Asianet Suvarna News Asianet Suvarna News

ದಿಢೀರನೇ ತಲೆಎತ್ತಿದ ಗುಡಿಸಲುಗಳು: ಮಕ್ಕಳ ಉದ್ಯಾನ ಕಬಳಿಸಲು ಭೂಗಳ್ಳರ ಹುನ್ನಾರ

ಮಕ್ಕಳ ಉದ್ಯಾನವನದ ಮೇಲೆ ಈಗ ಭೂಗಳ್ಳರ ದೃಷ್ಟಿಬಿದ್ದಿದೆ. ನಗರಸಭೆಗೆ ಸೇರಿರುವ ಉದ್ಯಾನವನದ ಜಾಗದಲ್ಲಿ ದಿಢೀರನೇ ಗುಡಿಸಲುಗಳು ಮತ್ತು ಪೆಟ್ಟಿಗೆ ಅಂಗಡಿ ತಲೆ ಎತ್ತಿವೆ. ರಾತ್ರೋ ಆತ್ರಿ ತಲೆ ಎತ್ತಿರುವ ಗುಡಿಸಲುಗಳ ಮಾಲೀಕರು ಯಾರು ಎಂಬುದು ಇನ್ನೂ ತಿಳಿದಿಲ್ಲ. ಮಕ್ಕಳ ಉದ್ಯಾನದ ಭೂಮಿ ಭೂಗಳ್ಳರ ಪಾಲಾಗಿರುವುದು ವಿಪರ್ಯಾಸ.

Illegal acquisition of land in  kolara
Author
Bangalore, First Published Sep 27, 2019, 12:42 PM IST

ಕೋಲಾರ(ಸೆ.27): ನಗರದ ಟೇಕಲ್‌ ರಸ್ತೆಯಲ್ಲಿರುವ ಮಕ್ಕಳ ಉದ್ಯಾನವನದ ಮೇಲೆ ಈಗ ಭೂಗಳ್ಳರ ದೃಷ್ಟಿಬಿದ್ದಿದೆ. ನಗರಸಭೆಗೆ ಸೇರಿರುವ ಉದ್ಯಾನವನದ ಜಾಗದಲ್ಲಿ ದಿಢೀರನೇ ಗುಡಿಸಲುಗಳು ಮತ್ತು ಪೆಟ್ಟಿಗೆ ಅಂಗಡಿ ತಲೆ ಎತ್ತಿವೆ. ಉದ್ಯಾನವನದ ಜಾಗವನ್ನು ಉಳಿಸಿಕೊಳ್ಳಲು ಹಿರಿಯಾ ಅಧಿಕಾರಿಗಳು ನಡೆಸಿರುವ ಪ್ರಯತ್ನವು ನಿರೀಕ್ಷಿತ ಫಲವನ್ನು ಕೊಟ್ಟಿಲ್ಲ.

ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಅಭಿವೃದ್ಧಿ ನಡೆಸಲು ಕಾಮಗಾರಿಯು ಶುರುವಾಗಿದೆ. ಈ ಸಮಯದಲ್ಲಿಯೇ ರಾತ್ರೋರಾತ್ರಿ ಇದೇ ಜಾಗದಲ್ಲಿ ಗುಡಿಸಲುಗಳನ್ನು ಹಾಕಲಾಗಿದೆ. ಉದ್ಯಾನವನದ ಜಾಗದಲ್ಲಿನ ಗುಡಿಸಲು ಮತ್ತು ಪೆಟ್ಟಿಗೆ ಅಂಗಡಿಗಳು ಉದ್ಬವವಾಗಿದ್ದರೂ ಅವುಗಳ ವಾರಸುದಾರರು ಮಾತ್ರ ಒಬ್ಬರೂ ಸ್ಥಳದಲ್ಲಿಲ್ಲ.

