ಬೆಂಗಳೂರು [ಆ.15]:  ಸ್ವಾತಂತ್ರ್ಯ ದಿನಾಚರಣೆ ಸಮಾರಂಭದ ಹಿನ್ನೆಲೆಯಲ್ಲಿ ಆ.15ರಂದು ಬೆಳಗ್ಗೆ 8.30ರಿಂದ ಬೆಳಗ್ಗೆ 10.30ರವರೆಗೆ ಕಬ್ಬನ್‌ ರಸ್ತೆಯಲ್ಲಿ ಬಿಆರ್‌ವಿ ಜಂಕ್ಷನ್‌ನಿಂದ ಕಾಮರಾಜ ರಸ್ತೆ ಜಂಕ್ಷನ್‌ವರೆಗೆ ಎರಡೂ ದಿಕ್ಕುಗಳಲ್ಲಿನ ಸಂಚಾರವನ್ನು ನಿರ್ಬಂಧಿಸಲಾಗಿದ್ದು, ವಾಹನ ಸಂಚಾರಕ್ಕೆ ಪರ್ಯಾಯ ರಸ್ತೆ ಕಲ್ಪಿಸಲಾಗಿದೆ.

1) ಇನ್‌ಫ್ಯಾಂಟ್ರಿ ರಸ್ತೆಯಲ್ಲಿ ಮಣಿಪಾಲ್‌ ಸೆಂಟರ್‌ ಕಡೆಗೆ ಸಂಚರಿಸುವ ವಾಹನಗಳು ನೇರವಾಗಿ ಇನ್‌ಫ್ಯಾಂಟ್ರಿ ರಸ್ತೆ- ಸಫೀನಾ ಪ್ಲಾಜಾ- ಎಡ ತಿರುವು ಪಡೆದು ಮೇನ್‌ಗಾರ್ಡ್‌ ರಸ್ತೆ- ಆಲೀಸ್‌ ಸರ್ಕಲ್‌- ಡಿಸ್ಪೆನ್ಸರಿ ರಸ್ತೆ- ಕಾಮರಾಜ ರಸ್ತೆ ಮತ್ತು ಡಿಕನ್ಸನ್‌ ರಸ್ತೆ ಜಂಕ್ಷನ್‌- ಬಲಕ್ಕೆ ತಿರುವು ಪಡೆದು ಕಾಮರಾಜ ರಸ್ತೆ- ಕಬ್ಬನ್‌ ರಸ್ತೆ ಮತ್ತು ಕಾಮರಾಜ ರಸ್ತೆ ಜಂಕ್ಷನ್‌ನಲ್ಲಿ ಎಡಕ್ಕೆ ತಿರುವು ಪಡೆದು, ಕಬ್ಬನ್‌ ರಸ್ತೆ ಮೂಲಕ ಮಣಿಪಾಲ್‌ ಸೆಂಟರ್‌ ಕಡೆಗೆ ಸಾಗಬಹುದಾಗಿದೆ.

2) ಕಬ್ಬನ್‌ ರಸ್ತೆಯಲ್ಲಿ, ಮಣಿಪಾಲ್‌ ಸೆಂಟರ್‌ ಜಂಕ್ಷನ್‌ನಿಂದ ಬಿಆರ್‌ವಿ ಜಂಕ್ಷನ್‌ ಕಡೆಗೆ ಬರುವ ವಾಹನಗಳು, ಕಾಮರಾಜ ರಸ್ತೆ ಮತ್ತು ಕಬ್ಬನ್‌ ರಸ್ತೆ ಜಂಕ್ಷನ್‌ನಲ್ಲಿ ಕಾಮರಾಜ ರಸ್ತೆಗೆ ಎಡತಿರುವು ಪಡೆದು, ಕಾವೇರಿ ಆಟ್ಸ್‌ರ್‍ ಮತ್ತು ಕ್ರಾಫ್ಟ್‌ ಜಂಕ್ಷನ್‌ನಲ್ಲಿ ಬಲ ತಿರುವು ಪಡೆದು, ಎಂ.ಜಿ.ರಸ್ತೆ- ಅನಿಲ್‌ ಕುಂಬ್ಳೆ ವೃತ್ತದ ಮೂಲಕ ಸಾಗಬೇಕು.

