Asianet Suvarna News Asianet Suvarna News

ಹೆಚ್ಚಿದ ರಸ್ತೆ ಅಪಘಾತ: ಸಾವಿನ ಸಂಖ್ಯೆಯಲ್ಲೂ ಏರಿಕೆ..!

ಕಳೆದ ಒಂದು ವರ್ಷದ ಅವಧಿಯಲ್ಲಿ 576 ಅಪಘಾತಗಳ ಪ್ರಕರಣಗಳು ಸಂಭವಿಸಿ, ಬರೋಬ್ಬರಿ 244 ಜನರು ಸಾವಿನ ಮನೆಯ ಕದ ತಟ್ಟಿದ್ದಾರೆ. ಮಾರಣಾಂತಿಕ ಹಾಗೂ ಮಾರಣಾಂತಿಕವಲ್ಲದ ಅಪಘಾತದಲ್ಲಿ 728 ಜನರು ಗಂಭೀರ ಗಾಯಗೊಂಡಿದ್ದಾರೆ. 

Increase in Death toll due to Increased Road Accidents in Ballari grg
Author
First Published Jan 5, 2024, 4:00 AM IST

ಕೆ.ಎಂ. ಮಂಜುನಾಥ್ 

ಬಳ್ಳಾರಿ(ಜ.05):  ಗಣಿ ಜಿಲ್ಲೆ ಬಳ್ಳಾರಿಯಲ್ಲಿ ರಸ್ತೆ ಅಪಘಾತಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿದ್ದು, ಕಳೆದ ಒಂದು ವರ್ಷದ ಅವಧಿಯಲ್ಲಿ 576 ಅಪಘಾತಗಳ ಪ್ರಕರಣಗಳು ಸಂಭವಿಸಿ, ಬರೋಬ್ಬರಿ 244 ಜನರು ಸಾವಿನ ಮನೆಯ ಕದ ತಟ್ಟಿದ್ದಾರೆ. ಮಾರಣಾಂತಿಕ ಹಾಗೂ ಮಾರಣಾಂತಿಕವಲ್ಲದ ಅಪಘಾತದಲ್ಲಿ 728 ಜನರು ಗಂಭೀರ ಗಾಯಗೊಂಡಿದ್ದಾರೆ!!

ಸಂಚಾರ ನಿಯಮ ಪಾಲನೆಯ ನಿರ್ಲಕ್ಷ್ಯ ಹಾಗೂ ಮಿತಿ ಮೀರಿದ ವೇಗವೇ ಪ್ರಮುಖ ಅಪಘಾತಕ್ಕೆ ಪ್ರಮುಖ ಕಾರಣವಾಗಿಸಿದೆ. ಹೆಲ್ಮೆಟ್ ಇಲ್ಲದ ಕಾರಣಕ್ಕೆ ಸಾಕಷ್ಟು ವಾಹನ ಸವಾರರು ಅಮೂಲ್ಯ ಜೀವ ಕಳೆದುಕೊಂಡಿದ್ದಾರೆ. ಅಪಘಾತ ಪ್ರಕರಣಗಳಲ್ಲಿ ಬೈಕ್ ಅಪಘಾತವೇ ಹೆಚ್ಚಿನ ಸಂಖ್ಯೆಯಲ್ಲಿವೆ. ಉಳಿದಂತೆ ಲಾರಿ, ಟ್ರ್ಯಾಕ್ಟರ್, ಟ್ರ್ಯಾಕ್ಸ್ ಅಪಘಾತಗಳಲ್ಲಿ ಜನರು ಜೀವ ತೆತ್ತಿದ್ದಾರೆ.

ನ್ಯೂ ಇಯರ್ ಎಣ್ಣೆಪಾರ್ಟಿ ಮುಗಿಸಿ ವಾಪಸ್ಸಾಗುತ್ತಿದ್ದಾಗ ಬೈಕ್ ಅಪಘಾತ ಓರ್ವ ಸಾವು, ಇನ್ನೋರ್ವ ಗಂಭೀರ ಗಾಯ!

ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಹೆಚ್ಚಿನ ಅಪಘಾತಗಳು ಸಂಭವಿಸಿದ್ದು, ಇಲ್ಲಿ ಜೀವ ಕಳೆದುಕೊಂಡವರೇ ಹೆಚ್ಚು. ಕಳೆದ ಮೂರು ವರ್ಷಗಳಲ್ಲಾದ ಅಪಘಾತ ಪ್ರಕರಣಗಳನ್ನು ನೋಡಿದರೆ ವರ್ಷದಿಂದ ವರ್ಷಕ್ಕೆ ಅಪಘಾತಗಳ ಸಂಖ್ಯೆಯಲ್ಲಿ ಏರಿಕೆ ಕಾಣುತ್ತಿರುವುದು ತೀವ್ರ ಆತಂಕಕ್ಕೆ ಕಾರಣವಾಗಿದೆ.

