'ಬಡವರ ಹಸಿವು ತಣಿಸಲಿದೆ ಇಂದಿರಾ ಕ್ಯಾಂಟೀನ್'
ಇಂದು ಇಂಡಿ ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ಆರಂಭ| ಶಾಸಕ ಯಶವಂತರಾಯಗೌಡ ಪಾಟೀಲ ಅವರಿಂದ ಉದ್ಘಾಟನೆ| ಪಟ್ಟಣದ ಬಸ್ ಡಿಪೋ ಹಾಗೂ ಮಿನಿ ವಿಧಾನಸೌಧ ಮಧ್ಯದಲ್ಲಿ ಈ ಇಂದಿರಾ ಕ್ಯಾಂಟೀನ್ ಆರಂಭ| ನಿತ್ಯ ಸರ್ಕಾರಿ ಕಚೇರಿಗಳಿಗೆ ಕೆಲಸ, ಕಾರ್ಯಗಳಿಗೆ ಬರುವ ಗ್ರಾಮೀಣ ಪ್ರದೇಶದ ಜನರಿಗೂ ಇದರಿಂದ ಅನುಕೂಲ|
ಇಂಡಿ(ಸೆ.29): ಹಸಿವು ಮುಕ್ತ ಕರ್ನಾಟಕ ನಿರ್ಮಾಣಕ್ಕಾಗಿ ರಾಜ್ಯದ ಹಿಂದಿನ ಕಾಂಗ್ರೆಸ್ ಸರ್ಕಾರದ ಇಂದಿರಾ ಕ್ಯಾಂಟೀನ್ ಪಟ್ಟಣದಲ್ಲಿ ಇನ್ನೂ ಆರಂಭವಾಗಿಲ್ಲ ಎಂದು ಇನ್ಮುಂದೆ ಮರುಕ ಪಡಬೇಕಿಲ್ಲ. ಏಕೆಂದರೆ, ಇಂದಿರಾ ಕ್ಯಾಂಟೀನ್ ಆರಂಭಕ್ಕೆ ಇದ್ದ ಎಲ್ಲ ವಿಘ್ನಗಳೂ ದೂರವಾಗಿದ್ದು, ಇಂದು ಶಾಸಕ ಯಶವಂತರಾಯಗೌಡ ಪಾಟೀಲ ಅವರಿಂದ ಉದ್ಘಾಟನೆಗೊಳ್ಳಲಿದೆ.
ಬಡವರ ಹೊಟ್ಟೆ ತುಂಬಿಸಲಿದೆ ಇಂದಿರಾ ಕ್ಯಾಂಟೀನ್
ಈ ಮೂಲಕ ಇಂದಿರಾ ಕ್ಯಾಂಟೀನ್ ಬಡವರ ಹೊಟ್ಟೆ ತುಂಬಿಸಲಿದೆ. ಅಲ್ಲದೆ, ಪಟ್ಟಣದ ಬಸ್ ಡಿಪೋ ಹಾಗೂ ಮಿನಿ ವಿಧಾನಸೌಧ ಮಧ್ಯದಲ್ಲಿ ಈ ಇಂದಿರಾ ಕ್ಯಾಂಟೀನ್ ಆರಂಭಗೊಳ್ಳಲಿದ್ದು, ನಿತ್ಯ ಸರ್ಕಾರಿ ಕಚೇರಿಗಳಿಗೆ ಕೆಲಸ, ಕಾರ್ಯಗಳಿಗೆ ಬರುವ ಗ್ರಾಮೀಣ ಪ್ರದೇಶದ ಜನರಿಗೂ ಇದರಿಂದ ಅನುಕೂಲವಾಗಲಿದೆ.
