ನನಗೆ ಸ್ವಂತ ಮನೆ ಇದೆ : ಸಿದ್ದರಾಮಯ್ಯಗೆ ಡಿ.ಕೆ.ಶಿವಕುಮಾರ್ ಟಾಂಗ್

ನಾನು ಯಾವುದೇ ಹುದ್ದೆಯ ಆಕಾಂಕ್ಷಿ ಅಲ್ಲ. ನಂಗೆ ಸ್ವಂತ ಮನೆ ಇದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಡಿ.ಕೆ. ಶಿವಕುಮಾರ್ ಗರಂ ಆಗಿದ್ದಾರೆ. 

Im Not The Aspirant Of Opposition Leader Post DK Shivakumar Unhappy Over Siddaramaiah

ರಾಮನಗರ [ಆ.26]: ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಥವಾ ವಿರೋಧ ಪಕ್ಷದ ನಾಯಕ ಸ್ಥಾನಕ್ಕೆ ನಾನು ಯಾವುದೇ ಲಾಬಿ ನಡೆಸಿಲ್ಲ. ಯಾರಿಗೆ ಆತುರ ಇದೆಯೋ, ಯಾರಿಗೆ ಕಾರು ಹಾಗೂ ಮನೆ ಬೇಕಿದೆಯೋ ಅವರು ಆಗಲಿ. ನನಗೆ ಸ್ವಂತ ಮನೆ ಇದೆ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ. ಈ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಟಾಂಗ್ ನೀಡಿದ್ದಾರೆ. 

ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ನನಗೆ ಯಾವ ಸ್ಥಾನಮಾನವೂ ಬೇಡ. ನನ್ನನ್ನು ನನ್ನ ಪಾಡಿಗೆ ಬಿಟ್ಟರೆ ಸಾಕಾಗಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ, ವಿರೋಧಪಕ್ಷದ ನಾಯಕ ಸ್ಥಾನಕ್ಕೆ ಲಾಬಿ ನಡೆಸುತ್ತಿದ್ದೇನೆ ಎಂಬುದು ಸುಳ್ಳು. ದೆಹಲಿ ಕಾಂಗ್ರೆಸ್ ನಾಯಕರು ಸೋಮವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ. ಈ ಬಗ್ಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ನನಗೆ ಮಾಹಿತಿ ನೀಡಿದ್ದಾರೆ. 

ನಾನು ಯಾವುದಕ್ಕೂ ಲಾಬಿ ಮಾಡಿಲ್ಲ. ಯಾರಿಗೆ ಆತುರ ಇದೆಯೋ ಅವರು ಮಾಡಿಕೊಳ್ಳಲಿ. ಈ ಬಗ್ಗೆ ಹೈಕಮಾಂಡ್‌ನವರೇ ಪಕ್ಷಕ್ಕೆ ಯಾವುದು ಒಳ್ಳೆಯದೋ ಆ ತೀರ್ಮಾನ ಮಾಡುತ್ತಾರೆ ಎಂದಷ್ಟೇ ಹೇಳಿದರು. ಫೋನ್ ಕದ್ದಾಲಿಕೆ ಯಂತ್ರ ತನಿಖೆ ನಡೆಸಿ: ಕೋಟ್ಯಂತರ ರು. ವೆಚ್ಚದ ದೂರವಾಣಿ ಕದ್ದಾಲಿಕೆ ಯಂತ್ರವನ್ನು ಡಿಕೆಶಿ ಖರೀದಿ ಮಾಡಿದ್ದಾರೆ ಎಂಬ ಮಾಜಿ ಸಚಿವ ಸಿ.ಪಿ. ಯೋಗೀಶ್ವರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಯೋಗೀಶ್ವರ್ ಅವರು ಈ ವಿಚಾರ ಹೇಳಿ ಒಳ್ಳೆಯ ಕೆಲಸ ಮಾಡಿದ್ದಾರೆ. ಈಗ ಸಿಬಿಐ ಅವರ ಕೈಯಲ್ಲಿದೆ. ಹಾಗಾಗಿ ಅವರದ್ದು ಹಾಗೂ ನಮ್ಮದು ಎಲ್ಲವನ್ನೂ ಸಿಬಿಐ ತನಿಖೆಗೆ ಕೊಡಲಿ ಎಂದು ತಿರುಗೇಟು ನೀಡಿದರು.

ಇದೇ ವೇಳೆ ಕನಕಪುರ ತಾಲೂಕಿಗೆ ಮಂಜೂರಾಗಿರುವ ವೈದ್ಯಕೀಯ ಕಾಲೇಜು ಚಿಕ್ಕಬಳ್ಳಾಪುರ ಜಿಲ್ಲೆಗೆ ಸ್ಥಳಾಂತರ ಆಗಿರುವ ವಿಚಾರ ನನಗೆ ಸರಿಯಾಗಿ ಗೊತ್ತಿಲ್ಲ. ಸರ್ಕಾರದ ಆದೇಶ ಪ್ರತಿ ನನ್ನ ಕೈಗೆ ಇನ್ನೂ ಸಿಕ್ಕಿಲ್ಲ. ವಿಚಾರ ತಿಳಿದುಕೊಂಡು ಮಾತನಾಡುತ್ತೇನೆ ಎಂದರು. ಸಿದ್ದು-ಗೌಡ ಟೀಕೆ ಬಗ್ಗೆ ಮಾಹಿತಿ ಇಲ್ಲ ಸಿದ್ದರಾಮಯ್ಯ ಹಾಗೂ ದೇವೇಗೌಡರ ನಡುವಿನ ಟೀಕೆಗಳ ಕುರಿತು ನನಗೆ ಮಾಹಿತಿಯೇ ಇಲ್ಲ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಹೇಳಿದರು. 

ಇತ್ತೀಚೆಗೆ ನಾನು ಪತ್ರಿಕೆಗಳನ್ನು ಓದುತ್ತಿಲ್ಲ. ದೇವೇಗೌಡ, ಸಿದ್ದರಾಮಯ್ಯ, ಎಚ್.ಡಿ. ಕುಮಾರ ಸ್ವಾಮಿ ಯಾರು ಏನು ಮಾತನಾಡಿದ್ದಾರೋ ಗೊತ್ತಿಲ್ಲ. ಹೀಗಾಗಿ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಇನ್ನು ಮುಖ್ಯಮಂತ್ರಿಗಳ ಕೆಳಗೆ 14 ತಿಂಗಳು ಸಚಿವನಾಗಿ ಮಾಡಿದ್ದ ಕೆಲಸಕ್ಕೆ ನಾನು ಬದ್ಧನಾಗಿದ್ದೇನೆ ಎಂದಷ್ಟೇ ಹೇಳಿದರು.

Latest Videos
Follow Us:
Download App:
  • android
  • ios