ಬೆಂಗಳೂರು[ನ.16] : ಸುಮ್ಮನಹಳ್ಳಿ ಮೇಲ್ಸೇತುವೆ ಮೇಲ್ಭಾಗದಲ್ಲಿ ಗುಂಡಿ ದುರಸ್ತಿ ಕಾರ್ಯ ಪೂರ್ಣಗೊಂಡಿದ್ದು, ಗುಂಡಿ ಬಿದ್ದ ಮಾರ್ಗದಲ್ಲಿ ಸೋಮವಾರದಿಂದ ಮತ್ತೆ ಸಂಚಾರ ಆರಂಭವಾಗಲಿದೆ ಎಂದು ಬಿಬಿಎಂಬಿ ಅಧಿಕಾರಿಗಳು ತಿಳಿಸಿದ್ದಾರೆ.

ನಗರದ ಹೊವರ್ತುಲ ರಸ್ತೆಯ ಸುಮ್ಮನಹಳ್ಳಿಯ ಮೇಲ್ಸೇತುವೆ ಮೇಲ್ಭಾಗದಲ್ಲಿ ದೊಡ್ಡ ಗುಂಡಿ ಸೃಷ್ಟಿಯಾಗಿದ್ದ ಹಿನ್ನೆಲೆಯಲ್ಲಿ ಕಳೆದ 15 ದಿನಗಳಿಂದ ಗುಂಡಿ ಬಿದ್ದಿರುವ ನಾಗರಬಾವಿಯಿಂದ ಗೊರಗುಂಟೆ ಪಾಳ್ಯಮಾರ್ಗದಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಸಿವಿಎಲ್‌-ಎಡ್‌ ಟೆಕ್ನೋಕ್ಲಿನಿಕ್‌ ಸಂಸ್ಥೆಯ ತಜ್ಞರ ತಂಡ ಪರಿಶೀಲನೆ ಮಾಡಿ ನೀಡಿದ ಮಧ್ಯಂತರ ವರದಿ ಅನುಗುಣವಾಗಿ ಕಳೆದ ಮಂಗಳವಾರ ರಾತ್ರಿ ವಿದೇಶದ ವಿಶೇಷ ಸಿಮೆಂಟ್‌ನಿಂದ ಗುಂಡಿ ಭರ್ತಿ ಕಾಮಗಾರಿ ಪೂರ್ಣಗೊಳಿಸಲಾಗಿದೆ ಎಂದು ರಾಜರಾಜೇಶ್ವರಿ ವಲಯದ ಮುಖ್ಯ ಎಂಜಿನಿಯರ್‌ ವಿಜಯ್‌ ಕುಮಾರ್‌ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಇಡೀ ಮಾರ್ಗ ಡಾಂಬರಿಕರಣ:

ಸೇತುವೆ ಬಗ್ಗೆ ಆತಂಕ ಪಡಬೇಕಾದ ಅವಶ್ಯಕತೆ ಇಲ್ಲ ಎಂದು ತಜ್ಞರು ಭರವಸೆ ನೀಡಿದ್ದಾರೆ. ಶನಿವಾರ ಮತ್ತು ಭಾನುವಾರ ಗುಂಡಿ ಬಿದ್ದಿರುವ ನಾಗರಬಾವಿಯಿಂದ ಗೊರಗುಂಟೆ ಪಾಳ್ಯ ಮಾರ್ಗದ ಸೇತುವೆಯ ಒಂದು ಪಥವನ್ನು ಮರು ಡಾಂಬರಿಕರಣ ಮಾಡಲಾಗುತ್ತಿದೆ. ಡಾಂಬರಿಕರಣ ಮುಗಿದ ಬಳಿಕ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.

ಭಾರೀ ವಾಹನ ಸಂಚಾರದ ಬಗ್ಗೆ ಚರ್ಚೆ:

ಸೇತುವೆ ದುರಸ್ತಿ ಕಾರ್ಯ ಮುಗಿದಿದೆ. ಆದರೆ, ದುರಸ್ತಿಗೊಂಡ ಸೇತುವೆ ಮೇಲೆ ಭಾರೀ ವಾಹನ ಸಂಚಾರಕ್ಕೆ ಅವಕಾಶ ನೀಡಬೇಕೋ ಬೇಡವೋ ಎಂಬುದರ ಬಗ್ಗೆ ತಜ್ಞರೊಂದಿಗೆ ಇನ್ನೊಂದು ಬಾರಿ ಪರಾಮರ್ಶೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ವಿಜಯ್‌ಕುಮಾರ್‌ ತಿಳಿಸಿದರು.

 ಮುಂದುವರೆದ ಪರಿಶೀಲನೆ

ನಾಗರಬಾವಿಯಿಂದ ಗೊರಗುಂಟೆ ಪಾಳ್ಯ ಮಾರ್ಗದ ಸೇತುವೆಯ ಒಂದು ಪಥದಲ್ಲಿ ಗುಂಡಿ ಸೃಷ್ಟಿಯಾಗಿ ಇಡೀ ಸೇತುವೆಯ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಇಡೀ ಸೇತುವೆಯ ಸ್ಟ್ರಕ್ಚರಲ್‌ ಅಡಿಟ್‌ ನಡೆಸುವುದಕ್ಕೆ ಸಿವಿಲ್‌ -ಎಡ್‌ ಸಂಸ್ಥೆಗೆ ಬಿಬಿಎಂಪಿ ಸೂಚನೆ ನೀಡಲಾಗಿತ್ತು. ಸಂಸ್ಥೆಯ ತಜ್ಞರು ಪರಿಶೀಲನಾ ಕಾರ್ಯವನ್ನು ಮುಂದುವರೆಸಿದ್ದಾರೆ.