ಬೆಂಗಳೂರು(ಫೆ.05): ಬೌರಿಂಗ್‌ ಆಸ್ಪತ್ರೆಯಲ್ಲಿ ವೈದ್ಯಕೀಯ ಕಾಲೇಜು ಕಟ್ಟಡ ಹಾಗೂ ಎಚ್‌ಎಸ್‌ಐಎಲ್‌ ಘೋಷಾ ಆಸ್ಪತ್ರೆಯ ಆವರಣದಲ್ಲಿ ಬಾಲಕಿಯರ ವಿದ್ಯಾರ್ಥಿನಿಲಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಮೊದಲು 187 ಕೋಟಿ ಅನುದಾನ ಒದಗಿಸಲಾಗಿತ್ತು. ಬಳಿಕ ಕ್ರಮವಾಗಿ 46.76 ಕೋಟಿ ಹಾಗೂ 18.78 ಕೋಟಿ ಸೇರಿಸಿ ಒಟ್ಟು 263.10 ಕೋಟಿ ವೆಚ್ಚದಲ್ಲಿ ಅನುಮೋದನೆ ನೀಡಲು ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ. 

ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಆರೋಗ್ಯ ಇಲಾಖೆಯಡಿ ವಿವಿಧ ಜಿಲ್ಲೆಗಳಲ್ಲಿ ತುರ್ತು ಸೇವೆಗಾಗಿ ಉಪಯೋಗಿಸಲು 32.04 ಕೋಟಿ ವೆಚ್ಚದಲ್ಲಿ ಹೊಸ 120 ಆ್ಯಂಬುಲೆನ್ಸ್‌ ವಾಹನ ಖರೀದಿಸಲು ನಿರ್ಧಾರ ಮಾಡಲಾಗಿದೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಬೆಂಗಳೂರು ಕೇಂದ್ರ ಕಾರಾಗೃಹದ ಎರಡನೇ ಹಂತದ ಅಭಿವೃದ್ಧಿ ಕಾಮಗಾರಿಗಳಿಗೆ 10.56 ಕೋಟಿ ವೆಚ್ಚದ ಘಟನೋತ್ತರ ಅನುಮೋದನೆ ಹಾಗೂ ಬೀದರ್‌ನಲ್ಲಿ ವಿಶಿಷ್ಟ ಕಾರಾಗೃಹ ನಿರ್ಮಿಸಲು 99.90 ಕೋಟಿ ಹಣ ಬಿಡುಗಡೆಗೆ ನಿರ್ಧಾರ ಕೈಗೊಳ್ಳಲಾಗಿದೆ. ಶಿವಮೊಗ್ಗ ವಿಮಾನ ನಿಲ್ದಾಣ ಕಾಮಗಾರಿಗೆ 220 ಕೋಟಿ ಮೊತ್ತದ ಕಾನ್ಸೆಪ್ಟ್‌ ನೋಟ್‌ಗೆ ಅನುಮೋದನೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.