ಸೋಮರಡ್ಡಿ ಅಳವಂಡಿ

ಕೊಪ್ಪಳ(ಫೆ.19): ಕನಕಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಟ್ಕಾ, ಒಸಿ ಸದ್ದು ಬಲು ಜೋರಾಗಿಯೇ ಕೇಳಿ ಬರುತ್ತಿದೆ. ಅದರಲ್ಲೂ ಇದು ಜಿಲ್ಲಾದ್ಯಂತ ಪಸರಿಸುತ್ತಿರುವುದು ಗುಟ್ಟಾಗಿ ಉಳಿದಿಲ್ಲ. ಇದೆಲ್ಲಕ್ಕಿಂತ ಅಚ್ಚರಿ ಎಂದರೆ ದೇಶದಾದ್ಯಂತ ಒಸಿ ಕಂಪನಿಗಳು ಬಂದಾಗಿವೆ ಎನ್ನುತ್ತಿರುವಾಗಲೇ ಅಂಥದ್ದೊಂದು ಒಸಿ ಕಂಪನಿ ಕನಕಗಿರಿ ವಿಧಾನಸಭಾ ಕ್ಷೇತ್ರದಲ್ಲಿಯೇ ಮೊಳಕೆಯೊಡೆದಿದೆ ಎನ್ನಲಾಗುತ್ತಿದೆ. ಅದರ ಹೆಸರು ಶ್ರೀದೇವಿ ಮೇನ್‌, ನೈಟ್‌ ಪೆನಲ್‌ ಚಾರ್ಟ್‌. ಅಧಿ​ಕಾ​ರಿ​ಯೊ​ಬ್ಬರು ಇದರ ಸಂಸ್ಥಾಪಕರು ಎನ್ನುವುದು ವಿಷಾದದ ಸಂಗ​ತಿ. ಹೌದು, ಕನಕಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಒಸಿಯಾಟ ಬರೋಬ್ಬರಿ ಸದ್ದು ಮಾಡುತ್ತಿದೆ. ಇದರ ಕುರಿತು ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಇದು ಜಿಲ್ಲಾದ್ಯಂತ ಹರಡುತ್ತಿದ್ದು, ಈಗಲೇ ಇದನ್ನು ನಿಯಂತ್ರಣ ಮಾಡದಿದ್ದರೆ ದೊಡ್ಡ ಅನಾಹುತವಾಗುವುದರಲ್ಲಿ ಎರಡು ಮಾತಿಲ್ಲ ಎಂದು ವಿಶ್ಲೇಷಣೆ ಮಾಡಲಾಗುತ್ತದೆ.

ಕಾಂಗ್ರೆಸ್‌ ಪಕ್ಷದ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಅವರು ಆರೋಪಿಸಿರುವ ಶ್ರೀದೇವಿ ಒಸಿ ಕಂಪನಿಯ ಚಾರ್ಟ್‌ ಕನ್ನಡಪ್ರಭಕ್ಕೆ ಲಭಿಸಿದೆ. ಇದು ಕಳೆದೊಂದು ವರ್ಷದ ಹಿಂದೆಯೇ ತಲೆ ಎತ್ತಿದೆ. ನಾನಾ ಕಂಪನಿಗಳ ಹೆಸರಿನಲ್ಲಿ ಒಸಿ ಈಗಲೂ ನಡೆಯುತ್ತಿರುವುದು ಗುಟ್ಟಾಗಿ ಇಲ್ಲ. ಆದರೆ, ಒಸಿ ಕಂಪನಿಯೊಂದು ಕನಕಗಿರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ತಲೆ ಎತ್ತಿ, ಜಿಪಂ ಕ್ಷೇತ್ರವೊಂದರಲ್ಲಿ ತನ್ನ ಕೇಂದ್ರ ಕಚೇರಿ ಮಾಡಿಕೊಂಡಿದ್ದು, ಇದಕ್ಕೊಬ್ಬ ಅಧಿಕಾರಿ ಸೂತ್ರದಾರ ಎನ್ನುವುದು ಬಹಿರಂಗವಾಗಿಯೇ ಚರ್ಚೆಯಾಗುತ್ತಿದೆ.