ಬಳ್ಳಾರಿ ನಗರದಲ್ಲಿ ವರ್ಷದಲ್ಲಿ 52 ಸಾವು: 

ರಸ್ತೆ ಅಪಘಾತಗಳು ಜನರನ್ನು ಬರೀ ಸಾವಿನ ಮನೆಗಷ್ಟೇ ದೂಡಿಲ್ಲ. ನೂರಾರು ಜನರ ಬದುಕನ್ನು ಅಶಕ್ತಗೊಳಿಸಿದೆ. ಬೈಕ್ ಸವಾರರು ಸೇರಿದಂತೆ ವಿವಿಧ ಬಗೆಯ ಅಪಘಾತಕ್ಕೀಡಾದವರು ಕೈಕಾಲುಗಳನ್ನು ಕಳೆದುಕೊಂಡರೆ, ಮತ್ತೆ ಕೆಲವರು ಶಾಶ್ವತ ಅಂಗವಿಕಲರಾಗಿದ್ದಾರೆ. ಅಪಘಾತದಲ್ಲಿ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದು ವರ್ಷಗಟ್ಟಲೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಲಕ್ಷಾಂತರ ರು. ಕಳೆದುಕೊಂಡಿದ್ದಾರೆ. ಹೀಗೆ ಅಂಗವೈಕಲ್ಯ ಎದುರಿಸುತ್ತಿರುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿದೆ. ಪೊಲೀಸ್ ಇಲಾಖೆ ಮಾಹಿತಿಯೇ ನೀಡುವ ಪ್ರಕಾರ ಕಳೆದ ಒಂದು ವರ್ಷದಲ್ಲಿ (2023ರ ಜನವರಿಯಿಂದ ಡಿಸೆಂಬರ್ 30ರವರೆಗೆ) 159 ಅಪಘಾತ ಪ್ರಕರಣಗಳು ಸಂಭವಿಸಿದ್ದು, ಈ ಪೈಕಿ 52 ಜನರು ಸಾವಿಗೀಡಾಗಿದ್ದು, 95 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಮುಂಜಾನೆ ಕೊರೆಯುವ ಚಳಿಗೆ ಹೆಚ್ಚುತ್ತಿರುವ ಅಪಘಾತ; ರಾತ್ರಿ ಪಾಳಿ ಚಾಲಕರಿಗೆ ಥರ್ಮೋ ಫ್ಲಾಸ್ಕ್ ನೀಡಲು KSRTC ನಿರ್ಧಾರ

ಹೆಲ್ಮೆಟ್ ಇಲ್ಲದೆ ಶೇ. 70ರಷ್ಟು ಜನರು ಸಾವು:

ರಸ್ತೆ ಅಪಘಾತ ಪ್ರಕರಣಗಳ ಪೈಕಿ ಹೆಲ್ಮೆಟ್ ಇಲ್ಲದೆ ಶೇ. 70ರಷ್ಟು ಜನ ಬೈಕ್ ಸವಾರರು ಸಾವಿಗೀಡಾಗುತ್ತಿದ್ದಾರೆ ಎನ್ನುತ್ತಾರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು. ಕನ್ನಡಪ್ರಭ ಜತೆ ಮಾತನಾಡಿದ ಅವರು, ತ್ರಿಬಲ್ ರೈಡಿಂಗ್, ಮದ್ಯ ಸೇವಿಸಿ ವಾಹನ ಚಲಾಯಿಸುವುದು, ವಾಹನ ಸವಾರರ ಮೊಬೈಲ್ ಬಳಕೆಯಿಂದ ಸಹ ಅಪಘಾತಗಳು ಹೆಚ್ಚಾಗುತ್ತಿವೆ. ಸಾರ್ವಜನಿಕರು ಹೆಲ್ಮೆಟ್ ಇಲ್ಲದೆ ವಾಹನ ಸವಾರಿ ಮಾಡಬಾರದು ಎಂಬುದು ಸೇರಿದಂತೆ ಸಂಚಾರ ನಿಯಮಗಳ ಪಾಲನೆ ಕುರಿತು ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ರಸ್ತೆ ಅಪಘಾತ ತಪ್ಪಿಸಲು ಸಾರ್ವಜನಿಕರ ಸಹಕಾರ ಬಹಳ ಅಗತ್ಯವಾಗಿರುತ್ತದೆ. ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಿದರೆ ಭಾಗಶಃ ಅಪಘಾತ ಪ್ರಕರಣಗಳನ್ನು ತಪ್ಪಿಸಬಹುದು ಎಂದು ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ಹೇಳುತ್ತಾರೆ.

Follow Us:
Download App:
  • android
  • ios