Asianet Suvarna News Asianet Suvarna News

ಚಿತ್ರದುರ್ಗ: ವಾಹನಗಳೇ ಓಡಾಡದ ಜೈಲು ರಸ್ತೆಯಲ್ಲಿ ಡಿವೈಡರ್‌ ಅಳವಡಿಕೆ

ವಾಹನಗಳೇ ಓಡಾಡದ ಜೈಲು ರಸ್ತೆಯಲ್ಲಿ ಅಧಿಕಾರಿಗಳು ಎದೆ ಮಟ್ಟದ ಡಿವೈಡರ್‌ ನಿರ್ಮಿಸಿ ಸರ್ಕಾರಿ ಅನುದಾನ ಅಪವ್ಯಯಕ್ಕೆ ಷರಾ ಬರೆದಿದ್ದಾರೆ.

Installation of Dividers on Jail Road in Chitradurga grg
Author
First Published Jan 20, 2023, 12:00 AM IST

ಚಿಕ್ಕಪ್ಪನಹಳ್ಳಿ ಷಣ್ಮುಖ

ಚಿತ್ರದುರ್ಗ(ಜ.20):  ದಟ್ಟಜನ ಸಂದಣಿ ಹಾಗೂ ವಾಹನ ಸಂಚಾರ ತಹಬದಿಗೆ ತಂದು ಸುರಕ್ಷಿತ ಪ್ರಯಾಣಕ್ಕಾಗಿ ರಸ್ತೆ ವಿಭಜಕಗಳ ಅಳವಡಿಸಲಾಗುತ್ತದೆ. ಎದುರುಗಡೆಯಿಂದ ಬರುವ ವಾಹನಗಳು ಮುಖಾಮುಖಿಯಾಗದಿರಲಿ, ಸರಣಿ ಅಪಘಾತಗಳು ಸಂಭವಿಸದಿರಲಿ ಎಂಬುದು ರಸ್ತೆ ವಿಭಜಕಗಳ ಅಳವಡಿಕೆ ಹಿಂದಿನ ಆಶಯ. ವಿಚಿತ್ರವೆಂದರೆ ಈ ಆಶಯಗಳು ಚಿತ್ರದುರ್ಗಲ್ಲಿ ಮೂಲೆ ಗುಂಪಾಗಿವೆ. ವಾಹನಗಳೇ ಓಡಾಡದ ಜೈಲು ರಸ್ತೆಯಲ್ಲಿ ಅಧಿಕಾರಿಗಳು ಎದೆ ಮಟ್ಟದ ಡಿವೈಡರ್‌ ನಿರ್ಮಿಸಿ ಸರ್ಕಾರಿ ಅನುದಾನ ಅಪವ್ಯಯಕ್ಕೆ ಷರಾ ಬರೆದಿದ್ದಾರೆ.

ಊರ ಮಧ್ಯಭಾಗದಲ್ಲಿ ಕಿರಿದಾದ ರಸ್ತೆಯಲ್ಲಿ ಡಿವೈಡರ್‌ಗಳ ಅಳವಡಿಸಿ ಸುಗಮ ಸಂಚಾರಕ್ಕೆ ಅಡ್ಡಿಯನ್ನುಂಟು ಮಾಡಿದ ಕೀರ್ತಿಗೆ ಪಾತ್ರರಾಗಿದ್ದ ಅಧಿಕಾರಿಗಳು ಇದೀಗ ವಿರುದ್ಧ ದಿಕ್ಕಿನಲ್ಲಿ ಹೆಜ್ಜೆ ಹಾಕಿದ್ದಾರೆ. ವಾಹನ ಸಂಚಾರವೇ ಇಲ್ಲದ ಕಡೆ ವಿಶಾಲವಾದ ಸಿಸಿ ರಸ್ತೆ ನಿರ್ಮಿಸಿ ಡಿವೈಡರ್‌ ಅಳವಡಿಸಿದ್ದಾರೆ. ಇನ್ನೇನು ಡಿವೈಡರ್‌ಗೆ ಮಣ್ಣು ತುಂಬಿ, ವಿದ್ಯುತ್‌ ದೀಪ ಅಳವಡಿಸಿ, ಅಲಂಕಾರಿಕ ಗಿಡಗಳ ನೆಡುವುದಷ್ಟೇ ಬಾಕಿ ಇದೆ.

ಅಬ್ಬಬ್ಬಾ! ಡಿವೈಡರ್‌ ಮೇಲೆ ಗಿಡ ನೆಟ್ಟು ಸಾಕೋಕೆ 1.80 ಕೋಟಿ ರು..!

