJP)   ಅಭಿವೃದ್ದಿಯ ಮಂತ್ರದಿಂದ 150 ಸ್ಥಾನಗಳನ್ನು ಗಳಿಸಿ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ವಿಶ್ವಾಸ ವ್ಯಕ್ತಪಡಿಸಿದರು.

ತಾಲೂಕಿನ ಮಹದೇವನಗರದಲ್ಲಿರುವ ಜಯಲಕ್ಷ್ಮಿ  ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ನಡೆದ ನಂಜನಗೂಡು ವಿಧಾನಸಭಾ ಕ್ಷೇತ್ರದ ಕಾರ್ಯಕರ್ತರ ಸಂಕಲ್ಪ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದನ್ನು ತಪ್ಪಿಸಲು ಮತ್ತು ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದ ಖಳನಾಯಕ, ಗೋಮುಖ ರಾಜಕಾರಣಿ ಸಿದ್ದರಾಮಯ್ಯ, ಕಣ್ಣೀರಿನಲ್ಲಿ ನಾಟಕವಾಡುವ ಕುಮಾರಸ್ವಾಮಿ, ಅನೈತಿಕ ಒಪ್ಪದಿಂದ ಮೈತ್ರಿ ಸರ್ಕಾರ ತಂದರು. ಆದರೆ ಶಾಸಕರಿಗೆ ಅನುದಾನ ನೀಡದೆ, ಅಭಿವೃದ್ದಿ ಮಾಡದೆ ಕಾಲ ಕಳೆದರು. ಕರ್ನಾಟಕ ಕಲ್ಯಾಣ ರಾಜ್ಯವಾಗಬೇಕು, ಅಭಿವೃದ್ದಿಯಾಗಬೇಕೆಂಬ ಉದ್ದೇಶದಿಂದ 17 ಜನ ಆಡಳಿತ ಪಕ್ಷದ ಮಂತ್ರಿಗಳು ರಾಜೀನಾಮೆ ನೀಡಿ ಬಿಜೆಪಿ ಸೇರಿದರು. ಆಪರೇಷನ್‌ ಕಮಲ ಆಗಿರುವುದು ಮೈತ್ರಿ ಸರ್ಕಾರದ ದುರಾಡಳಿತ ಆಡಳಿತ ವೈಫಲ್ಯದಿಂದಾಗಿ ಎಂದರು.

ಶಾಸಕ ಬಿ. ಹರ್ಷವರ್ಧನ್‌ ಮಾತನಾಡಿ, ನಂಜನಗೂಡನ್ನು ಸ್ಯಾಟಲೈಟ್‌ ಟೌನ್‌ ಆಗಿ ನಿರ್ಮಿಸಲು ಶ್ರಮಿಸಿದ್ದೇನೆ. ಈ ಭಾಗದ ಬಹುದಿನ ಬೇಡಿಕೆಯಾಗಿದ್ದ ನುಗು ಏತ ನೀರಾವರಿ ಯೋಜನೆ, ಮತ್ತು 75 ಕೊಠಡಿಗಳ ಅತಿಥಿಗೃಹ ನಿರ್ಮಾಣಕ್ಕೆ ನವೆಂಬರ್‌ನಲ್ಲಿ ಮುಖ್ಯಮಂತ್ರಿಗಳಿಂದ ಚಾಲನೆ ನೀಡಲಾಗುವುದು. ಬದನವಾಳು ಭಾಗದ ಕೆರೆ ತುಂಬಿಸುವ ಯೋಜನೆಗೆ 70 ಕೋಟಿ ಅನುದಾನಕ್ಕೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದು ಅವರು ಒಪ್ಪಿಗೆ ಸೂಚಿಸುವ ವಿಶ್ವಾಸವಿದೆ. ಕ್ಷೇತ್ರದಲ್ಲಿ ನನ್ನ ಗೆಲುವಿಗೆ ಅಭಿವೃದ್ದಿ ಕೆಲಸಗಳೇ ಶ್ರೀರಕ್ಷೆಯಾಗಲಿದೆ ಎಂದರು.

