ನಾರಾಯಣ ಹೆಗಡೆ

ಹಾವೇರಿ(ಜು. 18):  ದಿನದಿಂದ ದಿನಕ್ಕೆ ಕೊರೋನಾ ಮಹಾಮಾರಿ ಹೆಚ್ಚುತ್ತಿದೆ. ಇದರ ನಡುವೆಯೇ ಮುಂಗಾರು ಆರಂಭವಾಗುತ್ತಿದ್ದಂತೆ ಸಾಂಕ್ರಾಮಿಕ ರೋಗಗಳ ಹಾವಳಿಯೂ ಹೆಚ್ಚುತ್ತಿದೆ. ಈಗಾಗಲೇ 51 ಡೆಂಘೀ ಪ್ರಕರಣ ದೃಢಪಟ್ಟಿದ್ದು, ಚಿಕೂನ್‌ಗುನ್ಯ ಕೂಡ ವ್ಯಾಪಿಸುತ್ತಿದೆ. ಕೊರೋನಾದಿಂದ ಬಚಾವಾದರೂ ಈ ಸಾಂಕ್ರಾಮಿಕ ರೋಗಗಳಿಂದ ಅನೇಕರು ಬಳಲುವಂತಾಗಿದೆ.

ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಗಾಬರಿ ಹುಟ್ಟಿಸುತ್ತಿದೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಏರುಗತಿಯಲ್ಲೇ ಇದ್ದು, ನಿತ್ಯವೂ ಹತ್ತಾರು ಹೊಸ ಪ್ರಕರಣಗಳು ದೃಢಪಡುತ್ತಿವೆ. ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗಳು ಕೋವಿಡ್‌ ಆಸ್ಪತ್ರೆಗಳಾಗಿ ಮಾರ್ಪಟ್ಟಿವೆ. ಆದರೆ, ಮುಂಗಾರು ಹಂಗಾಮಿನಲ್ಲಿ ಪ್ರತಿ ವರ್ಷ ಜನರ ಆರೋಗ್ಯವನ್ನು ಕಾಡುವ ಸಾಂಕ್ರಾಮಿಕ ರೋಗಗಳೂ ಇದೇ ವೇಳೆ ಹೆಚ್ಚುತ್ತಿರುವುದು ಆತಂಕ ಹೆಚ್ಚಿಸಿವೆ. ಎರಡು ವರ್ಷಗಳಿಂದ ನಿಯಂತ್ರಣದಲ್ಲಿದ್ದ ಡೆಂಘೀ ಜ್ವರ ಮತ್ತೆ ಜಿಲ್ಲೆಯ ಜನರನ್ನು ಆತಂಕಕ್ಕೆ ನೂಕಿದೆ. ಚಿಕೂನ್‌ಗುನ್ಯ ಹಾವಳಿಯೂ ಜೋರಾಗಿಯೇ ಇದೆ. ಇದಲ್ಲದೇ ಅತಿಸಾರ, ವಿಷಮಶೀತ ಜ್ವರ, ಕರುಳು ಬೇನೆ, ಮಲೇರಿಯಾ ರೋಗಗಳೂ ವ್ಯಾಪಿಸುತ್ತಿವೆ.

ಕೊರೋನಾ ಆತಂಕದ ನಡುವೆ ದೇಶದಲ್ಲಿ ಡೇಂಘೀ ಹಾವಳಿ!

51 ಡೆಂಘೀ ಪ್ರಕರಣ ಪತ್ತೆ:

ಜೂನ್‌ ಮತ್ತು ಜುಲೈ ತಿಂಗಳಲ್ಲೇ ಸಾಂಕ್ರಾಮಿಕ ರೋಗಗಳು ಹರಡುವುದು ಸಾಮಾನ್ಯವಾಗಿದ್ದು, ನೂರಾರು ಜನರು ಶಂಕಿತ ಡೆಂಘೀ ಜ್ವರದಿಂದ ಬಳಲುತ್ತಿದ್ದಾರೆ. ಇದು ವರೆಗೆ ಜಿಲ್ಲೆಯಲ್ಲಿ 51 ಡೆಂಘೀ ಪ್ರಕ​ರ​ಣ​ಗಳು ದೃಢಪಟ್ಟಿವೆ. ಹಾವೇರಿ ತಾಲೂಕಿನಲ್ಲಿ 14, ಬ್ಯಾಡಗಿ 6, ಶಿಗ್ಗಾಂವಿ 11, ರಾಣಿಬೆನ್ನೂರು 7, ಹಿರೇಕೆರೂರು 4, ರಟ್ಟೀಹಳ್ಳಿ 2, ಸವಣೂರು 3, ಹಾನಗಲ್ಲ 4 ಸೇರಿದಂತೆ 51 ಡೆಂಘೀ ಪ್ರಕರಣ ದೃಢಪಟ್ಟಿವೆ. ಸುಮಾರು 70ಕ್ಕೂ ಹೆಚ್ಚು ಶಂಕಿತ ಡೆಂಘೀ ಪ್ರಕರಣಗಳಿದ್ದು, ಲ್ಯಾಬ್‌ ವರದಿ ಬರಬೇಕಿದೆ.

ಡೆಂಘೀ ಜ್ವರ ಹತೋಟಿಗೆ ಆರೋಗ್ಯ ಇಲಾಖೆ ವಹಿಸುತ್ತಿರುವ ಮುನ್ನೆಚ್ಚರಿಕೆ ಕ್ರಮ ಸಾಲುತ್ತಿಲ್ಲ ಎಂಬ ಆರೋಪವಿದೆ. ಜಿಲ್ಲಾದ್ಯಂತ ಶಂಕಿತ ಜ್ವರ ವ್ಯಾಪಿಸುತ್ತಿದ್ದು, ಹಲವು ಗ್ರಾಮಗಳಲ್ಲಿ ತೀವ್ರಗೊಂಡಿದೆ. ತಕ್ಷಣ ಆರೋಗ್ಯ ಇಲಾಖೆಯಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳುವುದು ಅಗತ್ಯವಿದೆ. ಕೊರೋನಾ ನಿಯಂತ್ರಣಕ್ಕೆ ಆರೋಗ್ಯ ಸಿಬ್ಬಂದಿ ಗಮನ ಹರಿಸುತ್ತಿರುವ ರೀತಿಯಲ್ಲೇ ಇನ್ನಿತರ ಮಾರಣಾಂತಿಕ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೂ ಆದ್ಯತೆ ನೀಡಬೇಕಿದೆ.

ಚಿಕೂನ್‌ಗುನ್ಯಕ್ಕೆ ಹೈರಾಣುಃ

ಈ ಬಾರಿ ಮುಂಗಾರು ತಡವಾಗಿ ಆರಂಭವಾಗಿರುವುದರಿಂದ ಸಾಂಕ್ರಾಮಿಕ ರೋಗಗಳ ಹಾವಳಿಯೂ ಈಗ ಆರಂಭವಾಗಿದೆ. ಮಳೆಗಾಲ ಶುರುವಾಗುತ್ತಿದಂತೆ ಚಿಕೂನ್‌ಗುನ್ಯಕ್ಕೆ ಅನೇಕ ಗ್ರಾಮಗಳಲ್ಲಿ ಜನರು ಹೈರಾಣಾಗಿದ್ದಾರೆ. ನಗರ ಹಾಗೂ ಗ್ರಾಮೀಣ ಭಾಗಗಳೆರಡೂ ಕಡೆ ಚಿಕೂನ್‌ಗುನ್ಯ ಹೆಚ್ಚುತ್ತಿದೆ. ಇದು ವರೆಗೆ 12 ಪ್ರಕರಣ ದೃಢಪಟ್ಟಿದ್ದು, 27 ಶಂಕಿತ ಚಿಕೂನ್‌ಗುನ್ಯ ಪ್ರಕರಣಗಳಿವೆ. ಹಲವು ಗ್ರಾಮಗಳಲ್ಲಿ ಕಾಯಿಲೆ ಉಲ್ಬಣಗೊಂಡಿದೆ. ಕೃಷಿ ಕಾರ್ಯ ಮಾಡಲಾಗದೆ ಅನೇಕ ರೈತರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೋನಾ ಭಯದಲ್ಲಿ ಅನೇಕರು ಆಸ್ಪತ್ರೆಗೂ ಬಾರದೇ ನೋವು ಅನುಭವಿಸುತ್ತಿದ್ದಾರೆ.

