ಶಿರಸಿ ಮಾರುಕಟ್ಟೆಯಲ್ಲಿ ಕೆಂಪಡಕೆ ದರ ನಾಗಾಲೋಟ..!

* ಗುರುವಾರ ಕ್ವಿಂಟಲ್‌ ಅಡಕೆಗೆ 48399ಕ್ಕೆ ಏರಿಕೆ
* ಸೆಪ್ಟೆಂಬರ್‌ಗೆ 60 ಸಾವಿರದವರೆಗೆ ಏರಿಕೆ ನಿರೀಕ್ಷೆ
* ಮಾರುಕಟ್ಟೆಯಲ್ಲಿ ಕೃತಕ ಅಭಾವ ಸೃಷ್ಟಿಸುವ ಯತ್ನ?
 

Increasing Areca Price at Sirsi Market in Uttara Kannada grg

ಮಂಜುನಾಥ ಸಾಯೀಮನೆ

ಶಿರಸಿ(ಸೆ.03):  ಶಿರಸಿ ಮಾರುಕಟ್ಟೆಯಲ್ಲಿ ಕೆಂಪಡಕೆಯ ದರ ನಾಗಾಲೋಟ ಕಂಡಿದೆ. ಗುರುವಾರ ಪ್ರತಿ ಕ್ವಿಂಟಲ್‌ಗೆ 1 ಸಾವಿರದಷ್ಟು ಏರಿಕೆಯಾಗಿದ್ದು, ಗರಿಷ್ಠ 48399 ಧಾರಣೆ ಸಿಕ್ಕಿದೆ. ದರ ಏರಿಕೆಯ ಹಿಂದೆ ಕೃತಕ ಅಭಾವ ಸೃಷ್ಟಿಸುವ ಯತ್ನ ನಡೆಯುತ್ತಿದೆಯೇ ಎಂಬ ಪ್ರಶ್ನೆಯೂ ಸಾರ್ವಜನಿಕ ವಲಯದಲ್ಲಿ ಕೇಳಿಬರತೊಡಗಿದೆ.

ಕಳೆದ ಮೂರು ತಿಂಗಳುಗಳಿಂದ ಕೆಂಪಡಕೆ ದರ ಸಮಾಧಾನಕರ ಸ್ಥಿತಿಯಲ್ಲೇ ಇತ್ತು. ಪ್ರತಿ ಕ್ವಿಂಟಲ್‌ಗೆ ಸರಾಸರಿ 40 ಸಾವಿರ ರೈತರಿಗೆ ಸಿಕ್ಕಿದೆ. ಕೆಂಪಡಕೆ ಖರೀದಿಸಿಕೊಂಡ ಕೆಲ ವ್ಯಾಪಾರಸ್ಥರು, ಮಾರುಕಟ್ಟೆಯಲ್ಲಿ ದರ ಏರಿಸಿ ರೈತರ ಬಳಿ ಇರುವ ಕೆಲ ಪ್ರಮಾಣದ ಅಡಕೆಯನ್ನೂ ಖರೀದಿಸುವ ಯತ್ನ ನಡೆಸಿದ್ದಾರೆ ಎನ್ನಲಾಗುತ್ತಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಕೆಂಪಡಕೆಯ ಕೊರತೆ ಉಂಟಾದ ಬಳಿಕ, ಉತ್ತರ ಭಾರತದ ಮಾರುಕಟ್ಟೆಗೆ ಜಾಸ್ತಿ ದರದಲ್ಲಿ ಕೆಂಪಡಕೆ ಪೂರೈಸುವ ಯತ್ನ ನಡೆದಿದೆ. ಕೆಂಪಡಕೆಯ ದರ ಏರಿಕೆಯ ಸ್ಥಿತಿ ಗಮನಿಸಿದರೆ, ಮುಂದಿನ ವಾರದ ಆರಂಭದಲ್ಲಿಯೇ ಪ್ರತಿ ಕ್ವಿಂಟಲ್‌ಗೆ .50 ಸಾವಿರ ದಾಟುವ ಲಕ್ಷಣ ಕಂಡುಬರುತ್ತಿದೆ. ಇನ್ನೊಂದೆಡೆ ಸೆಪ್ಟೆಂಬರ್‌ ಅಂತ್ಯದವರೆಗೂ ಇದೇ ರೀತಿ ದರ ಏರಿಕೆ ಆಗಿ ಪ್ರತಿ ಕ್ವಿಂಟಲ್‌ಗೆ .60 ಸಾವಿರದವರೆಗೂ ಆಗಬಹುದು ಎನ್ನುತ್ತಾರೆ ಅಡಕೆ ಮಾರುಕಟ್ಟೆ ವಿಶ್ಲೇಷಕರು.

