ಬಳ್ಳಾರಿ(ಮೇ.20): ಕೊರೋನಾ ಸೋಂಕು ನಿಯಂತ್ರಣಕ್ಕೆ ಅವಳಿ ಜಿಲ್ಲೆಯಲ್ಲಿ ಘೋಷಣೆಯಾಗಿರುವ ಐದು ದಿನಗಳ ಸಂಪೂರ್ಣ ಲಾಕ್‌ಡೌನ್‌ನಿಂದಾಗಿ ದಿನಸಿ, ಹಣ್ಣು, ತರಕಾರಿ ಸೇರಿದಂತೆ ಅಗತ್ಯ ವಸ್ತುಗಳಿಗೆ ಭಾರೀ ಬೇಡಿಕೆ ಕಂಡು ಬಂತು. ಪೈಪೋಟಿಗೆ ಬಿದ್ದವರಂತೆ ಗ್ರಾಹಕರು ಖರೀದಿಯಲ್ಲಿ ತೊಡಗಿಸಿಕೊಂಡಿದ್ದರಿಂದ ಹಣ್ಣು, ತರಕಾರಿಗಳು ಒಂದೆರೆಡು ಗಂಟೆಯಲ್ಲಿಯೇ ಖಾಲಿಯಾದವು.

ಸಾಮಾಜಿಕ ಅಂತರ ಲೆಕ್ಕಿಸದೆ ಗ್ರಾಹಕರು ತಾತ್ಕಾಲಿಕ ತರಕಾರಿ ಮಾರುಕಟ್ಟೆಗಳ ಮುಂದೆ ಮುಗಿಬಿದ್ದರು. ಸೂಪರ್‌ ಮಾರ್ಕೆಟ್‌ಗಳು ನಿಲ್ಲಲು ಜಾಗವಿಲ್ಲದಷ್ಟುಭರ್ತಿಯಾಗಿದ್ದರೆ, ದಿನಸಿ ಅಂಗಡಿಗಳ ಮುಂದೆ ಜನರು ಜನ ಜಾತ್ರೆ ಸೇರಿತ್ತು. ಬೇಕರಿಗಳ ಮುಂದೆ ಬೆಳಗ್ಗೆಯಿಂದಲೇ ಜನರು ಸಾಲುಗಟ್ಟಿನಿಂತು ಬ್ರೆಡ್‌, ಬಿಸ್ಕತ್ತು, ಕೇಕ್‌ ಮತ್ತಿತರ ಸಿಹಿ ಪದಾರ್ಥಗಳನ್ನು ಖರೀದಿಸಿದರು. ಲಾಕ್‌ಡೌನ್‌ ಶುರುವಾಗಲು 10 ಗಂಟೆ ವರೆಗೆ ಸಮಯವಿದೆ ಎಂದುಕೊಂಡು ನಿಧಾನವಾಗಿ ಮಾರುಕಟ್ಟೆಯತ್ತ ಹೆಜ್ಜೆ ಹಾಕಿದವರು ತರಕಾರಿ ಸೇರಿದಂತೆ ಅಗತ್ಯ ವಸ್ತುಗಳು ಸಿಗದೆ ಪರದಾಡಿದರು. ಐದು ದಿನಗಳಿಗಾಗುವಷ್ಟುಮದ್ಯ ಸಂಗ್ರಹಿಸಿಟ್ಟುಕೊಳ್ಳಲು ಬೆಳಗ್ಗೆಯಿಂದಲೇ ಮದ್ಯದ ಅಂಗಡಿಗಳ ಮುಂದೆ ಪಾನಪ್ರಿಯರು ಮುಗಿಬಿದ್ದಿದ್ದರು.

"

ಜನಜಂಗುಳಿ-ವಾಹನಗಳ ದಟ್ಟಣೆ:

