ಇಂತಹ ಆರೋಗ್ಯ ಸಮಸ್ಯೆ ಇರೋರಲ್ಲೇ ಕೊರೋನಾ ಸೋಂಕು ಹೆಚ್ಚಳ..!
ಹೆಚ್ಚಾದ ಧೂಳಿಂದ ಸಾರಿ ಕೇಸ್ ಹೆಚ್ಚಳ| ಜನರಲ್ಲಿ ಹೆಚ್ಚಿದ ಆತಂಕ| ಬೇಸಿಗೆ, ಸಂಚಾರ ದಟ್ಟಣೆಯಿಂದ ಹೆಚ್ಚಾದ ಧೂಳು, ಮಾಲಿನ್ಯ| ತೀವ್ರ ಉಸಿರಾಟ ಸಮಸ್ಯೆ ಇರೋರಲ್ಲಿ ಸೋಂಕು ಹೆಚ್ಚಳ| ಮಾರ್ಚಲ್ಲಿ ಶೇ.30-40 ರಷ್ಟು ಹೆಚ್ಚಾದ ಸಾರಿ ಕೇಸ್|ಮಕ್ಕಳಿಗೂ ಧೂಳಿನಿಂದ ತೊಂದರೆ|
ಎನ್.ಎಲ್.ಶಿವಮಾದು
ಬೆಂಗಳೂರು(ಏ.03): ರಾಜ್ಯಾದ್ಯಂತ ಅದರಲ್ಲೂ ಪ್ರಮುಖವಾಗಿ ಬೆಂಗಳೂರು ನಗರದಲ್ಲಿ ಬಿಸಿಲು, ಗಾಳಿಯ ವೇಗದಿಂದ ಧೂಳು ಹಾಗೂ ಸಂಚಾರ ದಟ್ಟಣೆ ಹೆಚ್ಚಳದಿಂದ ಉಂಟಾಗುತ್ತಿರುವ ಮಾಲಿನ್ಯದಿಂದ ತೀವ್ರ ಉಸಿರಾಟ ತೊಂದರೆ (ಸಾರಿ) ಪ್ರಕರಣಗಳು ಹೆಚ್ಚಾಗುತ್ತಿವೆ. ಸಾರಿ ರೋಗಿಗಳಲ್ಲೇ ಕೊರೋನಾ ಸೋಂಕೂ ಹೆಚ್ಚಾಗಿ ವರದಿಯಾಗುತ್ತಿರುವುದು ಮತ್ತಷ್ಟುಆತಂಕ ಸೃಷ್ಟಿಸಿದೆ.
ಲಾಕ್ಡೌನ್ ವೇಳೆ ಕನಿಷ್ಠ ಮಟ್ಟಕ್ಕೆ ತಲುಪಿದ್ದ ಉದ್ಯಾನ ನಗರಿ ವಾಯು ಮಾಲಿನ್ಯ ಇದೀಗ ಸಹಜ ಸ್ಥಿತಿಗೆ ಬಂದಿದೆ. ಇನ್ನು ಜನವರಿ ವರೆಗೆ ತಂಪಾಗಿದ್ದ ಬೆಂಗಳೂರಿನಲ್ಲಿ ಗಾಳಿಯಲ್ಲಿನ ತೇವಾಂಶದಿಂದಾಗಿ ರಸ್ತೆಯಲ್ಲಿ ಧೂಳು ಮೇಲೇಳುತ್ತಿರಲಿಲ್ಲ. ಇದೀಗ ಬಿಸಿಲಿನಿಂದಾಗಿ ಗಾಳಿಯಲ್ಲಿ ಧೂಳು ಹೆಚ್ಚಾಗಿದೆ. ಹೀಗಾಗಿ ಮಾರ್ಚ್ ಎರಡನೇ ವಾರದಿಂದ ಸಾರಿ ಪ್ರಕರಣಗಳ ಸಂಖ್ಯೆ ಶೇ.30ರಿಂದ 40ರಷ್ಟು ಹೆಚ್ಚಾಗಿದೆ ಎನ್ನುತ್ತಾರೆ ತಜ್ಞರು.
ಸೂಕ್ಷ್ಮ ಧೂಳಿನ ಕಣ (ಪಿಎಂ 2.5)ಗಳು ಶ್ವಾಸಕೋಶ ಸೇರುತ್ತಿರುವುದರಿಂದ ತೀವ್ರ ಉಸಿರಾಟ ತೊಂದರೆಯ ಪ್ರಕರಣಗಳು ಹೆಚ್ಚಾಗುತ್ತವೆ. ಮಾರ್ಚ್ ಆರಂಭದಲ್ಲಿ ಪ್ರತಿ ದಿನ 300 ರಿಂದ 400 ರಷ್ಟಿದ್ದ ಸಾರಿ ಪ್ರಕರಣಗಳು, ಕಳೆದ 15 ದಿನದಿಂದ ಶೇ.30ರಿಂದ 40ರಷ್ಟು ಜಾಸ್ತಿಯಾಗಿವೆ.
ಬೆಂಗ್ಳೂರಲ್ಲಿ ಕೊರೋನಾರ್ಭಟ: 4 ತಿಂಗಳ ಬಳಿಕ ಗರಿಷ್ಠ ಕೇಸ್..!
