ಹುಬ್ಬಳ್ಳಿ(ಅ.4]: ಆಧುನಿಕ ಜಗತ್ತಿನಲ್ಲಿ ವಯಸ್ಸಾದ ತಂದೆ ತಾಯಿ ಹಾಗೂ ಹಿರಿಯರನ್ನು ನಿರ್ಲಕ್ಷಿಸಲಾಗುತ್ತಿದೆ. ಪ್ರೀತಿಯಿಂದ ಸೇವೆ ಮಾಡುವುದರ ಬದಲು, ವೃದ್ಧಾಶ್ರಮಕ್ಕೆ ಕಳುಹಿಸುವ ಪರಿಪಾಠ ಬೆಳೆಯುತ್ತಿದೆ. ವೃದ್ಧಾಶ್ರಮಗಳು ಹೆಚ್ಚುವುದು ಸಮಾಜಕ್ಕೆ ಒಳಿತಲ್ಲ ಎಂದು ಮಹಾವೀರ ಲಿಂಬ್‌ ಸೆಂಟರ್‌ ಮಹೇಂದ್ರ ಸಿಂಘಿ ಹೇಳಿದರು.

ಇಲ್ಲಿನ ಬಿ.ವಿ.ಬಿ ಎಂಜಿನಿಯರಿಂಗ್‌ ಕಾಲೇಜು ಕ್ರೀಡಾಂಗಣದಲ್ಲಿ ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ ಹಿರಿಯ ನಾಗರಿಕರಿಗಾಗಿ ಏರ್ಪಡಿಸಿದ್ದ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ದೇಶದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿ ಹೆಚ್ಚಾಗುತ್ತಿದ್ದು, ಈ ಪದ್ಧತಿ ಬದಲಾಗಬೇಕು. ಹಿರಿಯರು, ತಂದೆ ತಾಯಿಯರನ್ನು ಪ್ರೀತಿ ವಿಶ್ವಾಸದಿಂದ ಕಾಣಬೇಕು. ವಯಸ್ಸಾದರೂ ಉತ್ಸಾಹದಿಂದ ಕ್ರೀಡೆಯಲ್ಲಿ ಪಾಲ್ಗೊಂಡ ಹಿರಿಯರನ್ನು ನೋಡಿದರೆ ಸಂತೋಷವಾಗುತ್ತದೆ ಎಂದು ಹೇಳಿದ್ದಾರೆ.

ಇದೇ ವೇಳೆ ಮಾತನಾಡಿದ ಕರ್ನಾಟಕ ರಾಜ್ಯ ನಿವೃತ್ತ ಸರ್ಕಾರಿ ಹಾಗೂ ಹಿರಿಯ ನಾಗರಿಕರ ಕೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಎ. ಪಾಟೀಲ ಅವರು, ಸರ್ಕಾರ ಹಿರಿಯ ನಾಗರಿಕರಿಗಾಗಿ ಪ್ರತ್ಯೇಕ ಕಾನೂನುಗಳನ್ನು ರೂಪಿಸಿದೆ. ಹಿರಿಯರ ಸಹಾಯಕ್ಕಾಗಿ ವಿಶೇಷ ಸೌಲತ್ತುಗಳನ್ನು ನೀಡಲಾಗಿದೆ. ಇವುಗಳ ಬಗ್ಗೆ ಹಲವು ಜನರಿಗೆ ಮಾಹಿತಿ ಇಲ್ಲ. ಸರ್ಕಾರದ ಸೌಲಭ್ಯಗಳನ್ನು ಹಿರಿಯ ನಾಗರಿಕರಿಗೆ ತಲುಪಿಸಲು ಸಂಘ ಪ್ರಯತ್ನಿಸುತ್ತಿದೆ. ಸರ್ಕಾರ ಹಿರಿಯ ನಾಗರಿಕ ಕುಂದು ಕೊರತೆಗಳ ಅಧ್ಯಯನಕ್ಕಾಗಿ ಆಯೋಗ ಹಾಗೂ ಮಂಡಳಿ ನೇಮಕ ಮಾಡಬೇಕು. ಹಿರಿಯ ನಾಗರಿಕರ ಸಮಸ್ಯೆಗಳನ್ನು ಬಗೆಹರಿಸಲು ಏಕಗವಾಕ್ಷಿ ಯೋಜನೆ ತೆರೆಯಬೇಕು ಎಂದು ತಿಳಿಸಿದ್ದಾರೆ. 