ಇದಕ್ಕೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ಕುಮಾರ್‌ ಕಟೀಲ್‌ ಅವರು ಪಟ್ಟಣದ ಚಾಮಲಾಪುರ ಹುಂಡಿಯಲ್ಲಿ ಹಿಂದುಳಿದ ವರ್ಗದ ಮುಖಂಡರೊಡನೆ ಸಂವಾದ ನಡೆಸಿದರು. ಬಳಿಕ ಪೌರ ಕಾರ್ಮಿಕರ ಕಾಲೋನಿಗೆ ಬೇಟಿ ನೀಡಿ ಸನ್ಮಾನ ಸ್ವೀಕರಿಸಿದರು. ನಂತರ ಶ್ರೀಕಂಠೇಶ್ವರನ ದರ್ಶನ ಪಡೆದು, ತಾಲೂಕಿನ ಮಹದೇವನಗರದಲ್ಲಿ ಪಕ್ಷದ ಪದಾಧಿಕಾರಿಗಳ ಸಭೆ ನಡೆಸಿದರು.

ಕಾಂಪೋಸ್ಟ್‌ ಅಭಿವೃದ್ದಿ ನಿಗಮ ಅಧ್ಯಕ್ಷ ಎಸ್‌. ಮಹದೇವಯ್ಯ, ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್‌, ತಾಲೂಕು ಅಧ್ಯಕ್ಷ ಪಿ. ಮಹೇಶ್‌, ನಗರಾಧ್ಯಕ್ಷ ಶ್ರೀನಿವಾಸರೆಡ್ಡಿ, ಜಿಪಂ ಮಾಜಿ ಸದಸ್ಯರಾದ ಶಿವರಾಮು, ಚಿಕ್ಕರಂಗನಾಯಕ, ಎಸ್‌.ಎಂ. ಕೆಂಪಣ್ಣ, ಖಾದಿ ಮಂಡಳಿ ನಿಗಮ ಮಾಜಿ ಅಧ್ಯಕ್ಷ ಕೃಷ್ಣಪ್ಪಗೌಡ, ತಾಪಂ ಮಾಜಿ ಅಧ್ಯಕ್ಷ ಬಿ.ಎಸ್‌. ಮಹದೇವಪ್ಪ, ನಗರಸಭಾಧ್ಯಕ್ಷ ಎಚ್‌.ಎಸ್‌. ಮಹದೇವಸ್ವಾಮಿ, ನಗರಸಭಾ ಸದಸ್ಯ ದೇವು, ಮುಖಂಡರಾದ ಕೆಂಡಗಣ್ಣಪ್ಪ, ಸೋಮಣ್ಣ, ಪುಟ್ಟಸ್ವಾಮಿ, ಗಂಗಾಧರ್‌, ರಾಜೇಂದ್ರ, ಮೈ.ವಿ. ರವಿಶಂಕರ್‌ ಇದ್ದರು.

ಜನರೇ ದೂರ ಮಾಡುತ್ತಾರೆ  : 

ಮೈಸೂರು

ಮುಂದಿನ ಚುನಾವಣೆಯಲ್ಲಿ ಸ್ವಂತ ಬಲದ ಮೇಲೆ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಅವರು, ಕಾಂಗ್ರೆಸ್‌ ಮತ್ತು ಜೆಡಿಎಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ವಿದ್ಯಾರಣ್ಯಪುರಂನ ಬೂತಾಳೆ ಆಟದ ಮೈದಾನದಲ್ಲಿ ಕೆ.ಆರ್‌. ವಿಧಾನಸಭಾ ಕ್ಷೇತ್ರದ ಬೂತ್‌ ಅಧ್ಯಕ್ಷರ ಮತ್ತು ಬಿಎಲ್‌ಎಗಳ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಎಚ್‌.ಡಿ. ಕುಮಾರಸ್ವಾಮಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ವಿಲನ್‌ನಂತೆ ಕೆಲಸ ಮಾಡಿದರು. ಶಾಸಕರ ಸಮಸ್ಯೆಗಳಿಗೆ ಸ್ಪಂದಿಸದೆ ಕುಮಾರಸ್ವಾಮಿ ತಾಜ್‌ ಹೋಟೆಲ್‌ನಲ್ಲಿ ಕುಳಿತು ಆಡಳಿತ ನಡೆಸಿದ ಫಲವಾಗಿ ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿ ಆಗಲು ಕಾರಣವಾಯಿತು ಎಂದರು.