ನಗರದ ಪ್ರಮುಖ ವ್ಯಾಪಾರ ವಹಿವಾಟಿನ ಕೇಂದ್ರ ಎನಿಸಿದ ಬೆಂಗಳೂರು ರಸ್ತೆ, ಗ್ರಹಂರಸ್ತೆ, ಕಾಳಮ್ಮಬೀದಿ, ಬ್ರಾಹ್ಮಣಬೀದಿ, ಸಣ್ಣ ಮಾರುಕಟ್ಟೆಪ್ರದೇಶ, ಹೂವಿನ ಬಜಾರ್‌ಗಳು ಜನರಿಂದ ತುಂಬಿ ತುಳುಕಿದವು. ಬೆಂಗಳೂರು ರಸ್ತೆಯಲ್ಲಿ ವಾಹನಗಳ ದಟ್ಟಣೆಯಿಂದ ವಾಹನ ಸಂಚಾರಕ್ಕೆ ವ್ಯತ್ಯಯವಾಗಿತ್ತು. ಸಾವಿರಾರು ಜನರು ದಿಢೀರ್‌ ಬೀದಿಗಿಳಿದಿದ್ದರಿಂದ ಎಲ್ಲ ರಸ್ತೆಗಳು ಹಾಗೂ ವ್ಯಾಪಾರ ಕೇಂದ್ರಗಳಲ್ಲಿ ಜನಜಂಗುಳಿ ಕಂಡು ಬಂತು. ನಗರದ ಮುನ್ಸಿಪಲ್‌ ಕಾಲೇಜಿನಲ್ಲಿ ನಿರ್ಮಿಸಲಾಗಿರುವ ತಾತ್ಕಾಲಿಕ ಮಾರುಕಟ್ಟೆಯಲ್ಲಿ ಜನಜಾತ್ರೆಯೇ ಸೇರಿತ್ತು. ಪ್ರತಿ ಅಂಗಡಿಗಳ ಮುಂದೆ ನೂರಾರು ಜನರು ಜಮಾವಣೆಗೊಂಡಿದ್ದರಲ್ಲದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ತರಕಾರಿ ಖರೀದಿಸಿದರು.

ರಾಜ್ಯದಲ್ಲೇ ಅತಿ ದೊಡ್ಡ ಜಿಂದಾಲ್‌ನಲ್ಲಿ 1000 ಬೆಡ್‌ನ ಕೋವಿಡ್‌ ಆಸ್ಪತ್ರೆ

ನೀರಿನಂತೆ ಹರಿದು ಬರುತ್ತಿರುವ ಜನರನ್ನು ನಿಯಂತ್ರಿಸಲಾಗದೇ ಪೊಲೀಸರು ಅಸಹಾಯಕರಾಗಿ ನಿಂತಿದ್ದರು. ಜನದಟ್ಟಣೆ ಹೆಚ್ಚಾಗುತ್ತಿದ್ದಂತೆಯೇ ವ್ಯಾಪಾರಿಗಳು ಸಹ ಸೋಂಕಿನ ಭೀತಿ ಎದುರಿಸಿದರು. ಸಾಮಾಜಿಕ ಅಂತರವಿಲ್ಲದೆ ಮೈಮೇಲೆ ಬಿದ್ದವರಂತೆ ವಸ್ತುಗಳ ಖರೀದಿಗೆ ಮುಂದಾದ ಜನರ ವರ್ತನೆಗೆ ಬೇಸರಗೊಂಡ ವ್ಯಾಪಾರಿಗಳು, ಹೀಗೆ ಮುಗಿಬಿದ್ದರೆ ನಾವು ಹೇಗೆ ವ್ಯಾಪಾರ ಮಾಡುವುದು? ನಮಗೂ ಸೋಂಕು ಹಬ್ಬಿದರೆ ಏನು ಗತಿ? ಎಂದು ಬೇಸರ ವ್ಯಕ್ತಪಡಿಸಿದರು. ಎಂದಿಗಿಂತಲೂ ಮೂರುಪಟ್ಟು ಜನದಟ್ಟಣೆ ಹೆಚ್ಚಾಗಿತ್ತು. ಸಾವಿರಾರು ಜನರು ರಸ್ತೆಯಲ್ಲಿ ವ್ಯಾಪಾರಕ್ಕೆಂದು ಇಳಿದಿದ್ದರಿಂದ ಟ್ರಾಫಿಕ್‌ ಜಾಮ್‌ ಆಯಿತು. ಇಕ್ಕಟ್ಟಿನ ರಸ್ತೆಯಲ್ಲಿಯೇ ಜನರು ಪರದಾಡಿಕೊಂಡು ಹೊರ ಬರುತ್ತಿರುವುದು ಕಂಡು ಬಂತು. ಐದು ದಿನಗಳ ಕಾಲ ಎಲ್ಲವೂ ಬಂದ್‌ ಆಗಿರುತ್ತದೆ ಎಂಬ ಕಾರಣಕ್ಕೆ ನಗರ ಪ್ರದೇಶದ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಜನರು ನಗರಕ್ಕೆ ಆಗಮಿಸಿ, ಅಗತ್ಯ ವಸ್ತುಗಳನ್ನು ಖರೀದಿಸಲು ಮುಂದಾಗಿದ್ದು ಸಹ ಜನಜಂಗುಳಿಗೆ ಕಾರಣವಾಯಿತು.