ಹಿಂದಿನ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಇಂದಿರಾ ಕಾಂಟೀನ್ ಹಲವು ವರ್ಷದಿಂದ ಈ ತಾಲೂಕಿನಲ್ಲಿ ಕನಸಾಗಿಯೇ ಉಳಿದಿತ್ತು. ಅಂದಿನ ರಾಜ್ಯ ಸರ್ಕಾರ ಹಸಿವು ಮುಕ್ತ ರಾಜ್ಯ ನಿರ್ಮಾಣಕ್ಕಾಗಿ ಈ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ತಂದಿದ್ದು, ಇದರಿಂದ ಬಡವರಿಗೆ, ಕಾರ್ಮಿಕರಿಗೆ ಅನುಕೂಲವಾಗಲಿದೆ.
ಅಂದುಕೊಂಡಂತೆ ನಡೆದಿದ್ದರೆ ಇಷ್ಟೊತ್ತಿಗೆ ತಾಲೂಕಿನಲ್ಲಿ ಇಂದಿರಾ ಕ್ಯಾಂಟೀನ್ ಆರಂಭಗೊಂಡು ಬಡವರ ಹಸಿವು ನೀಗಿಸಿ ಹೆಸರು ಪಡೆದುಕೊಳ್ಳುತ್ತಿತ್ತು. ಕೇಂದ್ರೀಕೃತ ಟೆಂಡರ್ ಪದ್ಧತಿ ಪರಿಣಾಮವಾಗಿ ತಾಲೂಕಿನ ಜನತೆ ಇಂದಿರಾ ಕ್ಯಾಂಟೀನ್ ಸ್ವಲ್ಪ ವಿಳಂಬವಾಗಿದೆ. ಬೆಂಗಳೂರಿನ ಚಿಪ್ಟನ್ ಕಂಪನಿ ಟೆಂಡರ್ ಪಡೆದಿದ್ದು, ಇಂದಿರಾ ಕ್ಯಾಂಟೀನ್ ಲೋಕಾರ್ಪ ಣೆಗೊಳ್ಳುತ್ತಿರುವುದು ತಾಲೂಕಿನ ಜನತೆಯಲ್ಲಿ ಸಂತಸ ಉಂಟು ಮಾಡಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಬೆಂಗಳೂರಿನಲ್ಲಿ ಪ್ರಾಯೋಗಿಕವಾಗಿ ಪ್ರಾರಂಭಗೊಂಡ ಇಂದಿರಾ ಕ್ಯಾಂಟೀನ್‌ಗಳು ಹೆಚ್ಚು ಜನಮನ್ನಣೆ ಗಳಿಸಿದ ಹಿನ್ನೆಲೆಯಲ್ಲಿ ಅವುಗಳನ್ನು ರಾಜ್ಯದ ಎಲ್ಲ ಜಿಲ್ಲೆ, ತಾಲೂಕು ಕೇಂದ್ರಗಳಲ್ಲಿ ಫೆಬ್ರವರಿ ಮೊದಲ ವಾರದಲ್ಲಿಯೇ ಪ್ರಾರಂಭಿಸುವುದಾಗಿ ಘೋಷಿಸಿತ್ತು. ಆದರೆ ಟೆಂಡರ್ ವಿಳಂಬದಿಂದ ಇಂಡಿ ಜನತೆಗೆ ಇಂದಿರಾ ಕ್ಯಾಂಟೀನ್ ಮರೀಚಿಕೆಯಾಗಿತ್ತು.
ಶಾಸಕ ಯಶವಂತರಾಯಗೌಡ ಪಾಟೀಲ ಅವರ ಸತತ ಪ್ರಯತ್ನದಿಂದ ಇಂಡಿಯಲ್ಲಿ ಇಂದಿರಾ ಕ್ಯಾಂಟೀನ್ ತಲೆ ಎತ್ತಿದ್ದು, ಭಾನುವಾರ ಜನತೆಯ ಸೇವೆಗೆ ಸಮರ್ಪಣೆಗೊಳ್ಳಲಿದೆ. ಪ್ರತಿದಿನ ಬೆಳಗ್ಗೆ 5 ಕ್ಕೆ ಉಪಾಹಾರ, ಮಧ್ಯಾಹ್ನ, ಸಂಜೆ 10 ಕ್ಕೆ ಊಟ ನೀಡುವ ಇಂದಿರಾ ಕ್ಯಾಂಟೀನ್ ಬಡಜನರ ಹೊಟ್ಟೆ ತುಂಬಿಸಲಿದೆ. ಕಡಿಮೆ ದರದಲ್ಲಿ ಉಪಾಹಾರ, ಊಟ ಪೂರೈಸುವ ರಾಜ್ಯ ಸರ್ಕಾರದ ಮಹತ್ವದ ಯೋಜನೆ ಇಂದಿರಾ ಕ್ಯಾಂಟೀನ್ ಬಡವರಿಗೆ ಅನುಕೂಲವಾಗಲಿದೆ.