3) ಅನಿಲ್‌ ಕುಂಬ್ಳೆ ವೃತ್ತದಿಂದ ಕಬ್ಬನ್‌ ರಸ್ತೆ ಕಡೆಗೆ ಬರುವ ವಾಹನಗಳು ನೇರವಾಗಿ ಸೆಂಟ್ರಲ್‌ ರಸ್ತೆಯಲ್ಲಿ ಸಾಗಿ ಬಲಕ್ಕೆ ತಿರುವು ಪಡೆದು- ಇನ್‌ಫ್ಯಾಂಟ್ರಿ ರಸ್ತೆ- ಸಫೀನಾ ಪ್ಲಾಜಾ- ಎಡಕ್ಕೆ ತೆರವು ಪಡೆದು ಮೇನ್‌ಗಾರ್ಡ್‌ ರಸ್ತೆ- ಆಲಿ ಸರ್ಕಲ್‌- ಡಿಸ್ಪೆನ್ಸರಿ ರಸ್ತೆ- ಕಾಮರಾಜ ರಸ್ತೆ ಮತ್ತು ಡಿಕನ್ಸನ್‌ ರಸ್ತೆ ಜಂಕ್ಷನ್‌- ಬಲಕ್ಕೆ ತಿರುವು ಪಡೆದು ಕಾಮರಾಜ ರಸ್ತೆ- ಕಬ್ಬನ್‌ ರಸ್ತೆ ಮತ್ತು ಕಾಮರಾಜ ರಸ್ತೆ ಜಂಕ್ಷನ್‌ನಲ್ಲಿ ಎಡಕ್ಕೆ ತಿರುವು ಪಡೆದು ಕಬ್ಬನ್‌ ರಸ್ತೆ ಮುಖಾಂತರ ಮಣಿಪಾಲ್‌ ಸೆಂಟರ್‌ಗೆ ಸಾಗಬೇಕಿದೆ.

4) ಎಂ.ಜಿ.ರಸ್ತೆಯಲ್ಲಿ ಕಾವೇರಿ ಆಟ್ಸ್‌ರ್‍ ಮತ್ತು ಕ್ರಾಫ್ಟ್‌ ವೃತ್ತದಿಂದ ಬಂದು, ಕಬ್ಬನ್‌ ರಸ್ತೆ ಮತ್ತು ಕಾಮರಾಜ ರಸ್ತೆ ಜಂಕ್ಷನ್‌ಗೆ ಹೋಗುವ ವಾಹನಗಳು ನೇರವಾಗಿ ಎಂ.ಜಿ.ರಸ್ತೆಯಲ್ಲಿ ಸಾಗಿ ಅನಿಲ್‌ಕುಂಬ್ಳೆ ವೃತ್ತದ ಬಳಿಗೆ ಬಂದು, ಬಲ ತಿರುವು ಪಡೆದು- ಬಿಆರ್‌ವಿ ಜಂಕ್ಷನ್‌ನಲ್ಲಿ ನೇರವಾಗಿ ಸಂಚರಿಸಿ ಸೆಂಟ್ರಲ್‌ ಸ್ಟ್ರೀಟ್‌ ರಸ್ತೆಯಲ್ಲಿ ಮುಂದೆ ಸಾಗಬಹುದು.

ಪಾಸ್‌ವಾರು ಪಾರ್ಕಿಂಗ್‌ ವ್ಯವಸ್ಥೆ

ಹಳದಿ ಕಾರು ಪಾಸ್‌ (ದ್ವಾರ-1): ಎಲ್ಲ ಆಹ್ವಾನಿತರು ಕಬ್ಬನ್‌ ರಸ್ತೆಯಲ್ಲಿ ಸಂಚರಿಸಿ ಮಾಣಿಕ್‌ ಷಾ ಪೆರೇಡ್‌ ಮೈದಾನಕ್ಕೆ ಉತ್ತರಾಭಿಮುಖವಾಗಿ ಪ್ರವೇಶ ದ್ವಾರ 1ರ ಮೂಲಕ ಒಳ ಪ್ರದೇಶಿಸಬೇಕು. ಮೈದಾನದ ಪಶ್ಚಿಮ ಭಾಗದಲ್ಲಿ ಕಲ್ಪಿಸಲಾಗಿರುವ ಜಾಗದಲ್ಲಿ ವಾಹನಗಳ ನಿಲುಗಡೆ ಮಾಡಬೇಕು.