ಶೀತ, ಜ್ವರ:

ಕಲುಷಿತ ನೀರು ಸೇವನೆ ಮುಂತಾದ ಕಾರಣದಿಂದ ಜಿಲ್ಲೆಯಲ್ಲಿ ಕರುಳು ಬೇನೆ ರೋಗವೂ ವ್ಯಾಪಿಸಿದೆ. 4 ಮಲೇರಿಯಾ ಪ್ರಕರಣ ದೃಢಪಟ್ಟಿದ್ದು, ಶೀತ, ಜ್ವರ, ಕರಳು ಬೇನೆ ರೋಗದಿಂದ ಅನೇಕರು ಬಳಲುತ್ತಿದ್ದಾರೆ. ಕಲುಷಿತ ನೀರು ಸೇವನೆ, ಸೊಳ್ಳೆ ಕಡಿತದಿಂದ ಸಾಂಕ್ರಾಮಿಕ ರೋಗಗಳು ಹೆಚ್ಚುತ್ತಿವೆ. ಅತಿಸಾರದಿಂದ ಅನೇಕರು ತೊಂದರೆ ಅನುಭವಿಸಿದ್ದಾರೆ. ದಡಾರ್‌, ಕರುಳು ಬೇನೆಯಿಂದ ಅನೇಕರು ಬಳಲುತ್ತಿದ್ದಾರೆ.

ಕೊರೋನಾ ಮುಂದೆ ಲೆಕ್ಕಕ್ಕಿಲ್ಲ:

ಕೊರೋನಾ ಸೋಂಕು ಹೆಚ್ಚುತ್ತಿರುವುದರಿಂದ ಮತ್ತು ಕೋವಿಡ್‌ ಸೋಂಕು ನಿಯಂತ್ರಣಕ್ಕೆ ಸರ್ಕಾರ ಆದ್ಯತೆ ನೀಡುತ್ತಿರುವುದರಿಂದ ಜಿಲ್ಲೆಯಲ್ಲೂ ಇನ್ನುಳಿದ ಕಾಯಿಲೆ ಬಗ್ಗೆ ಆರೋಗ್ಯ ಇಲಾಖೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಿಲ್ಲ. ಶೀತ ಜ್ವರದಿಂದ ಬಳಲುತ್ತಿದ್ದರೂ ಆಸ್ಪತ್ರೆಗೆ ಬಂದು ತೋರಿಸಲು ಅನೇಕರು ಹೆದರುತ್ತಿದ್ದಾರೆ. ಜ್ವರ ಬಂದರೂ ಕೊರೋನಾ ಲಕ್ಷಣ ಎಂದು ಕ್ವಾರಂಟೈನ್‌ ಮಾಡಬಹುದು ಎಂಬ ಆತಂಕ ಕಾಡುತ್ತಿದೆ. ಡೆಂಘೀ, ಚಿಕೂನ್‌ಗುನ್ಯ ನಿಯಂತ್ರಣಕ್ಕೆ ಮತ್ತು ಗ್ರಾಮೀಣ ಭಾಗಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಅರಿವು ಮೂಡಿಸುವ ಕಾರ್ಯವೂ ಆಗುತ್ತಿಲ್ಲ. ಕೊರೋನಾ ಮುಂದೆ ಇನ್ನುಳಿದ ಸಾಂಕ್ರಾಮಿಕ ರೋಗಗಳು ಲೆಕ್ಕಕ್ಕಿಲ್ಲ ಎಂಬಂತಾಗಿದ್ದು, ಇದರಿಂದ ಅನೇಕರು ಆರೋಗ್ಯ ಸಮಸ್ಯೆ ಎದುರಿಸುವಂತಾಗಿದೆ.

ಜಿಲ್ಲೆಯ ಎಲ್ಲ ಗ್ರಾಮ ಮತ್ತು ನಗರ ಪ್ರದೇಶದಲ್ಲಿ ಡೆಂಘೀ ಜ್ವರಕ್ಕೆ ಕಾರಣವಾಗುವ ಈಡೀಸ್‌ ಸೊಳ್ಳೆಗಳ ಲಾರ್ವಾ ಸಮೀಕ್ಷೆ ಮತ್ತು ಉತ್ಪತ್ತಿ ತಾಣಗಳ ನಿರ್ಮೂಲನೆ ಕಾರ್ಯ ಕೈಗೊಳ್ಳಲಾಗಿದೆ. ಜ್ವರ ಪ್ರಕರಣಗಳ ಸಮೀಕ್ಷೆ ಕೈಗೊಂಡು ರಕ್ತ ಮಾದರಿ ಸಂಗ್ರಹಿಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದ್ದು, ಔಷಧಿ ದಾಸ್ತಾನು ಕೂಡ ಸಾಕಷ್ಟಿದೆ. ಇದು ವರೆಗೆ 1.20 ಲಕ್ಷ ಜನರ ರಕ್ತದ ಮಾದರಿ ಸಂಗ್ರಹಿಸಿ ಆರೋಗ್ಯ ಪರೀಕ್ಷೆ ಮಾಡಲಾಗಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಪ್ರಭಾಕರ ಕುಂದೂರ ಅವರು ತಿಳಿಸಿದ್ದಾರೆ.