ರೈತರ ಕಿಸೆ ಸೇರದ ಅಡಕೆಗೆ ಬಂದ ಮಾನ:

ಕೆಂಪಡಕೆ ದಾಸ್ತಾನು ಇಟ್ಟುಕೊಂಡ ರೈತರ ಸಂಖ್ಯೆ ಅತಿ ವಿರಳವಾಗಿದೆ. ಮೇ ಅಂತ್ಯದ ವೇಳೆಗೆ ಬಹುತೇಕರು ಕೆಂಪಡಕೆ ಮಾರಾಟ ಮಾಡಿಕೊಂಡಿದ್ದಾರೆ. ಕೋವಿಡ್‌ ಸ್ಥಿತಿಯಲ್ಲಿ ಮಾರುಕಟ್ಟೆಮುಂದೆ ಹೇಗೋ ಏನೋ ಎಂಬ ಆತಂಕದಲ್ಲಿ ಕೆಂಪಡಕೆ ಮಾರಿಕೊಂಡವರೇ ಅಧಿಕ. ಈಗ ದರ ಏರಿಕೆ ದೊಡ್ಡ ಪ್ರಮಾಣದಲ್ಲಿ ರೈತ ಸಮೂಹ ಕೈ ಕೈ ಹಿಸುಕಿಕೊಳ್ಳುವಂತೆ ಮಾಡುತ್ತಿದೆ. ಕವಳಕ್ಕೆ ಬೇಕು ಎಂದು ಒಂದೆರಡು ಡಬ್ಬ ದಾಸ್ತಾನು ಇಟ್ಟುಕೊಂಡಿದ್ದವರು ದರ ಏರಿಕೆ ನೋಡಿ ಡಬ್ಬವನ್ನು ಎದುರಿಗೆ ತಂದಿಟ್ಟುಕೊಂಡಿದ್ದಾರೆ!

ಅಡಕೆಯಿಂದ ಹೋಳಿಗೆ ತಯಾರಿ : ಮಾರುಕಟ್ಟೆಯಲ್ಲಿ ಬೆಲೆ ಏರಿಕೆ

ಪ್ರತಿವರ್ಷ ಶ್ರಾವಣ ಮಾಸ, ಗಣೇಶ ಚೌತಿಯ ವೇಳೆ ಕೆಂಪಡಕೆ ದರದಲ್ಲಿ ಸ್ವಲ್ಪ ಏರಿಕೆ ಆಗುವುದು ಸಹಜ. ಆ ಬಳಿಕ ಶಿವಮೊಗ್ಗ ಮತ್ತು ಚೆನ್ನಗಿರಿ ಮಾರುಕಟ್ಟೆಗೆ ಕೆಂಪಡಕೆ ಬರಲಾರಂಭಿಸಿದ ಬಳಿಕ ದರ ಸಹಜ ಸ್ಥಿತಿ ತಲುಪುತ್ತಿತ್ತು.
ಕೆಂಪಡಕೆಯ ದರದ ನಾಗಾಲೋಟ ಕಳೆದ 10 ವರ್ಷಗಳ ಹಿಂದೆಯೂ ನಡೆದಿತ್ತು. ಪ್ರತಿ ಕ್ವಿಂಟಲ್‌ ಕೆಂಪಡಕೆಗೆ ದರ ಏರುತ್ತ ಸಾಗಿ ಒಮ್ಮೆಲೆ .83 ಸಾವಿರ ತಲುಪಿತ್ತು. ಹಿರಿಯ ಅನುಭವಿ ಡಾ. ವಿ.ಎಸ್‌. ಸೋಂದೆ ಅಡಕೆ ಮಾರುಕಟ್ಟೆಯಲ್ಲಿ ಕಾಳಸಂತೆಕೋರರು ಕೈಚಳಕ ತೋರಿಸುತ್ತಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು. ಆದರೆ, ಆ ಬಳಿಕ ದರ ಏರಿದ್ದಕ್ಕಿಂತ ವೇಗವಾಗಿ ದರ ಇಳಿಕೆಯಗಿತ್ತು.

