ಯಾದಗಿರಿ: ರಾಜಕೀಯ ಪ್ರಭಾವದಿಂದ ದಿಕ್ಕುತಪ್ಪುತ್ತಿದೆ ಅಕ್ಕಿ ಅಕ್ರಮ ತನಿಖೆ
ರಾಜಕೀಯ ಪಕ್ಷಗಳಿಗೆ ಕೋಟ್ಯಂತರ ರು. ದೇಣಿಗೆ ನೀಡಿದ್ದ ಕಿಂಗ್‌ಪಿನ್, ಲೋಕಸಭೆ ಚುನಾವಣೆವರೆಗೆ ಕ್ರಮ ಕೈಗೊಳ್ಳದಂತೆ ರಾಜಕೀಯ ಪ್ರಭಾವ: ಆರೋಪ
ಯಾದಗಿರಿ(ಡಿ.23): ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ಕಿ ಅಕ್ರಮ ದಂಧೆಕೋರರು ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳಿಗೆ ಕೋಟ್ಯಂತರ ರುಪಾಯಿ ದೇಣಿಗೆ ನೀಡಿದ್ದರಿಂದ, ಅಂತಹವರನ್ನು ರಕ್ಷಿಸುವ ಕೆಲಸಕ್ಕೆ ರಾಜಕೀಯ ಪ್ರಭಾವಿಗಳೇ ಮುಂದಾಗುತ್ತಿದ್ದಾರೆಂದು ಆರೋಪಿಸಿರುವ ಪ್ರಾಂತ ರೈತ ಸಂಘದ ಚೆನ್ನಪ್ಪ ಆನೆಗುಂದಿ, ಶಹಾಪುರದಲ್ಲಿ ನಡೆದ ಅಕ್ಕಿ ಅಕ್ರಮ ಕುರಿತು ಬೆಂಗಳೂರಿನ ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ತೆರಳಿ ಶನಿವಾರ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಪೊಲೀಸ್ ಮಹಾ ನಿರ್ದೇಶಕ (ಹೆಚ್ಚುವರಿ) ಹಿತೇಂದ್ರ ಅವರನ್ನು ಭೇಟಿಯಾಗಿ ದೂರಿದ್ದಾರೆ.
ಜಿಲ್ಲೆಯ ಶಹಾಪುರದಲ್ಲಿ ನಡೆದ 6 ಸಾವಿರ ಕ್ವಿಂಟಲ್ ಪಡಿತರ ಅಕ್ಕಿ ನಾಪತ್ತೆ ಪ್ರಕರಣವು ರಾಜಕೀಯ ಪ್ರಭಾವದಿಂದಾಗಿ ದಿಕ್ಕು ತಪ್ಪಿಸಲಾಗುತ್ತಿದೆ. ನೂರಾರು ಕೋಟಿ ರು.ಗಳ ವಹಿವಾಟು ನಡೆಸುವ ಈ ವ್ಯಕ್ತಿ, ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಜಕೀಯ ಪಕ್ಷವೊಂದರ ಅಭ್ಯರ್ಥಿಗೆ ಭಾರಿ ಪ್ರಮಾಣದಲ್ಲಿ ಹಣ ನೀಡಿದ್ದನೆಂದು ಹೇಳಲಾಗುತ್ತಿದೆ.
ಯಾದಗಿರಿ: ಸಾರಿಗೆ ಬಸ್‌ನಲ್ಲಿ ಮಗುವಿಗೆ ಜನ್ಮ ನೀಡಿದ ತಾಯಿ..!
ಇದರಿಂದಾಗಿ, ರಾಜಕೀಯ ಪ್ರಭಾವದಿಂದ ಆತನ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕಲಾಗುತ್ತಿದೆ, ಮುಂಬರುವ ಲೋಕಸಭಾ ಚುನಾವಣೆಯಲ್ಲಿಯೂ ರಾಜಕೀಯ ಪಕ್ಷ ಈತನಿಂದ ದೇಣಿಗೆ ನಿರೀಕ್ಷಿಸುತ್ತಿರುವುದರಿಂದ ಅಕ್ರಮದ ಕಿಂಗ್‌ಪಿನ್‌ನನ್ನು ಪಾರು ಮಾಡುವ ಹುನ್ನಾರ ನಡೆಯುತ್ತಿದೆ ಎಂದು ದೂರಿದ್ದಾರೆ.
ಅಕ್ಕಿ ಅಕ್ರಮದಲ್ಲಿ ಕೇಳಿ ಬರುತ್ತಿರುವ ವ್ಯಕ್ತಿಯನ್ನೇ ಡಿವೈಎಸ್ಪಿ ಸನ್ಮಾನಿಸುವ ಮೂಲಕ ಇಲ್ಲಿ ಪೊಲೀಸ್ ಅಧಿಕಾರಿಗಳ ಶಾಮೀಲೂ ಶಂಕಿಸಲಾಗಿದೆ. ಸುರಪುರ ಡಿವೈಎಸ್ಪಿ ಜಾವೇದ್ ಇನಾಂದಾರ್ ಸೇರಿ ಅಲ್ಲಿನ ಕೆಲವರ ವರ್ಗಾಯಿಸಿ ಬೇರೊಬ್ಬ ದಕ್ಷ ಅಧಿಕಾರಿಗೆ ಇದರ ತನಿಖೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.
ರಾಜಕೀಯ ಪ್ರಭಾವದಿಂದ ಅಕ್ಕಿ ಅಕ್ರಮದ ಕಿಂಗ್‌ಪಿನ್ ರಕ್ಷಿಸಲಾಗುತ್ತಿದೆ. ವಿಧಾನಸಭೆ ಚುನಾವಣೆ ವೇಳೆ ರಾಜಕೀಯ ಮುಖಂಡರಿಗೆ ಕೋಟ್ಯಂತರ ರುಪಾಯಿಗಳ ಹಣ ಈತ ನೀಡಿದ್ದರಿಂದ, ಮಲ್ಲಿಕ್ ವಿರುದ್ಧ ಕ್ರಮಕ್ಕೆ ಅನುಮತಿ ಸಿಗುತ್ತಿಲ್ಲ ಎನ್ನಲಾಗುತ್ತಿದೆ. ಮುಂಬರುವ ಲೋಕಸಭೆ ಚುನಾವಣೆವರೆಗೂ ಈತನಿಂದ ಹಣ ನಿರೀಕ್ಷೆ ಮಾಡಿದ ರಾಜಕೀಯ ಪ್ರಭಾವಿಗಳು, ಅಕ್ಕಿ ಅಕ್ರಮದ ಕಿಂಗ್‌ಪಿನ್‌ನನ್ನು ಪಾರು ಮಾಡವ ಯತ್ನ ನಡೆಸಿದ್ದಾರೆ ಎಂದು ಯಾದಗಿರಿ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಚೆನ್ನಪ್ಪ ಆನೆಗೊಂದಿ ತಿಳಿಸಿದ್ದಾರೆ.