ಹಳೇ ಬೆಂಗಳೂರು ರಸ್ತೆಯಲ್ಲಿ ಇಂತಹದ್ದೊಂದು ಸಿಸಿ ರಸ್ತೆ, ಡಿವೈಡರ್‌ ಚಕಮಕಿ ನಡೆದಿದೆ. ಈ ಭಾಗದಲ್ಲಿ ಕೆಲ ಗಣ್ಯರು, ರಾಜಕಾರಣಿಗಳು ನೂತನ ಲೇಔಟ್‌ ನಿರ್ಮಿಸಿದ್ದಾರೆ. ಈ ಲೇ ಔಟ್‌ಗಳಲ್ಲಿ ಅಲ್ಲೊಂದು, ಇಲ್ಲೊಂದು ಮನೆಗಳ ನಿರ್ಮಾಣವಾಗುತ್ತಿರುವುದ ಬಿಟ್ಟರೆ ಉಳಿದಂತೆ ಎಲ್ಲವು ಖಾಲಿ, ಖಾಲಿ. ಅನತಿ ದೂರದಲ್ಲಿ ಜೈಲು ಇದೆ. ವಿಚಾರಣಾಧೀನ ಖೈದಿಗಳನ್ನು ಕರೆತರಲು ದಿನಕ್ಕೆ ಒಂದು ಬಾರಿ ಮಾತ್ರ ಪೊಲೀಸ್‌ ವಾಹನ ಈ ರಸ್ತೆಯಲ್ಲಿ ಸಂಚರಿಸುತ್ತದೆ. ಉಳಿದಂತೆ ಮುಂಜಾನೆ ಒಂದಿಷ್ಟುಮಂದಿ ವಾಕ್‌ ಮಾಡಲು ಈ ರಸ್ತೆ ಬಳಸಿಕೊಳ್ಳುತ್ತಾರೆ. ಇಂತಹ ವಿರಳ ಸಂಚಾರದ ರಸ್ತೆಗೆ ಡಿವೈಡರ್‌ ಅಗತ್ಯವಿತ್ತೇ ಎಂದು ಜನರು ಪ್ರಶ್ನಿಸುತ್ತಿದ್ದಾರೆ.

ಎಲ್ಲ ಲೈಟ್‌ ಕಂಬದ ಮಹಿಮೆ:

ಡಿವೈಡರ್‌ ಅಳವಡಿಕೆ ಹಿಂದೆ ಸಂಚಾರ ತಹಬದಿಗೆ ತರುವ ಉದ್ದೇಶಗಳಿಗಿಂತ ಮಿಗಿಲಾಗಿ ವಿದ್ಯುತ್‌ ಕಂಬ ಅಳವಡಿಕೆಯ ಕಸರತ್ತುಗಳಿವೆ. ಈ ವಿದ್ಯುತ್‌ ಕಂಬಗಳಲ್ಲಿ ಅಪಾರ ಪ್ರಮಾಣದ ಕಿಕ್‌ಬ್ಯಾಕ್‌ ಬರುತ್ತದೆ ಎಂಬ ಕಾರಣಕ್ಕೆ ಡಿವೈಡರ್‌ಗಳ ಅಳವಡಿಸಲಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತವೆ. ಹಾಲಿ ಒಂದು ಮೀಟರ್‌ ಡಿವೈಡರ್‌ಗೆ ಬರೋಬ್ಬರಿ ಹತ್ತು ಸಾವಿರ ರುಪಾಯಿ ವ್ಯಯ ಮಾಡಲಾಗುತ್ತಿದೆ. ಅದೇ ರೀತಿ ವಿದ್ಯುತ್‌ ಕಂಬಕ್ಕೆ ಒಂದೊಂದು ಬಾರಿ, ಒಂದೊಂದು ಮೊತ್ತ ನಮೂದಿಸಲಾಗಿದೆ. 70 ಸಾವಿರದಿಂದ ಒಂದುವರೆ ಲಕ್ಷದವರೆಗೂ ಒಂದು ವಿದ್ಯುತ್‌ ಕಂಬಕ್ಕೆ ವ್ಯಯ ಮಾಡಲಾಗಿದೆ.

ಈ ಬೀದಿ ದೀಪ ಕಂಬದ ಮಹಿಮೆ ಇಡೀ ಚಿತ್ರದುರ್ಗ ನಗರವನ್ನು ಆಕ್ರಮಿಸಿಕೊಂಡಿದೆ. ಎಲ್ಲೆಂದರಲ್ಲಿ ರಸ್ತೆ ಅಂಚಿನಲ್ಲಿ ಕಂಬಗಳು ರಾಶಿ ಬಿದ್ದಿವೆ. ಕೆಲವಂತೂ ನೋಡಲು ಹಳೆಯವು ಎಂಬಂತೆ ಭಾಸವಾಗುತ್ತಿವೆ. ಮದಕರಿನಾಯಕ ಸರ್ಕಲ್‌, ಗಾಂಧಿ ಸರ್ಕಲ್‌ನ ರಸ್ತೆ ಬದಿಯಲ್ಲಿ ಕಂಬಗಳು ನೆಲದ ಮೇಲೆ ಹರಡಿವೆ. ಈ ಕಂಬಗಳ ಗುಣಮಟ್ಟಹೇಗಿದೆ, ಯಾರು ಟೆಂಡರ್‌ ಪಡೆದವರು, ನಿರ್ವಹಣೆ ಹೇಗೆ ಎಂಬಿತ್ಯಾದಿ ಮಾಹಿತಿಗಳನ್ನು ಯಾರೂ ನೀಡುತ್ತಿಲ್ಲ. ಎಲ್ಲವೂ ಗುಪ್ತಗಾಮಿನಿಯಾಗಿ ಹರಿದಾಡುತ್ತಿವೆ. ಸರ್ಕಾರಿ ಅನುದಾನದ ಅಪವ್ಯಯ ನಿರಂತರವಾಗಿದೆ.

Follow Us:
Download App:
  • android
  • ios