ಕಾಂಗ್ರೆಸ್‌ ಪಕ್ಷದ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಅವರು ಬಹಿರಂಗ ಭಾಷಣದಲ್ಲಿಯೇ ಈ ವಿಷಯ ಪ್ರಸ್ತಾಪ ಮಾಡಿ, ಕಂಪನಿಯ ಹೆಸರು ಸಹ ಹೇಳಿದ್ದರು. ಇದಕ್ಕೆ ಸಂಬಂಧಿಸಿದ ದಾಖಲೆಗಳು ನನ್ನ ಬಳಿ ಇವೆ ಎಂದು ಘಂಟಾಘೋಷವಾಗಿ ಹೇಳಿದ್ದರು. ಇದಕ್ಕೆ ಪೂರಕ ಎನ್ನುವಂತೆ ಇದುವರೆಗೂ ಕೇಳಿಯೇ ಇರದೆ ಇದ್ದ ಶ್ರೀದೇವಿ ಒಸಿ ಕಂಪನಿಯ ಚಾರ್ಟ್‌ ಈಗ ಸಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

'ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸುವ ಯೋಗ್ಯತೆ ಯಾರಿಗೂ ಇಲ್ಲ'

ಯಾರು ಆ ಅಧಿಕಾರಿ?:

ಶ್ರೀ ದೇವಿ ಕಂಪನಿಯ ಒಸಿ ಇದೆ ಎನ್ನುವ ಸುದ್ದಿ ಹರಡಿದಾಗಲೇ ಎದ್ದಿದ್ದ ಈ ಪ್ರಶ್ನೆ ಈಗ ಒಸಿ ಚಾರ್ಟ್‌ ಸಿಕ್ಕಮೇಲೆ ಇನ್ನಷ್ಟುದೊಡ್ಡದಾಗಿ ಎದ್ದಿದೆ. ಇದರ ಸೂತ್ರದಾರರು ಅಧಿಕಾರಿಗಳು ಎಂದು ಹೇಳಲಾಗುತ್ತಿದ್ದು, ಯಾರಿರಬಹುದು ಎನ್ನುವ ಮಾತು ಪ್ರಶ್ನೆ ಚರ್ಚೆಗೆ ಗ್ರಾಸ​ವಾ​ಗಿದೆ. ಇದಕ್ಕೆ ಈಗ ಪೊಲೀಸ್‌ ಇಲಾಖೆಯೇ ಕಾರ್ಯಚರಣೆ ನಡೆಸಬೇಕಾಗಿದೆ. ಶ್ರೀದೇವಿ ಒಸಿ ಕಂಪನಿಯ ರೂವಾರಿ ಅಥವಾ ಕಂಪನಿಯ ಮಾಲೀಕರು ಯಾರು ಎನ್ನುವುದನ್ನು ಪತ್ತೆ ಮಾಡಿದರೆ ಬಣ್ಣ ಬಯಲಾಗುತ್ತದೆ.

ರೆಕಾರ್ಡ್‌ ಆಗಿದೆಯಂತೆ:

ಈ ಒಸಿಯ ಕುರಿತು ಅಧಿಕಾರಿ ಮಾತನಾಡಿದ್ದು ರೆಕಾರ್ಡ್‌ ಆಗಿದೆ ಎಂದು ಹೇಳಲಾಗುತ್ತದೆ. ಇದನ್ನು ಸಂಬಂಧಪಟ್ಟವರಿಗೆ ತಲುಪಿಸುವ ಪ್ರಯತ್ನವೂ ನಡೆದಿದೆ. ಅಧಿಕಾರಿಯೇ ಆಗಿರುವುದರಿಂದ ಹಿಂದೇಟು ಹಾಕಲಾಗುತ್ತಿದೆ ಎಂದು ಹೇಳಲಾಗುತ್ತದೆ.

ಇದು ಕೇವಲ ಒಬ್ಬ ಅಧಿಕಾರಿಯಿಂದ ಮಾತ್ರ ಕಂಪನಿ ನಡೆಯುತ್ತದೆ ಎಂದರೆ ಕಷ್ಟ ಸಾಧ್ಯ. ಹೀಗಾಗಿ, ಇದರ ಹಿಂದೆ ಯಾರಾರ‍ಯರು ಇದ್ದಾರೆ ಎಂದು ಹೇಳಲಾಗುತ್ತದೆ. ಇದೆಲ್ಲವನ್ನು ಸಮಗ್ರ ತನಿಖೆ ಮಾಡಬೇಕು ಎನ್ನುವ ಆಗ್ರಹವೂ ಕೇಳಿ ಬರುತ್ತಿದೆ.

ಪೊಲೀಸ್‌ ಅಧಿಕಾರಿಗಳು ಉತ್ತರಿಸಲಿ?:

ಇದಕ್ಕೆ ಈಗ ಪೊಲೀಸ್‌ ಅಧಿಕಾರಿಗಳೇ ಉತ್ತರ ನೀಡಬೇಕು. ಇಂಥದ್ದೊಂದು ಗಂಭೀರ ಆರೋಪ ಬಂದಿರುವುದು ಹಾಗೂ ಒಸಿ ಚಾರ್ಟ್‌ ಸಹ ಹರಿದಾಡುತ್ತಿರುವುದರಿಂದ ಅದರ ಜಾಡು ಹಿಡಿದು ತನಿಖೆ ನಡೆಸಬೇಕು ಎನ್ನುವ ಆಗ್ರಹ ಕೇಳಿ ಬರುತ್ತಿದೆ.