ರೇಷ್ಮೆ ಅಭಿವೃದ್ಧಿಗೆ ಬಸವರಾಜು ವರದಿ ಅನುಷ್ಠಾನಗೊಳಿಸಿ: ಸಚಿವ ಕೆ.ವೆಂಕಟೇಶ್
ರೇಷ್ಮೆ ಬೆಳೆಗಾರರು ಸಂಕಷ್ಟದಲ್ಲಿದ್ದು, ಬಸವರಾಜು ಸಮಿತಿ ವರದಿಯನ್ನು ಅನುಷ್ಠಾನಗೊಳಿಸಬೇಕು. ಹೊಸ ಮಾರುಕಟ್ಟೆ ಬದಲಿಗೆ, ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಮಾರುಕಟ್ಟೆಗೆ ಮೂಲ ಸೌಕರ್‍ಯ ಕಲ್ಪಿಸಿ ಅಭಿವೃದ್ಧಿಪಡಿಸಬೇಕು.
ರಾಮನಗರ (ಸೆ.11): ರೇಷ್ಮೆ ಬೆಳೆಗಾರರು ಸಂಕಷ್ಟದಲ್ಲಿದ್ದು, ಬಸವರಾಜು ಸಮಿತಿ ವರದಿಯನ್ನು ಅನುಷ್ಠಾನಗೊಳಿಸಬೇಕು. ಹೊಸ ಮಾರುಕಟ್ಟೆ ಬದಲಿಗೆ, ಪ್ರಸ್ತುತ ಕಾರ್ಯ ನಿರ್ವಹಿಸುತ್ತಿರುವ ಮಾರುಕಟ್ಟೆಗೆ ಮೂಲ ಸೌಕರ್‍ಯ ಕಲ್ಪಿಸಿ ಅಭಿವೃದ್ಧಿಪಡಿಸಬೇಕು. ಹಿಪ್ಪು ನೇರಳೆ ಗಿಡಕ್ಕೆ ತಗಲಿರುವ ರೋಗ ಸಮಸ್ಯೆ ನಿವಾರಿಸಬೇಕು. ಜಿಲ್ಲೆಯಲ್ಲಿ ನಿಷ್ಕ್ರಿಯಗೊಂಡಿರುವ ರೇಷ್ಮೆ ಇಲಾಖೆ ಕೆಎಸ್‌ಎಂಬಿ ಸಂಸ್ಥೆಯನ್ನು ಪುನಃಶ್ಚೇತನಗೊಳಿಸಬೇಕು. ಇಲಾಖೆಯಲ್ಲಿನ ಸಿಬ್ಬಂದಿ ಕೊರತೆ ನೀಗಿಸಬೇಕು ಎಂದು ರೇಷ್ಮೆ ಬೆಳಗಾರರು ಆಗ್ರಹಿಸಿದರು.
ನಗರದ ಜಿಲ್ಲಾ ಪಂಚಾಯಿತಿ ಕಚೇರಿ ಆವರಣದಲ್ಲಿ ರೇಷ್ಮೆ ಹಾಗೂ ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಜಿಲ್ಲೆಯ ರೇಷ್ಮೆ ಬೆಳೆ ಕುರಿತು ಶಾಸಕರು, ಅಧಿಕಾರಿಗಳು ರೈತರು ಮತ್ತು ರೀಲರ್ಸ್‌ಗಳ ಸಂವಾದ ಕಾರ್ಯಕ್ರಮದಲ್ಲಿ ರೇಷ್ಮೆ ಬೆಳೆಗಾರರು ತಮ್ಮನ್ನು ಕಾಡುತ್ತಿರುವ ಸಮಸ್ಯೆಗಳ ಕುರಿತು ಸಚಿವರ ಗಮನ ಸೆಳೆಯುವ ಪ್ರಯತ್ನ ಮಾಡಿದರು. ವಿಧಾನ ಪರಿಷತ್ ಸದಸ್ಯ ರವಿ ಮಾತನಾಡಿ, ಜಿಲ್ಲೆಯಲ್ಲಿ ಅತೀ ಹೆಚ್ಚು ರೇಷ್ಮೆ ಗೂಡು ಉತ್ಪಾದನೆ ಹಾಗೂ ವಹಿವಾಟು ನಡೆಯುತ್ತಿದೆ. ಆದರೆ ಕಳೆದ ಹಲವು ವರ್ಷಗಳಿಂದ ರೇಷ್ಮೆ ಬೆಳೆಗೆ ಕೀಟಬಾಧೆ ಕಾಡುತ್ತಿದ್ದು, ರೈತರು ಕಂಗಲಾಗಿದ್ದಾರೆ. ಈ ಸಮಸ್ಯೆಗೆ ವಿಜ್ಞಾನಿಗಳು ಹಾಗೂ ಅಧಿಕಾರಿಗಳು ಶಾಶ್ವತ ಪರಿಹಾರ ದೊರಕಿಸಬೇಕು ಎಂದು ಆಗ್ರಹಿಸಿದರು.
ಕೋಲಾರ ಭಾಗಕ್ಕೆ ಸಿಎಂ ಸ್ಥಾನ ನೀಡಲಿ: ಶಾಸಕ ಕೊತ್ತೂರು ಮಂಜುನಾಥ್
ಜಿಲ್ಲೆಯ ಬಹುತೇಕ ರೈತರು ಸಣ್ಣ ಪ್ರಮಾಣದಲ್ಲಿಯೇ ಹಿಪ್ಪು ನೇರಳೆ ಬೆಳೆಯುತ್ತಿದ್ದು, ಜೀವನೋಪಾಯಕ್ಕೆ ಇದನ್ನೇ ಅವಲಂಬಿಸಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಹಿಪ್ಪು ನೇರಳೆಗೆ ರೋಗಬಾಧೆ ಕಾಣಿಸಿಕೊಳ್ಳುತ್ತಿದೆ. ರೋಗ ಕಾಣಿಸಿಕೊಂಡ ತೋಟಕ್ಕೆ ಔಷಧಿ ಸಿಂಪಡಿಸಿದರೆ, ಅಕ್ಕಪಕ್ಕದ ತೋಟದಲ್ಲಿ ಹಿಪ್ಪು ನೇರಳೆ ಹಾಕಿರುವ ರೈತರಿಗೆ ತೊಂದರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಮ ಮಟ್ಟ ಹಾಗೂ ಹೋಬಳಿ ಮಟ್ಟದಲ್ಲಿ ಮಾದರಿಯನ್ನಾಗಿ ತೆಗೆದುಕೊಂಡು ಒಂದೇ ಬಾರಿಗೆ ಇಡೀ ತೋಟಕ್ಕೆ ಔಷಧ ಸಿಂಪಿಡಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರೀಲರ್ಸ್‌ಗಳು ಹಾಗೂ ರೇಷ್ಮೆ ಬೆಳೆಗಾರರು ಗಾಡಿಯ ಎರಡು ಚಕ್ರಗಳಿದ್ದಂತೆ, ರೀಲರ್ಸ್‌ಗಳ ಸಮಸ್ಯೆಗಳನ್ನೂ ಆಲಿಸಬೇಕು. ಫೀಲೇಚರ್‌ಗಳಲ್ಲಿ ದುಡಿಯುವ ಕಾರ್ಮಿಕರಿಗೆ ಚರ್ಮ ಹಾಗೂ ಅಸ್ತಮಾ ಕಾಯಿಲೆ ಸಾಮಾನ್ಯ ಎನ್ನಿಸಿದೆ. ನೂಲು ತೆಗೆದ ಬಳಿಕ ಉಳಿಯುವ ತ್ಯಾಜ್ಯವೂ ದುರ್ವಾಸನೆಯಿಂದ ಕೂಡಿದ್ದು ಅದನ್ನು ವೈಜ್ಞಾನಿಕವಾಗಿ ನಾಶ ಮಾಡುವುದನ್ನು ಕಂಡುಕೊಳ್ಳಬೇಕು ಎಂದು ಆಗ್ರಹಿಸಿದರು. ನೂತನ ರೇಷ್ಮೆ ಮಾರುಕಟ್ಟೆಗೆ ವಿರೋಧ: ಚನ್ನಪಟ್ಟಣದಲ್ಲಿ ರೇಷ್ಮೆ ಮಾರುಕಟ್ಟೆ ನಿರ್ಮಿಸುವ ಬದಲು, ರಾಮನಗರ ರೇಷ್ಮೆ ಮಾರುಕಟ್ಟೆಯನ್ನೇ ಅಭಿವೃದ್ಧಿ ಪಡಿಸಬೇಕು. ಇತ್ತೀಚೆಗೆ ಕೆಎಸ್‌ಎಂಬಿ ಸಂಸ್ಥೆ ತನ್ನ ಕೆಲಸ ಸಕ್ರಮವಾಗಿ ಮಾಡುತ್ತಿಲ್ಲ. ಇದನ್ನು ಪುನಃಶ್ಚೇತನಗೊಳಿಸಬೇಕು. ಮಧ್ಯವರ್ತಿಗಳ ಹಾವಳಿ ತಡೆಗಟ್ಟಬೇಕು ಎಂದು ರೀಲರ್ಸ್‌ಗಳು ಆಗ್ರಹಿಸಿದರು.
ಇದಕ್ಕೆ ಧ್ವನಿಗೂಡಿಸಿದ ಶಾಸಕ ಇಕ್ಬಾಲ್ ಹುಸೇನ್, ಹೊಸಮಾರುಕಟ್ಟೆ ೯ ಕಿ.ಮಿ. ದೂರವಿದ್ದು ವಹಿವಾಟು ನಡೆಸಲು ಕಷ್ಟವಾಗುತ್ತದೆ. ಇದರಿಂದ ಸಾಕಷ್ಟು ತೊಂದರೆಯಾಗುತ್ತದೆ. ಅದರ ಬದಲಿಗೆ ರಾಮನಗರ ರೇಷ್ಮೆ ಮಾರುಕಟ್ಟೆಯನ್ನೇ ಅಭಿವೃದ್ಧಿಪಡಿಸಬೇಕು. ನಗರದಲ್ಲಿರುವ ಮಾರುಕಟ್ಟೆಯಲ್ಲಿ ಪ್ರತೀ ದಿನ ೨.೫ ರಿಂದ ೩ ಕೋಟಿ ರು.ಗಳ ವಹಿವಾಟು ನಡೆಯುತ್ತಿದ್ದು, ೬ ಲಕ್ಷಕ್ಕೂ ಹೆಚ್ಚು ಮೊತ್ತದ ತೆರಿಗೆ ಪಾವತಿಲಾಗುತ್ತಿದೆ. ಆದ ಕಾರಣ ಹಳೆಯ ಮಾರುಕಟ್ಟೆಯಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.
ರೀಲರ್ಸ್ ಪಾರ್ಕ್ ನಿರ್ಮಿಸಿ: ರಾಮನಗರ ತಾಲೂಕಿನ ಕೆಪಿದೊಡ್ಡಿಯಲ್ಲಿ ರೀಲರ್ಸ್ ಪಾರ್ಕ್ ನಿರ್ಮಾಣ ಮಾಡಬೇಕು. ಈಗಾಗಲೇ ೩೭ ಎಕರೆ ಸ್ಥಳ ಗುರುತಿಸಿದ್ದು, ಅದಕ್ಕೆ ಹೆಚ್ಚುವರಿ ಸ್ಥಳ ಗುರುತಿಸಿ ೧೦೦ ಎಕರೆ ಪ್ರದೇಶದಲ್ಲಿ ಪಾರ್ಕ್ ನಿರ್ಮಿಸಬೇಕು. ಕೆಎಸ್‌ಎಂಬಿಯ ಅಧಿಕಾರಿಗಳು ರೀಲರ್ಸ್‌ಗಳು ಹಾಗೂ ಅಧಿಕಾರಿಗಳ ಸಮಿತಿ ರಚಿಸಿ ಪ್ರತಿ ಮೂರು ತಿಂಗಳಿಗೊಮ್ಮೆ ಸಭೆ ಆಯೋಜಿಸಬೇಕು ಎಂದು ಇಕ್ಬಾಲ್ ಹುಸೇನ್ ಆಗ್ರಹಿಸಿದರು. ರೇಷ್ಮೆ ಇಲಾಖೆ ಆಯುಕ್ತ ರಾಜೇಶ್ ಗೌಡ ಮಾತನಾಡಿ, ಕೀಟ ಹಾಗೂ ರೋಗಬಾಧೆ ಇರುವ ತೋಟದಲ್ಲಿ ಪರೀಕ್ಷೆ ಮಾಡಿಸಿದ್ದೇವೆ. ಇದರಲ್ಲಿ ಕೇವಲ ೩ ಕಡೆ ಮಾತ್ರ ರೋಗ ಕಾಣಿಸಿಕೊಂಡಿದೆ.
ಎತ್ತಿನಹೊಳೆ ಯೋಜನೆಗೆ ಬಿಜೆಪಿ ಸರ್ಕಾರ ತಾರತಮ್ಯ: ಗೃಹ ಸಚಿವ ಪರಮೇಶ್ವರ್
ಬಸವರಾಜುಸಮಿತಿ ಅನುಷ್ಠಾನದ ಜತೆಗೆ, ಬೆಂಬಲ ಬೆಲೆ ನೀಡುವ ಸಲುವಾಗಿ ಹೊಸ ಸಮಿತಿ ರಚನೆ ಮಾಡಲಾಗಿದ್ದು, ಶೀಘ್ರವೇ ಇದನ್ನು ಜಾರಿಗೆ ತರಲಾಗುತ್ತದೆ. ಜತೆಗೆ, ಸರಕಾರದ ಹಾಗೂ ಇಲಾಖಾ ಸೌಲಭ್ಯವನ್ನು ಫಲಾನುಭವಿಗಳಿಗೆ ತಲುಪಿಸುವ ಸಲುವಾಗಿ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಸಲ್ಲಿಸಿದ್ದೇವೆ ಎಂದರು. ಕೆಪಿಎಸ್‌ಇಯಿಂದ ೭೦ ಹುದ್ದೆಗಳನ್ನು ಭರ್ತಿ ಮಾಡಲಾಗಿದ್ದು, ಅದರಲ್ಲಿ ಗರಿಷ್ಟ ರಾಮನಗರ ಮತ್ತು ಶಿಡ್ಲಘಟ್ಟ ಮಾರುಕಟ್ಟೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಇನ್ನು ರೀಲರ್ಸ್‌ಗಳ ಸಮಸ್ಯೆಗೆ ಪರಿಹಾರ ಒದಗಿಸುವ ಸಲುವಾಗಿ ಸಚಿವರು ಬಗ್ಗೆ ಚರ್ಚಿಸಲಾಗುವುದು. ಇಲಾಖೆ ಅನುದಾನದ ವೇಳೆ ಜಿಎಸ್‌ಟಿ ತೆರಿಗೆ ಪಾವತಿ ಮಾಡುವ ಸಂಬಂಧ ಜಿಎಸ್‌ಟಿ ಕೌನ್ಸಿಲ್‌ನೊಂದಿಗೆ ಮಾತನಾಡುತ್ತೇವೆ ಎಂದರು.