ಈಗ ಅಪ್ಪ- ಮಗ ಮತ್ತು ತಾಯಿ- ಮಗನ ಪಕ್ಷವನ್ನು ಜನರೇ ಸಮುದ್ರಕ್ಕೆ ಎಸೆಯುತ್ತಾರೆ. ರಾಜ್ಯದಲ್ಲಿ ನಡೆದ 21 ಕ್ಷೇತ್ರದ ಉಪ ಚುನಾವಣೆಯಲ್ಲಿ ನಾವು 17 ಸ್ಥಾನಗಳಲ್ಲಿ ಗೆದ್ದಿದ್ದೇವೆ. ಆಡಳಿತ ಪಕ್ಷದ ಸಚಿವರು, ಶಾಸಕರು ರಾಜೀನಾಮೆ ನೀಡಿ ವಿಪಕ್ಷಕ್ಕೆ ಸೇರಿಕೊಂಡು ಅಧಿಕಾರಕ್ಕೆ ಬರುವಂತೆ ಮಾಡಿದ್ದು ಈಗ ಇತಿಹಾಸ ಎಂದರು.

ಕಾಂಗ್ರೆಸ್‌ ನಾಯಕ ರಾಹುಲ್‌ಗಾಂಧಿ ನಡೆಸಿದ ಭಾರತ್‌ ಜೋಡೋ ಯಾತ್ರೆಯಿಂದ ಕಾಂಗ್ರೆಸ್‌ಗೆಯಾವುದೇ ಪ್ರಯೋಜನ ಆಗುವುದಿಲ್ಲ. ಪಂಚರತ್ನ ಯಾತ್ರೆಯಿಂದಲೂ ಜನರು ಮರುಳಾಗಲ್ಲ. ಬಿಜೆಪಿ ಪರವಾಗಿ ಅಲೆ ಎದ್ದಿದೆ. ಮುಂದಿನ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆದ್ದು ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ, ಕಾಂಗ್ರೆಸ್‌, ಜೆಡಿಎಸ್‌ ಸಮುದ್ರಕ್ಕೆ ಬೀಳಲಿವೆ. ಆಗ ಅವ್ವ-ಮಗ, ಅಪ್ಪ-ಮಗನ ಪಕ್ಷಕ್ಕೂ ಉಳಿಗಾಲವಿಲ್ಲ ಎಂದು ಭವಿಷ್ಯ ನುಡಿದರು.

ಶಾಸಕ ಎಸ್‌.ಎ. ರಾಮದಾಸ್‌ ಮಾತನಾಡಿ, ಜಾತಿ, ಮತ ಮೀರಿ ಜವಾಬ್ದಾರಿ ನಿರ್ವಹಣೆ ಮಾಡಬೇಕು. ಚುನಾವಣೆಯಲ್ಲೂ ವೆಚ್ಚ ಮಾಡದೆ ಸಾಮಾನ್ಯರನ್ನು ಗೆಲ್ಲಿಸುವ ಕೆಲಸ ಆಗಬೇಕು. ಎಲ್ಲಾ ಬೂತ್‌ಗಳು ಬಿಜೆಪಿ ಬೂತ್‌ ಆಗಬೇಕು. ಕಳೆದ ಬಾರಿ ಕಡಿಮೆ ಲೀಡ್‌ ಇದ್ದವೂ ಸೇರಿ ಈ ಬಾರಿ ಹೆಚ್ಚಿನ ಮತಗಳು ಬರಬೇಕು. ಎಸ್‌.ಎಂ. ಕೃಷ್ಣ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದಾಗ ಶಂಕ ಊದುವ ಮೂಲಕ 142 ಸ್ಥಾನ ಪಡೆದಿದ್ದರು. ಈಗ, ಅವರೂ ನಮ್ಮ ಜೊತೆ ಇದ್ದಾರೆ. ದೇಶ ಕಂಡ ಯುಗಪುರುಷ ಮೋದಿ ಎಂದು ಬಿಜೆಪಿಗೆ ಬಂದಿದ್ದಾರೆ. ಮತ್ತೆ 10 ವರ್ಷ ಅವರೇ ಪ್ರಧಾನಿ ಆಗಲಿ ಎಂದು ಆಶಿಸಿ ಕಟೀಲ್‌ ಅವರು ಶಂಕನಾದ ಮೊಳಗಿಸಿದ್ದಾರೆ ಎಂದರು

Follow Us:
Download App:
  • android
  • ios