ಅಪೂರ್ಣಗೊಂಡ ಕಾಮಗಾರಿ ಉದ್ಘಾಟಿಸುವುದು ನಾಚಿಕೆಗೇಡು : ಮಾಜಿ ಸಚಿವ ಕೆ. ವೆಂಕಟೇಶ್
ಚುನಾವಣೆ ಸಮೀಪಿಸುತ್ತಿದೆ ಎಂದು ಅಪೂರ್ಣಗೊಂಡಿರುವ ಕಾಮಗಾರಿಗಳನ್ನು ಶಾಸಕ ಕೆ.ಮಹದೇವ್ ಉದ್ಘಾಟನೆ ಮಾಡಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ ಎಂದು ಮಾಜಿ ಸಚಿವ ಕೆ. ವೆಂಕಟೇಶ್ ಹೇಳಿದರು.
ಪಿರಿಯಾಪಟ್ಟಣ : ಚುನಾವಣೆ ಸಮೀಪಿಸುತ್ತಿದೆ ಎಂದು ಅಪೂರ್ಣಗೊಂಡಿರುವ ಕಾಮಗಾರಿಗಳನ್ನು ಶಾಸಕ ಕೆ.ಮಹದೇವ್ ಉದ್ಘಾಟನೆ ಮಾಡಲು ಹೊರಟಿರುವುದು ನಾಚಿಕೆಗೇಡಿನ ಸಂಗತಿ ಎಂದು ಮಾಜಿ ಸಚಿವ ಕೆ. ವೆಂಕಟೇಶ್ ಹೇಳಿದರು.
ತಾಲೂಕಿನ ಹಿಟ್ನೆಹೆಬ್ಬಾಗಿಲು ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿ, ಕೆ. ಮಹದೇವ್ ಶೇ. 10 ಕಮಿಷನ್ ಗಿರಾಕಿ ಎಂದು ತಾಲೂಕಿನಲ್ಲಿ ಜನಜನಿತವಾಗಿದೆ. ನಾನು ಅಧಿಕಾರದಲ್ಲಿದ್ದ ಸಮಯ ಮಂಜೂರು ಮಾಡಿಸಿಕೊಂಡು ಬಂದಿದ್ದ ಕೆರೆ ನೀರು ತುಂಬಿಸುವ ಯೋಜನೆಯು ಇನ್ನೂ ಶೇ. 50ರಷ್ಟುಕಾಮಗಾರಿಯೂ ಪೂರ್ಣಗೊಳ್ಳದೆ ಕೆರೆಗಳಿಗೆ ಪ್ರಾಯೋಗಿಕವಾಗಿ ನೀರು ಹರಿಸಲು ವಿದ್ಯುತ್ ಸಂಪರ್ಕ ಸಹ ಪಡೆದಿಲ್ಲ. ಇದನ್ನು ಪೂರ್ಣಗೊಂಡಿದೆ ಎನ್ನುತ್ತಿರುವ ಆಯೋಗ್ಯ ಶಾಸಕನಿಗೆ ಚುನಾವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಡಿಕಾರಿದರು.
ಪಟ್ಟಣಕ್ಕೆ ಜನರು ನೀವು ಕೊಟ್ಟಕೊಡುಗೆ ಏನು ಎಂದು ಶಾಸಕನನ್ನು ಪ್ರಶ್ನಿಸಿದರೆ ಪಟ್ಟಣದಲ್ಲಿ ಆಸ್ತಿ ಮಾಡಿರುವುದಷ್ಟೇ ಅವರ ಸಾಧನೆ ಎನ್ನುವಂತಾಗಿದೆ. 8 ವರ್ಷ ಆಡಳಿತ ನಡೆಸಿದ ನರೇಂದ್ರ ಮೋದಿಯವರ ಸರ್ಕಾರ ಏನು ಮಾಡಿದೆ ಎಂಬುದನ್ನು ಜನರು ಯೋಚಿಸಿ ನಿರ್ಧಾರ ಕೈಗೊಳ್ಳಿ ಸರ್ವ ಜನಾಂಗದ ಅಭಿವೃದ್ಧಿಗೆ ಕಾಂಗ್ರೆಸ್ ಗೆ ಬೆಂಬಲಿಸಿ ಎಂದು ಕೋರಿದರು.
ಕೆಪಿಸಿಸಿ ಸದಸ್ಯ ಅನಿಲ್‌ಕುಮಾರ್ ಮಾತನಾಡಿ, ತಾಲೂಕಿನ ಜನತೆ ಈ ಬಾರಿ ಬದಲಾವಣೆ ಬಯಸಿದ್ದು ಎಲ್ಲಾ ಗ್ರಾಮಗಳಲ್ಲಿ ಕಾಂಗ್ರೆಸ್ ಪರ ಹಬ್ಬದ ವಾತಾವರಣವಿದೆ ಇದು ಹಾಲಿ ಶಾಸಕರ ದುರಾಡಳಿತ ಅಂತ್ಯಗೊಳ್ಳುವ ಶುಭ ಸೂಚನೆಯಾಗಿದೆ ಎಂದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ.ಟಿ. ಸ್ವಾಮಿ, ರಹಮತ್ ಜಾನ್ ಬಾಬು, ಮುಖಂಡರಾದ ಎಚ್.ಡಿ. ಗಣೇಶ್, ಅಮಿತ್ ದೇವರಹಟ್ಟಿ, ಟಿ. ಈರಯ್ಯ, ಪ್ರಕಾಶ್, ಬಿ.ಜೆ. ಬಸವರಾಜ…, ಬಿ.ಎಸ್. ರಾಮಚಂದ್ರ, ಬಿ.ವಿ. ಜವರೇಗೌಡ, ಲೋಕೇಶ್, ಮೋಹನ್ ಮಾಸ್ಟರ್, ಪಿ. ಮಹದೇವ್, ಕೆ. ಹೊಲದಪ್ಪ, ಪರಮೇಶ್, ತಮ್ಮಣ್ಣಯ್ಯ, ವಿಷಕಂಠಯ್ಯ, ಸುಧಾ, ಮೀನಾಕ್ಷಮ್ಮ, ಕಾಮರಾಜ…, ಬಿ. ಮುಖೇಶ್‌ಕುಮಾರ್, ಪಕ್ಷದ ವಿವಿಧ ಘಟಕ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಇದ್ದರು.