ಬಿಳಿ ಕಾರು ಪಾಸ್‌ (ದ್ವಾರ-2):

ಗಣ್ಯರು, ಮಿಲಿಟರಿ ಅಧಿಕಾರಿಗಳು, ಹಿರಿಯ ಪೊಲೀಸ್‌ ಅಧಿಕಾರಿಗಳು, ಸರ್ಕಾರದ ಕಾರ್ಯದರ್ಶಿಗಳು ಕಬ್ಬನ್‌ ರಸ್ತೆಯಲ್ಲಿ ಸಂಚರಿಸಿ ಪ್ರವೇಶ ದ್ವಾರ-2ರ ಮುಖಾಂತರ ಒಳ ಪ್ರವೇಶಿಸಬೇಕು. ನಂತರ ಬಲ ತಿರುವು ಪಡೆದು ಪೆರೇಡ್‌ ಮೈದಾನದ ಪಶ್ಚಿಮ ಭಾಗದಲ್ಲಿ ವಾಹನಗಳಿಗೆ ಮೀಸಲಿರಿಸಿರುವ ಜಾಗದಲ್ಲಿ ವಾಹನಗಳನ್ನು ನಿಲುಗಡೆ ಮಾಡಬೇಕು.

ಪಿಂಕ್‌ ಪಾಸ್‌: (ದ್ವಾರ-3)

ಪಿಂಕ್‌ ಬಣ್ಣದ ಪಾಸ್‌ ಹೊಂದಿರುವವರು ಮೇನ್‌ ಗಾರ್ಡ್‌ ಕ್ರಾಸ್‌ ರಸ್ತೆ ಸಫೀನಾ ಪ್ಲಾಜಾ ಮುಂಭಾಗ ಸಂಚರಿಸಿ ಕಾಮರಾಜ ರಸ್ತೆ ಆರ್ಮಿ ಪಬ್ಲಿಕ್‌ ಶಾಲೆ ಮುಂಭಾಗ ವಾಹನ ನಿಲುಗಡೆ ಮಾಡಿ, ಗೇಟ್‌ ಸಂಖ್ಯೆ 3ರಲ್ಲಿ ಕಾಲ್ನಡಿಗೆ ಮೂಲಕ ಮೈದಾನದೊಳಗೆ ಪ್ರವೇಶಿಸಬಹುದು.

ಹಸಿರು ಪಾಸ್‌: (ದ್ವಾ-4)

ಹಸಿರು ಬಣ್ಣದ ಪಾಸ್‌ ಹೊಂದಿರುವವರು ತಮ್ಮ ವಾಹನಗಳನ್ನು ಶಿವಾಜಿನಗರ ಬಸ್‌ ನಿಲ್ದಾಣದ 1ನೇ ಮಹಡಿಯಲ್ಲಿ ವಾಹನ ನಿಲುಗಡೆ ಮಾಡಿ ಗೇಟ್‌ ಸಂಖ್ಯೆ 4ರ ಮೂಲಕ ಕಾಲ್ನಡಿಗೆ ಮೂಲಕ ಮೈದಾನದೊಳಗೆ ಪ್ರವೇಶಿಸಬಹುದು.

ಇತರ ವಾಹನ ನಿಲುಗಡೆ

- ಕಾರ್ಯಕ್ರಮಕ್ಕೆ ಬರುವ ಎಲ್ಲ ಮಾಧ್ಯಮದವರು, ಡಿಸಿಪಿ ಮತ್ತು ಮೇಲ್ಪಟ್ಟಅಧಿಕಾರಿಗಳು ಹಾಗೂ ಇಲಾಖೆಗಳ ಮೇಲಧಿಕಾರಿಗಳ ವಾಹನಗಳು ಪ್ರವೇಶ ದ್ವಾರ 3ರ ಮೂಲಕ ಒಳಪ್ರವೇಶಿಸಿ ಮೈದಾನದ ಪೂರ್ವ ಭಾಗದಲ್ಲಿ ವಾಹನ ನಿಲುಗಡೆ ಮಾಡಬಹುದು.

- ಕವಾಯತು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವವರನ್ನು ಕರೆತರುವ ಎಲ್ಲ ವಾಹನಗಳು ಪ್ರವೇಶದ ದ್ವಾರ 1ರ ಬಳಿ ನಿಲ್ಲಿಸಿ ಮಕ್ಕಳು ಮತ್ತು ಇತರರನ್ನು ಇಳಿಸಿ ನಂತರ ತಮ್ಮ ವಾಹನಗಳನ್ನು ಅನಿಲ್‌ಕುಂಬ್ಳೆ ವೃತ್ತದಿಂದ ಎಂ.ಜಿ. ರಸ್ತೆ ಮೆಟ್ರೋ ನಿಲ್ದಾಣದವರೆಗಿನ ರಸ್ತೆ ಉತ್ತರ ಭಾಗದಲ್ಲಿ ನಿಲ್ಲಿಸಬಹುದಾಗಿದೆ.