ಇದೇ ಸಂದರ್ಭದಲ್ಲಿ ವಿದೇಶಗಳಿಂದ ಅಕ್ರಮವಾಗಿ ಅಡಕೆ ಆಮದು ಮಾಡಿಕೊಳ್ಳುತ್ತಿರುವುದು ಕೋವಿಡ್‌ ನಿರ್ಬಂಧಗಳ ಕಾರಣದಿಂದ ಬಹುತೇಕ ಕಡಿವಾಣ ಹಾಕಿದ್ದು ಕೂಡ ಅಡಕೆ ದರ ಸ್ಥಿರತೆಗೆ ಕಾರಣವಾಗಿದೆ ಎನ್ನುತ್ತಾರೆ ಕೆಲ ವ್ಯಾಪಾರಿಗಳು.

ಏನೇ ಆದರೂ ಶ್ರಾವಣದ ಸಂದರ್ಭದಲ್ಲಿ ಕೆಂಪಡಕೆ ದರ ಏರಿಕೆ ರೈತರನ್ನು, ವ್ಯಾಪಾರಿಗಳನ್ನು ಚಕಿತಗೊಳಿಸುತ್ತಿದೆ. ಶಿರಸಿ, ಸಿದ್ದಾಪುರ ಮತ್ತು ಯಲ್ಲಾಪುರ ತಾಲೂಕುಗಳಲ್ಲಿ ದೀಪಾವಳಿ ಮುಕ್ತಾಯವಾದ ಬಳಿಕ ಕೆಂಪಡಕೆ ಸಿದ್ಧಪಡಿಸುವಿಕೆಗೆ ಚಾಲನೆ ದೊರೆಯುತ್ತದೆ. ಈ ದರ ಆ ವೇಳೆಯಲ್ಲೂ ಇದ್ದರೆ ರೈತ ವಲಯದ ಸಂತಸ ಮುಂದುವರಿಯುತ್ತದೆ.

ಈ ವರ್ಷ ಮಳೆಯ ಕಾರಣ ಶಿವಮೊಗ್ಗ ಭಾಗದಲ್ಲಿ ಕೆಂಪಡಕೆ ಸಿದ್ಧವಾಗುತ್ತಿಲ್ಲ. ಸೆಪ್ಟೆಂಬರ್‌ ಅಂತ್ಯದವರೆಗೂ ಕೆಂಪಡಕೆಯ ದರ ಏರಿಕೆ ಆಗಬಹುದು ಎಂದು ಶಿರಸಿ ಟಿಎಸ್‌ಎಸ್‌ ವ್ಯವಸ್ಥಾಪಕ ನಿರ್ದೇಶಕ ರವೀಶ ಹೆಗಡೆ ತಿಳಿಸಿದ್ದಾರೆ. 
ದರ ಗಣನೀಯವಾಗಿ ಏರಿಕೆ ಆದರೆ ಹಳ್ಳಿಗಳಲ್ಲಿ ಕಳ್ಳತನವೂ ಜಾಸ್ತಿ ಆಗುವ ಆತಂಕವಿದೆ. ಅಡಕೆಗೆ ನಿರ್ದಿಷ್ಟಮತ್ತು ಸುಸ್ಥಿರ ದರದ ಅಗತ್ಯತೆ ಇದೆ ಎಂದು ಕೃಷಿಕ ರಮೇಶ ಕಾನಡೆ ಹೇಳಿದ್ದಾರೆ. 

ಕೆಂಪಡಕೆ ದರ (ಕ್ವಿಂಟಲ್‌ಗೆ ಕನಿಷ್ಠ -ಗರಿಷ್ಠ)

ಆಗಸ್ವ್‌ 7 .39600- 41500
ಆಗಸ್ವ್‌ 22 .41700- 44300
ಆಗಸ್ವ್‌ 28 .41900- 45800
ಸೆಪ್ಟೆಂಬರ್‌ 1 .43500- 47100
ಸೆಪ್ಟೆಂಬರ್‌ 2 .45819- 48399
 

Latest Videos
Follow Us:
Download App:
  • android
  • ios