ಈ ಬಗ್ಗೆ ಮಾತನಾಡಿದ ಇಂಡಿ ಪುರಸಭೆ ಮುಖ್ಯಾಧಿಕಾರಿ ಜಿ.ಜಿ.ವಾಲಿ ಅವರು, ಪಟ್ಟಣದಲ್ಲಿ ಇಂದಿರಾ ಕ್ಯಾಂಟೀನ್ ನಿರ್ವಹಣೆಯನ್ನು ಬೆಂಗಳೂರಿನ ಚಿಪ್ಟನ್ ಕಂಪನಿಗೆ ಸರ್ಕಾರ ಟೆಂಡರ್ ನೀಡಿದೆ. ಪುರಸಭೆಯಿಂದ ನೀರು ಸೇರಿದಂತೆ ಇತರೆ ಮೂಲಸೌಲಭ್ಯ ಇಂದಿರಾ ಕ್ಯಾಂಟೀನ್‌ಗೆ ಒದಗಿಸಲಾಗಿದೆ. ಗುಣಮಟ್ಟದ ಆಹಾರ ನೀಡುವ ಕುರಿತು ಮೇಲಿಂದ ಮೇಲೆ ತಪಾಸಣೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ ಅವರು, ಹಿಂದಿನ ಕಾಂಗ್ರೆಸ್ ಸರ್ಕಾರದ ಸಿಎಂ ಸಿದ್ದರಾಮಯ್ಯನವರು ಬಡವರು ಉಪವಾಸದಿಂದ ಮಲಗಬಾರದೆಂಬ ಉದ್ದೇಶದಿಂದ ಕಡಿಮೆ ದರದಲ್ಲಿ ಊಟ, ಉಪಾಹಾರ ದೊರೆಯಬೇಕೆಂದು ಜಾರಿಗೆ ತಂದಿದ್ದ ಇಂದಿರಾ ಕ್ಯಾಂಟೀನ್ ಇಂಡಿಯಲ್ಲಿ ನಿರ್ಮಾಣವಾಗಿದೆ. ಕೇಂದ್ರಿಕೃತ ಟೆಂಡರ್ ಪ್ರಕ್ರಿಯೆಯಿಂದ ಕ್ಯಾಂಟೀನ್ ನಿರ್ಮಾಣ ತಡವಾಗಿತ್ತು. ಸದ್ಯ ಆರಂಭಗೊಳ್ಳುತ್ತಿರುವುದರಿಂದ ಮಿನಿ ವಿಧಾನಸೌಧದಲ್ಲಿ ಹಲವು ಕಚೇರಿ ಇರುವುದರಿಂದ ಗ್ರಾಮೀಣ ಪ್ರದೇಶದಿಂದ ಕಚೇರಿ ಕೆಲಸಕ್ಕೆ ಬರುವ ಸಾರ್ವಜನಿಕರಿಗೆ ಕಡಿಮೆ ದರದಲ್ಲಿ ಊಟ, ಉಪಾಹಾರ ದೊರೆಯುತ್ತದೆ. ಇದರಿಂದ ಬಡವರಿಗೆ, ಕಾರ್ಮಿಕರಿಗೆ ಅನುಕೂಲವಾಗುತ್ತದೆ ಎಂದು ಹೇಳಿದ್ದಾರೆ.