ನಗರದ ಅಭಿವೃದ್ಧಿಗೆ ಒಂದೇ ಪ್ರಾಧಿಕಾರ?

- ತುರ್ತು ಸೇವಾ ವಾಹನಗಳಾದ ಆ್ಯಂಬುಲೆನ್ಸ್‌, ಅಗ್ನಿ ಶಾಮಕ ದಳದ ವಾಹನಗಳು, ನೀರಿನ ಟ್ಯಾಂಕರ್‌, ಕೆಎಸ್‌ಆರ್‌ಪಿ, ಬಿಬಿಎಂಪಿ ಸೇರಿ ಇನ್ನಿತರ ಸರ್ಕಾರಿ ಸಂಸ್ಥೆಗಳ ವಾಹನಗಳು ಪ್ರವೇಶ ದ್ವಾರ 1 ಮೂಲಕ ಮೈದಾನದೊಳಗೆ ಪ್ರವೇಶಿಸಿ ಪೋರ್ಟ್‌ ವಾಲ್‌ ಹಿಂಭಾಗದಲ್ಲಿ ನಿಲುಗಡೆ ಮಾಡಬೇಕಿದೆ.

- ದ್ವಿಚಕ್ರ ವಾಹನ ಸವಾರರು ತಮ್ಮ ವಾಹನಗಳನ್ನು ಕಾಮರಾಜ ರಸ್ತೆ, ಆರ್ಮಿ ಪಬ್ಲಿಕ್‌ ಶಾಲೆ ಮುಂಭಾಗ, ಮೇನ್‌ ಗಾರ್ಡ್‌ ಕ್ರಾಸ್‌ ರಸ್ತೆ ಸಫೀನಾ ಪ್ಲಾಜಾ ಮುಂಭಾಗದಲ್ಲಿ ನಿಲುಗಡೆ ಮಾಡಿ ಪ್ರವೇಶ ದ್ವಾರ 4ರ ಮೂಲಕ ಕಾಲ್ನಡಿಗೆಯಲ್ಲಿ ಮೈದಾನದೊಳಗೆ ಬರಬಹುದಾಗಿದೆ.

ವಾಹನ ನಿಲುಗಡೆ ನಿಷಿದ್ಧ

-ಸೆಂಟ್ರಲ್‌ ಸ್ಟ್ರೀಟ್‌, ಅನಿಲ್‌ ಕುಂಬ್ಳೆ ವೃತ್ತದಿಂದ ಶಿವಾಜಿನಗರ ಬಸ್‌ ನಿಲ್ದಾಣದವರೆಗೆ

-ಕಬ್ಬನ್‌ ರಸ್ತೆ, ಸಿಟಿಓ ವೃತ್ತದಿಂದ ಕೆ.ಆರ್‌. ರಸ್ತೆ ಮತ್ತು ಕಬ್ಬನ್‌ ರಸ್ತೆ ಜಂಕ್ಷನ್‌ವರೆಗೆ

-ಎಂ.ಜಿ. ರಸ್ತೆ, ಅನಿಲ್‌ ಕುಂಬ್ಳೆ ವೃತ್ತದಿಂದ ಕ್ವೀನ್ಸ್‌ ವೃತ್ತದವರೆಗೆ

ಅಪಾಯಕಾರಿ ವಸ್ತುಗಳ ನಿಷೇಧ

ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ವೀಕ್ಷಿಸಲು ಬರುವವರು, ಭದ್ರತೆ ದೃಷ್ಟಿಯಿಂದ ಕೆಲ ವಸ್ತುಗಳನ್ನು ತರುವುದನ್ನು ನಿಷೇಧಿಸಲಾಗಿದೆ. ಮೊಬೈಲ್‌ ಫೋನ್‌, ಹೆಲ್ಮೆಟ್‌, ಕ್ಯಾಮೆರಾ, ರೇಡಿಯೋ, ಮಾರಕಾಸ್ತ್ರಗಳು, ಕಪ್ಪುಬಟ್ಟೆ, ಸ್ಫೋಟಕ ವಸ್ತುಗಳನ್ನು ಮೈದಾನದೊಳಗೆ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.