ದಿಢಿರ್‌ ಬೆಲೆ ಏರಿಕೆ:

ಲಾಕ್‌ಡೌನ್‌ನಿಂದಾಗಿ ತರಕಾರಿ ಖರೀದಿಸಲು ಜನರು ಹೆಚ್ಚಾಗುತ್ತಿದ್ದಂತೆಯೇ ತರಕಾರಿ ಹಾಗೂ ಹಣ್ಣಿನ ವ್ಯಾಪಾರಿಗಳು ದರ ಏರಿಕೆ ಮಾಡಿದರು. ನಿತ್ಯ ಕೆಜಿಗೆ 12ರಿಂದ 15ಗೆ ಸಿಗುತ್ತಿದ್ದ ಟೊಮೆಟೋ 50ಕ್ಕೆ ಮಾರಾಟ ಮಾಡಿಕೊಂಡರು. ಬೀನ್ಸ್‌ 65, ಹಸಿ ಮೆಣಸಿನಕಾಯಿ 60, ಹೀರೇಕಾಯಿ 70, ಕೋಸ್‌ 60ಗೆ ಮಾರಾಟವಾದವು. ನಗರದ ವಿವಿಧ ತರಕಾರಿ ಮಾರುಕಟ್ಟೆಯಲ್ಲಿ ಒಂದೊಂದು ರೀತಿಯಲ್ಲಿ ವ್ಯಾಪಾರ ನಡೆಯಿತು.
ಎಷ್ಟೇ ದರ ಏರಿಕೆಯಾದರೂ ಗ್ರಾಹಕರು ಖರೀದಿಗೆ ಹಿಂದೆ ಬೀಳಲಿಲ್ಲ. ಮನೆಯ ಮುಂದೆಯೇ ತರಕಾರಿ ತಳ್ಳುವ ಗಾಡಿಗಳು ಬರಲಿವೆ ಎಂದು ಜಿಲ್ಲಾಡಳಿತ ತಿಳಿಸಿದ್ದರೂ, ಮುಂಜಾಗ್ರತಾ ಕ್ರಮವಾಗಿ ಒಂದೇ ದಿನ ದಿನಸಿ, ತರಕಾರಿ, ಹಾಲು, ಹಣ್ಣುಗಳನ್ನು ಜನರು ಮುಗಿಬಿದ್ದು ಖರೀದಿಸಿದರು.

ಗ್ರಾಹಕರು ಹೋಟೆಲ್‌ಗಳಿಗೆ ಹೋಗುವಂತಿಲ್ಲ. ಹೋಟೆಲ್‌ಗಳು ಪಾರ್ಸೆಲ್‌ಗಳನ್ನು ಮನೆಗಳಿಗೆ ತೆರಳಿ ಪೂರೈಸಲು ಅವಕಾಶವಿತ್ತು. ಆದರೆ, ಬಹುತೇಕ ಹೋಟೆಲ್‌ಗಳು ಬಂದ್‌ ಮಾಡಿಕೊಂಡಿದ್ದವು. ಪಾರ್ಸೆಲ್‌ಗೆ ಹೆಚ್ಚಿನ ಬೇಡಿಕೆ ಬಾರದ ಹಿನ್ನೆಲೆಯಲ್ಲಿ ಮನೆ-ಮನೆ ಸೇವೆಯಿಂದ ದೂರ ಉಳಿದವು. ಜಿಂದಾಲ್‌ ಸೇರಿದಂತೆ ಅನೇಕ ಕಾರ್ಖಾನೆಗಳು ತಮ್ಮಲ್ಲಿರುವ ಕಾರ್ಮಿಕರನ್ನು ಬಳಸಿಕೊಂಡು ಉತ್ಪಾದನಾ ಕಾರ್ಯ ಮುಂದುವರಿಸಿದವು.