ಸಾಂಕ್ರಾಮಿಕ ರೋಗಗಳು ಶ್ವಾಸಕೋಶಗಳಿಂದಲೇ ಹರಡುತ್ತಿರುವುದರಿಂದ ಕೊರೋನಾ ಸೋಂಕೂ ಸಹ ಹೆಚ್ಚಳವಾಗಿದ್ದು, ರಾಜೀವ್‌ಗಾಂಧಿ ಎದೆರೋಗಗಳ ಆಸ್ಪತ್ರೆಗೆ ದಾಖಲಾಗುತ್ತಿರುವ ಪ್ರತಿ 100 ಸಾರಿ ಪ್ರಕರಣಗಳಲ್ಲಿ ಶೇ.2ರಿಂದ 3ರಷ್ಟು ಮಂದಿಗೆ ಕೊರೋನಾ ಸೋಂಕು ದೃಢಪಡುತ್ತಿದೆ ಎಂದು ಆಸ್ಪತ್ರೆ ನಿರ್ದೇಶಕ ಡಾ. ಸಿ.ಎನ್.ನಾಗರಾಜ್ ಹೇಳಿದ್ದಾರೆ.
ಮಕ್ಕಳಿಗೆ ಅಪಾಯಕಾರಿ:
ಕೊರೋನಾ ಸೋಂಕಿನ ಮೊದಲ ಅಲೆಯಲ್ಲಿ ಸೋಂಕು ವಯಸ್ಕರು ಹಾಗೂ ವೃದ್ಧರಲ್ಲಿ ಹೆಚ್ಚಿನ ಅಪಾಯ ತಂದೊಡ್ಡುತ್ತಿತ್ತು. ಎರಡನೇ ಅಲೆಯಲ್ಲಿ ಮಕ್ಕಳಲ್ಲಿಯೂ ತೀವ್ರ ಉಸಿರಾಟದ ಸಮಸ್ಯೆ ಪ್ರಕರಣಗಳು ಕಂಡುಬರುತ್ತಿವೆ. ಕೆಮ್ಮು, ಸೀನು ಲಕ್ಷಣಗಳು ಕಾಣಿಸಿಕೊಳ್ಳುತ್ತಿದ್ದು, ಕ್ರಮೇಣವಾಗಿ ಉಸಿರಾಟದ ಸಮಸ್ಯೆ ಎದುರಾಗುತ್ತಿವೆ. ಹೀಗಾಗಿ ವಿಶೇಷವಾಗಿ ಮಕ್ಕಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು ಎಂದು ಹೇಳಿದರು.
ಕೊರೋನಾ ಕಂಟ್ರೋಲ್‌ಗೆ ಟಫ್ ರೂಲ್ಸ್; ಜಿಮ್, ಈಜುಕೋಳ ಬ್ಯಾನ್, ಬಾರ್‌ಗೂ ಹೋಗಂಗಿಲ್ಲ!
ನಿರ್ಲಕ್ಷ್ಯದಿಂದ ಸಮಸ್ಯೆ ಹೆಚ್ಚು
ಯುವಕರು ಕೊರೋನಾ ಬಗ್ಗೆ ನಿರ್ಲಕ್ಷ್ಯ ತೋರಿ ಮಾಸ್ಕ್‌ಗಳನ್ನು ಸೂಕ್ತ ರೀತಿಯಲ್ಲಿ ಧರಿಸುತ್ತಿಲ್ಲ. ಮಾಸ್ಕ್ ಕೊರೋನಾ ಬಾರದಂತೆ ಮಾತ್ರವಲ್ಲ ವಾಯುಮಾಲಿನ್ಯದಿಂದ ಸಾರಿ ಸಮಸ್ಯೆ ಉಂಟಾಗದಂತೆಯೂ ತಡೆಯುತ್ತದೆ. 25ರಿಂದ 40 ವರ್ಷದವರಲ್ಲಿ ರೋಗ ನಿರೋಧಕ ಶಕ್ತಿ ಇರುವುದರಿಂದ ಅವರಿಗೆ ಸಮಸ್ಯೆಯಾಗುವುದಿಲ್ಲ. ಆದರೆ, ಅವರಿಗೆ ತಗುಲಿರುವ ಸೋಂಕು ಮನೆಯಲ್ಲಿನ ಹಿರಿಯರು ಹಾಗೂ ಮಕ್ಕಳನ್ನು ಬಾಧಿಸುತ್ತದೆ. ಹೀಗಾಗಿ ನಿರ್ಲಕ್ಷ್ಯ ವಹಿಸಬಾರದು ಎಂದು ಡಾ. ಸಿ.ಎನ್.ನಾಗರಾಜ್ ಸಲಹೆ ನೀಡಿದರು.
ಬೇರೆ ಕಾಯಿಲೆಗಳಿಗೂ ದಾರಿ:
ಧೂಳು, ವಾಯುಮಾಲಿನ್ಯದಿಂದ 40 ವರ್ಷಕ್ಕಿಂತ ಮೇಲ್ಪಟ್ಟು ಧೂಮಪಾನಿಗಳಲ್ಲಿ ಹೆಚ್ಚು ಶ್ವಾಸಕೋಶ ಸಮಸ್ಯೆ ಸೃಷ್ಟಿಸುತ್ತದೆ. ಅಲ್ಲದೆ, ಹೃದಯ ಹಾಗೂ ನರ ರೋಗಗಳಿಗೂ ಆವರಿಸುತ್ತದೆ. ಗಾಳಿಯ ವೇಗ ಹೆಚ್ಚಿರುವುದರಿಂದ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಇತರರ ಆರೋಗ್ಯಕ್ಕೂ ಹಾನಿಕಾರಕ ಎನ್ನುತ್ತಾರೆ ವೈದ್ಯರು.