ಈ ಸಂದರ್ಭದಲ್ಲಿ ಅಂಧ ಮಕ್ಕಳ ಶಿಕ್ಷಣ ಸಂಸ್ಥೆಯ ಐ.ಕೆ.ಲಕ್ಕುಂಡಿ, ಕಿಮ್ಸ್‌ ವೈದ್ಯಾಧಿಕಾರಿ ಡಾ. ಸುನಿಲ್‌ ಕೊಕ್ಲೆ, ಬಿವಿಬಿ ಕಾಲೇಜಿನ ನಿವೃತ್ತ ದೈಹಿಕ ನಿರ್ದೇಶಕ ಕುರಡಗೋಡಿ, ರಮಾ ನೀಲಪ್ಪಗೌಡರು, ಮಹಾವೀರ ಕುಂದೂರ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

ಉತ್ಸಾಹದಿಂದ ಕ್ರೀಡೆಯಲ್ಲಿ ಪಾಲ್ಗೊಂಡ ಹಿರಿಯ ನಾಗರಿಕರು

100, 75ಮೀಟರ್‌ ಓಟ, ನಡಿಗೆ, ಶಾಟ್‌ಫುಟ್‌, ಕ್ರಿಕೆಟ್‌ ಬಾಲು ಎಸೆತ ಕ್ರೀಡೆಗಳನ್ನು ಹಿರಿಯ ನಾಗರಿಕರಿಗಾಗಿ ಏರ್ಪಡಿಸಲಾಗಿತ್ತು. ಉತ್ಸಾಹದಿಂದ ಹಿರಿಯ ನಾಗರಿಕರು ಕ್ರೀಡೆಯಲ್ಲಿ ಪಾಲ್ಗೊಂಡರು. 60 ರಿಂದ 70 ವಯೋ ಗುಂಪಿನವರಿಗಾಗಿ ಏರ್ಪಡಿಸಿದ್ದ ಪುರುಷರ 100 ಮೀಟರ್‌ ಓಟದ ಸ್ಪರ್ಧೆಯಲ್ಲಿ ಕೆ.ಬಿ.ಹುಬ್ಬಳ್ಳಿ ಪ್ರಥಮ, ಈರಪ್ಪ ಕಾಡಪ್ಪನವರ ದ್ವಿತೀಯ, ಜಿ.ಸಿ. ಅರಳಿ ತೃತೀಯ ಸ್ಥಾನ ಗಳಿಸಿದರು. ಶಾಟ್‌ಫುಟ್‌ಎಸೆತದಲ್ಲಿ ಎಂ.ಎಂ.ಕುರಗೋಡಿ ಪ್ರಥಮ, ಈರಪ್ಪ ಕಾಡಪ್ಪನವರ ದ್ವಿತೀಯ, ಎಂ.ಎ.ಕಪ್ಪಸೂರ ತೃತೀಯ ಸ್ಥಾನಗಳಿಸಿದರು.

71 ರಿಂದ 80 ವಯೋ ಗುಂಪಿನವರಿಗಾಗಿ ಏರ್ಪಡಿಸಿದ್ದ ಪುರುಷರ 75ಮೀಟರ್‌ ಓಟದ ಸ್ಪರ್ಧೆಯಲ್ಲಿ ಎಸ್‌.ಎಂ. ಸಲಕಿ ಪ್ರಥಮ, ಜಿ.ಸಿ. ಮೋರೆ ದ್ವಿತೀಯ, ಎ.ವಿ.ಶೇಖ್‌ ತೃತೀಯ ಸ್ಥಾನ ಗಳಿಸಿದರು. ಶಾಟ್‌ಫುಟ್‌ಎಸೆತದಲ್ಲಿ ಎಂ.ಸಿ. ರವದಿ ಪ್ರಥಮ, ಗುಡ್ಡದ ಮಠ ದ್ವಿತೀಯ, ಎಂ.ವಿ. ಶೇಖ್‌ ತೃತೀಯ ಸ್ಥಾನ ಗಳಿಸಿದರು.

81ವಯೋಮಾನದವರಿಗೆ ಏರ್ಪಡಿಸಿದ್ದ 200 ಮೀಟರ್‌ ನಡಿಗೆ ಸ್ಪರ್ಧೆಯಲ್ಲಿ ಪಿ.ಎನ್‌. ಸಣ್ಣಮನಿ ಪ್ರಥಮ, ಪಿ.ಬಿ. ಹಿರೇಮಠ ದ್ವಿತೀಯ, ಮಲ್ಲಪ್ಪ ಬಿ ಗಂಗಣ್ಣನವರ ತೃತೀಯ ಸ್ಥಾನಗಳಿಸಿದರು. ಕ್ರಿಕೆಟ್‌ ಬಾಲ್‌ಎಸೆತದಲ್ಲಿ ಪಿ.ಬಿ.ಹಿರೇಮಠ, ಪಿ.ಎನ್‌. ಸಣ್ಣಮನಿ ,ಆರ್‌.ಟಿ. ದೊಡ್ಡಮನಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದರು.

ಮಹಿಳೆಯರ ಕ್ರೀಡಾ ಸ್ಪರ್ಧೆಗಳಲ್ಲಿ 60 ರಿಂದ 70ವಯೋ ಗುಂಪಿನ 400 ಮೀಟರ್‌ ನಡಿಗೆಯಲ್ಲಿ ಭವಾನಿ ಭಂಡಾರಿ ಪ್ರಥಮ, ವನಿತಾ ಹೆಗಡೆ ದ್ವಿತೀಯ, ವಿಮಲಾ ಎಸ್‌ ಜಾಧವ್‌ ತೃತೀಯ ಸ್ಥಾನ ಗಳಿಸಿದರು. ಕ್ರಿಕೆಟ್‌ ಬಾಲ್‌ ಎಸೆತ ಸ್ಪರ್ಧೆಯಲ್ಲಿ ಭವಾನಿ ಭಂಡಾರಿ, ಪಾರ್ವತಿ ಸಂಕದಾಳ, ದೌಶಾದೇವಿ ಕುಸುಗಲ್‌ ಜಯಗಳಿಸಿದರು. 71ರಿಂದ 80 ವಯೋಮಾನದ ಗುಂಪಿನ 200 ಮೀಟರ್‌ ನಡಿಗೆಯಲ್ಲಿ ಅನುಸೂಯಾ ಪ್ರಥಮ, ಕಮಲಾಕ್ಷಿ ದ್ವಿತೀಯ, ಎಸ್‌.ಎಂ.ಗೀತಾ ತೃತೀಯ ಸ್ಥಾನ ಗಳಿಸಿದರು. ಕ್ರಿಕೆಟ್‌ ಬಾಲ್‌ಎಸೆತ ಸ್ಪರ್ಧೆಯಲ್ಲಿ ಕಮಲಾಕ್ಷ್ಮಿ ಹಿರೇಗೌಡರ, ಕೃಷ್ಣಾಬಾಯಿ ಕುಲಕರ್ಣಿ, ರಂಗರೇಜ ಜಯ ಗಳಿಸಿದರು.

ಏಕಪಾತ್ರಾಭಿನಯ ಮತ್ತು ಜಾನಪದಗೀತೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಹಿರಿಯ ನಾಗರಿಕರಿಗಾಗಿ ಹಮ್ಮಿಕೊಳ್ಳಲಾಗಿತ್ತು.

ಮಲೇಷಿಯಾಕ್ಕೆ ಜಿಲ್ಲೆಯವರು:

ಕ್ರೀಡಾಕೂಟದಲ್ಲಿ ಭಾಗವಹಿಸಿ ವಿಜೇತರಾದ ಜಿಲ್ಲೆಯ ಮೂವರು ಹಿರಿಯ ನಾಗರಿಕರು ಮಲೇಷಿಯಾದ ಸಾರ್ವಾಕ್‌ ರಾಜ್ಯದ ರಾಜಧಾನಿ, ಕುಚಿಂಗ್‌ ನಗರದಲ್ಲಿ, ಮಲೇಷಿಯಾ ಮಾಸ್ಟರ್‌ ಅಥ್ಲೆಟಿಕ್ಸ ಅಸೋಷಿಯೇಷನ್‌ ವತಿಯಿಂದ ಡಿ. 2 ರಿಂದ 6ರವರೆಗೆ ಆಯೋಜಿಸಲಾಗಿರುವ 21ನೇ ಹಿರಿಯ ನಾಗರಿಕರ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. 83ವರ್ಷದ ಎಂ.ಬಿ. ಗಂಗಣ್ಣ ರನ್ನಿಂಗ್‌ ಹಾಗೂ ಜಾವಲಿನ್‌ ಥ್ರೋ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ. 84 ವರ್ಷದ ಪಿ.ಬಿ. ಹಿರೇಮಠ ಶಾಟ್‌ಫುಟ್‌, ಡಿಸ್ಕಸ್‌ ಥ್ರೋ ಹಾಗೂ ರನ್ನಿಂಗ್‌ ವಿಭಾಗದಲ್ಲಿ ಸ್ಪರ್ಧಿಸುವರು. 80 ವರ್ಷದ ಶಿವಪ್ಪ ಸಲಕಿ 10 ಹಾಗೂ 5 ಕಿ.ಮೀ. ನಡಿಗೆ, 5 ಕಿ.ಮೀ. ಹಾಗೂ 1500 ಮೀ ಓಟದ ಸ್ಪರ್ಧೆಯಲ್ಲಿ ಭಾಗವಹಿಸಿ,ಜೊತೆಗೆ ಯೋಗಾಸನವನ್ನು ಪ್ರದರ್ಶಿಸುವರು.