ಲಾಕ್‌ಡೌನ್‌ ಸಕ್ಸಸ್‌:

ಕೊರೋನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಕೈಗೊಂಡ ಐದು ದಿನಗಳ ಸಂಪೂರ್ಣ ಲಾಕ್‌ಡೌನ್‌ಗೆ ಮೊದಲ ದಿನ ಉತ್ತಮ ಸ್ಪಂದನೆ ಸಿಕ್ಕಿದೆ. ಜಿಲ್ಲೆಯ ಎಲ್ಲೆಡೆ ಪೊಲೀಸರನ್ನು ನಿಯೋಜನೆಗೊಳಿಸಲಾಗಿತ್ತು. ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಜನರು ಹೊರ ಬರದಂತೆ ಕಟ್ಟುನಿಟ್ಟಿನ ಕ್ರಮ ವಹಿಸಲಾಗಿತ್ತು. ಅಂತರ ಜಿಲ್ಲಾ ಹಾಗೂ ಅಂತರಾಜ್ಯ ಗಡಿಗಳಲ್ಲಿ ನಿರ್ಮಿಸಲಾಗಿರುವ ಚೆಕ್‌ಪೋಸ್ಟ್‌ಗಳನ್ನು ಮತ್ತಷ್ಟು ಬಿಗಿಗೊಳಿಸಲಾಗಿದ್ದು, ಜಿಲ್ಲೆಯೊಳಗೆ ಯಾರೂ ನುಸುಳದಂತೆ ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ. ಲಾಕ್‌ಡೌನ್‌ ವೇಳೆ ಮನೆಯಾಚೆ ಬರುವವರಿಗೆ ದಂಡದ ಜತೆಗೆ ಜೈಲಿಗೆ ಕಳುಹಿಸುವುದಾಗಿ ಎಚ್ಚರಿಕೆ ನೀಡಿದ್ದರಿಂದ ಬಹುತೇಕರು ಮನೆಯಲ್ಲಿಯೇ ಉಳಿದರು. ಲಾಕ್‌ಡೌನ್‌ ಶುರು ಮುನ್ನ ಬೆಳಗ್ಗೆ ಜನರಿಂದ ತುಂಬಿಕೊಂಡಿದ್ದ ರಸ್ತೆಗಳು 10 ಗಂಟೆಯ ಬಳಿಕ ಸಂಪೂರ್ಣ ಖಾಲಿಯಾಗಿದ್ದವು. ಎಸ್ಪಿ, ಎಎಸ್ಪಿ ಸೇರಿದಂತೆ ಹಿರಿಯ ಪೊಲೀಸ್‌ ಅಧಿಕಾರಿಗಳು ನಗರದಲ್ಲಿ ಗಸ್ತು ತಿರುಗಿದರು. ಓಣಿ ಓಣಿಗಳಲ್ಲಿ ಪೊಲೀಸರು ಓಡಾಡಿ ಜನರ ಚಲನವಲನ ಗಮನಿಸಿದರು. ವ್ಯಾಕ್ಸಿನ್‌ ಹಾಕಿಸಿಕೊಳ್ಳುವವರು, ವೈದ್ಯಕೀಯ ತುರ್ತು ಕೆಲಸವಿದ್ದವರು ಮಾತ್ರ ಅಲ್ಲಲ್ಲಿ ಓಡಾಡುತ್ತಿರುವುದು ಕಂಡು ಬಂತು. ಹೊರ ಬಂದವರನ್ನು ಪೊಲೀಸರು ಪರಿಶೀಲಿಸಿ, ಕಳಿಸುತ್ತಿರುವ ದೃಶ್ಯಗಳು ಕಂಡು ಬಂದವು. ವಿನಾಕಾರಣ ಹೊರ ಬಂದಿರುವುದು ಗೊತ್ತಾಗುತ್ತಿದ್ದಂತೆಯೇ ದಂಡ ಹಾಕಿದ ಪೊಲೀಸರು, ಅನೇಕರ ವಿರುದ್ಧ ಪ್ರಕರಣಗಳನ್ನು ಸಹ ದಾಖಲಿಸಿದರು.

1337 ವಾಹನ ಜಪ್ತಿ

ಜಿಲ್ಲೆಯಲ್ಲಿ ಗುರುವಾರ ಲಾಕ್‌ಡೌನ್‌ ನಿಯಮ ಉಲ್ಲಂಘಿಸಿದ 1337 ವಾಹನಗಳನ್ನು ಜಪ್ತಿ ಮಾಡಲಾಗಿದೆ. 780 ಪ್ರಕರಣಗಳನ್ನು ದಾಖಲಿಸಿಕೊಂಡು 75,550 ದಂಡ ವಸೂಲಿ ಮಾಡಲಾಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona