ಶಿರಾ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಜಯಚಂದ್ರ ಗೆಲುವಿನ ಹಿಂದೆ ನಾನೇ ಇದ್ದೆ ಎಂದು ಬಿಜೆಪಿ ಮುಖಂಡರೋರ್ವರು ಹೇಳಿದ್ದಾರೆ
ತುಮಕೂರು (ಅ.27): ಜಯಚಂದ್ರ ಅವರು 6 ಸಲ ಚುನಾವಣೆಯಲ್ಲಿ ಗೆದ್ದಿದ್ದೇನೆ ಎಂದು ಬೀಗುತ್ತಿದ್ದಾರೆ. ಆದರೆ 3 ಬಾರಿ ನನ್ನ ಕೊಡುಗೆಯಿಂದಲೇ ಗೆದ್ದಿರುವಂಹದ್ದು ಎಂದು ತುಮಕೂರು ಬಿಜೆಪಿ ಸಂಸದ ಜಿ.ಎಸ್. ಬಸವರಾಜ್ ಹೇಳಿದರು.
ಅವರು ಶಿರಾ ವಿಧಾನಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಶಿರಾ ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್‌ಗೌಡ ಅವರ ಪರವಾಗಿ ಕಳ್ಳಂಬೆಳ್ಳ ಹೋಬಳಿಯ ವಿವಿಧ ಗ್ರಾಮಗಳಿಗೆ ತೆರಳಿ ಪ್ರಚಾರ ನಡೆಸಿದರು.
ತರೂರು ಗ್ರಾಮದಲ್ಲಿ ಮಾತನಾಡಿದ ಜಿಎಸ್‌ಬಿ, ಜಯಚಂದ್ರ ಜಿಲ್ಲಾ ಮಂತ್ರಿಯಾಗಿ ಯಾವುದೇ ಅಭಿವೃದ್ಧಿ ಕೆಲಸಗಳನ್ನೂ ಮಾಡಿಲ್ಲ, ಶಿರಾ ಕ್ಷೇತ್ರ ಇಂದಿಗೂ ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿದೆ. ಗೊಲ್ಲರಹಟ್ಟಿಗಳಲ್ಲಿ ಇಂದಿಗೂ ಗುಡಿಸಲಲ್ಲೇ ವಾಸಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡು ದೇವೇಗೌಡರನ್ನು ತುಮಕೂರಿನಲ್ಲಿ ನಿಲ್ಲಿಸಿ, ಅವರ ಸೋಲಿಗೆ ಜಯಚಂದ್ರ ಅವರೂ ಕಾರಣರಾಗಿದ್ದಾರೆ ಎಂದು ಬಸವರಾಜ್ ಆರೋಪಿಸಿದರು.
ಚುನಾವಣೆ ವೇಳೆ ಜಾತಿ ಡಿಕೆಶಿಯಿಂದ ಜಾತಿ ರಾಜಕಾರಣ: ಸದಾನಂದಗೌಡ
ದೇವೇಗೌಡರಿಂದ ಜಿಲ್ಲೆಗೆ ಅನ್ಯಾಯ: ತುಮಕೂರು ಜಿಲ್ಲೆಗೆ ನಿಗಧಿಯಾದ 24 ಟಿಎಂಸಿ ಹೇಮಾವತಿ ನೀರು ಹರಿಯಲು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಮತ್ತು ಅವರ ಕುಟುಂಬದವರು ನಾಲೆಗೆ ಮರಳು ಸುರಿದು ಅಡ್ಡಹಾಕಿ ತುಮಕೂರು ಜಿಲ್ಲೆಗೆ ನೀರು ಹರಿಯದಂತೆ ಮಾಡುತ್ತಾರೆ. ಶಿರಾ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಮತ ಕೇಳಲು ದೇವೇಗೌಡರ ಇಡೀ ಕುಟುಂಬವೇ ಶಿರಾದಲ್ಲಿ ಮೊಕ್ಕಾಂ ಹೂಡಿದೆ. ಮತದಾರರು ಈ ಉಪಚುನಾವಣೆಯಲ್ಲಿ ತಕ್ಕ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.
ಈ ಹಿಂದೆ ರಕ್ತ ಬೇಕಾದರೂ ಕೊಡುತ್ತೇವೆ ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಬಿಡುವುದಿಲ್ಲ ಎಂಬ ಹೇಳಿಕೆಗಳನ್ನು ನೀಡಿದ್ದರು. ಆದರೆ ಇಂದು ಶಿರಾದಲ್ಲಿ ಕುಳಿತು ಜೆಡಿಎಸ್ ಅಭ್ಯರ್ಥಿ ಪರ ಮತ ಕೇಳುತ್ತಿದ್ದಾರೆ. ಒಂದು ರೀತಿ ದೇವೇಗೌಡರು ಚಂಡಿ ಆಟ ಆಡುತ್ತಿದ್ದಾರೆ ಎಂದರು.