ನಗರಸಭೆ ಆಸ್ತಿ:

ಕೋಲಾರದ 14 ವಾರ್ಡ್‌ನ ವ್ಯಾಪ್ತಿಯಲ್ಲಿನ ಟೇಕಲ್‌ ರಸ್ತೆಯಲ್ಲಿರುವ ವಿಶಾಲವಾದ ಸರ್ಕಾರಿ ಜಾಗದಲ್ಲಿ ರಾಜ್ಯ ಆಗ್ರೋ ಇಂಡಸ್ಟ್ರೀಸ್‌ ಕಾಪೊರ್‍ರೇಷನ್‌ ಸಂಸ್ಥೆಯಿತ್ತು. ಹಲವಾರು ವರ್ಷಗಳ ಹಿಂದೆಯೇ ಈ ಸಂಸ್ಥೆಯು ನಷ್ಟದ ಕಾರಣದಿಂದ ಬೀಗ ಹಾಕಿತ್ತು. ಚಟುವಟಿಕೆಯಿಲ್ಲದೆ ವ್ಯರ್ಥವಾಗಿರುವ ಸದರಿ ಜಮೀನನ್ನು ತಮಗೆ ಕೊಡುವಂತೆ ವಿವಿಧ ಇಲಾಖೆಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದವು. ಈ ಮಧ್ಯೆ ಈ ಜಾಗದಲ್ಲಿ ಮಕ್ಕಳ ಆಟದ ಮೈದಾನ, ಮತ್ಸಾಲಯ ಹಾಗೂ ಗ್ರಂಥಾಲಯವನ್ನು ಅಭಿವೃದ್ಧಿಪಡಿಸಲು ಸ್ಥಳೀಯರು ಮನವಿ ಮಾಡಿದ್ದರು. ಹಲವಾರು ಹಂತದ ಪರಿಶೀಲನೆಗಳ ನಂತರ ರಾಜ್ಯ ಸರ್ಕಾರದ ಆದೇಶದ ಮೇರೆಗೆ 2017 ರಲ್ಲಿ ಅಂದಿನ ಜಿಲ್ಲಾಧಿಕಾರಿ ಸದರಿ ಜಮೀನನ್ನು ನಗರಸಭೆಗೆ ಹಸ್ತಾಂತರ ಮಾಡುವಂತೆ ತಹಸೀಲ್ದಾರ್‌ಗೆ ಆದೇಶಿಸಿದ್ದರು. ಜಿಲ್ಲಾಧಿಕಾರಿಗಳ ಆದೇಶದಂತೆ ಈ ಜಮೀನಿನ ದಾಖಲೆಗಳು ನಗರಸಭೆಯ ಹೆಸರಿಗೆ ಅಧಿಕೃತವಾಗಿ ನೋಂದಣಿಯಾಗಿದೆ.

ಉದ್ಯಾನ ಅಭಿವೃದ್ಧಿಗೆ 1.75 ಕೋಟಿ

ಈ ಮಕ್ಕಳ ಉದ್ಯಾನವನ್ನು ಅಭಿವೃದ್ಧಿ ಮಾಡುವುದಕ್ಕಾಗಿ ಇಲ್ಲಿನ ನಗರಸಭೆಯಿಂದ ಅಮೃತ್‌ ಯೋಜನೆಯ ಅಡಿಯಲ್ಲಿ 1.75 ಕೋಟಿ ಕೋಟಿ ರುಪಾಯಿಗಳನ್ನು ಮೀಸಲಿರಿಸಲಾಗಿದೆ. ಈಗಾಗಲೇ ಆವರಣದಲ್ಲಿನ ಹಳೆಯ ಕಟ್ಟಡವನ್ನು ತೆರವುಗೊಳಿಸಿ ಸುತ್ತಲೂ ಗೋಡೆಯನ್ನು ನಿರ್ಮಿಸಲು ಕಾಮಗಾರಿಯು ಬಹುತೇಕ ಮುಕ್ತಾಯದ ಹಂತಕ್ಕೆ ಬಂದಿದೆ. ಉಳಿದೆಲ್ಲ ಕೆಲಸಗಳು ವೇಗವಾಗಿ ನಡೆಯುವುದಕ್ಕೆ ನಗರಸಭೆಯು ಸಿದ್ದತೆಯನ್ನು ನಡೆಸುತ್ತಿದೆ.

ಮಾಲೀಕರು ಯಾರೆಂಬುದು ಗೊತ್ತಿಲ್ಲ:

ಮಕ್ಕಳ ಆಟದ ಮೈದಾನದ ಅಭಿವೃದ್ದಿಯ ವಿಷಯವಾಗಿ ಇಷ್ಟೆಲ್ಲ ಪ್ರಕ್ರಿಯೆಗಳು ನಡೆಯುತ್ತಿದ್ದಂತೆಯೇ, ಇದೇ ಮೈದಾನದ ಪಶ್ಚಿಮ ಭಾಗದಲ್ಲಿ ದಿಢೀರನೆ ಗುಡಿಸಲು ಮತ್ತು ಪೆಟ್ಟಿಗೆ ಅಂಗಡಿಗಳು ತಲೆ ಎತ್ತಿವೆ. ನಗರಸಭೆಯ ಸುಪರ್ದಿನಲ್ಲಿರುವ ಈ ಜಾಗದಲ್ಲಿ ರಾತ್ರೋ-ರಾತ್ರಿ ಗುಡಿಸಲು ಮತ್ತು ಪೆಟ್ಟಿಗೆ ಅಂಗಡಿಗಳನ್ನು ಇರಿಸಲಾಗಿದೆಯಾದ್ರೂ ಅದರ ಮಾಲಿಕರು ಮಾತ್ರ ಯಾರೂ ಅಂತ ಗೊತ್ತಾಗಿಲ್ಲ.

ದಿಢೀರನೆ ಗುಡಿಸಲುಗಳ ನಿರ್ಮಾಣ

ಒಂದು ವಾರದಿಂದೀಚೆಗೆ ಆಟದ ಮೈದಾನದ ಆವರಣದಲ್ಲಿ ಅಕ್ರಮವಾಗಿ ಗುಡಿಸಲುಗಳು ಹಾಕುತ್ತಿರುವ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಸ್ಥಳೀಯರು ನಗರಸಭೆಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಶಾಸ್ತ್ರಕ್ಕೆಂದು ಸ್ಥಳಕ್ಕೆ ಬಂದಿದ್ದ ನಗರಸಭೆಯ ಅಧಿಕಾರಿಗಳು, ಅಕ್ರಮವಾಗಿ ಇರಿಸಲಾಗಿರುವ ಪೆಟ್ಟಿಗೆ ಅಂಗಡಿ ಮತ್ತು ಗುಡಿಸಲುಗಳನ್ನು ತೆರವು ಮಾಡಲು ಯಾವುದೇ ಕ್ರಮವನ್ನು ಜರುಗಿಸಿಲ್ಲ.

ನಗರಸಭೆಯ ಈ ದಿವ್ಯ ನಿರ್ಲಕ್ಷ್ಯದಿಂದಾಗಿ ಕೋಟ್ಯಂತರ ರುಪಾಯಿ ಮೌಲ್ಯದ ನಗರಸಭೆಯ ಜಮೀನು ಭೂಕಬಳಿಕೆದಾರರ ಪಾಲಾಗುತ್ತ ಎನ್ನುವ ಆತಂಕ ಇದೀಗ ಎದುರಾಗಿದೆ. ಇದರ ಜೊತೆಗೆ ಆಧುನಿಕ ಸೌಕರ್ಯಗಳನ್ನು ಒಳಗೊಂಡಿರುವ ಆಟದ ಮೈದಾನವನ್ನು ಹೊಂದುವ ಅವಕಾಶದಿಂದ ನಾಗರಿಕರು ವಂಚಿತರಾಗಲಿದ್ದಾರೆ. ನಗರಸಭೆ ಎಚ್ಚೆತ್ತುಕೊಂಡು ತನ್ನ ಆಸ್ತಿಯನ್ನು ರಕ್ಷಿಸಿಕೊಳ್ಳಬೇಕಿದೆ.

ಜಿಲ್ಲಾಧಿಕಾರಿಗೆ ದೂರು

ಮಕ್ಕಳ ಆಟದ ಮೈದಾನದ ಜಾಗವನ್ನು ಕಬಳಿಸಲು ಕೆಲವರು ಯತ್ನಿಸುತ್ತಿದ್ದಾರೆ. ಇದೇ ಆವರಣದಲ್ಲಿನ ಜಾಗವನ್ನು ಅಕ್ರಮವಾಗಿ ಪ್ರವೇಶಿಸಲು ಕೆಲವರು ಹಲವಾರು ಸಲ ಪ್ರಯತ್ನಿಸುತ್ತಿದ್ದರು. ಇದೀಗ ಏಳೆಂಟು ಗುಡಿಸಲುಗಳು ಈ ಜಾಗದಲ್ಲಿ ತಲೆ ಎತ್ತಿವೆ. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರನ್ನು ಕೊಡಲಾಗಿದ್ದು, ಕ್ರಮ ಜರುಗಿಸುವ ಭರವಸೆ ನಿಡಿದ್ದಾರೆ ಎಂದು ನಗರಸಭೆ ಮಾಜಿ ಸದಸ್ಯ ಎಸ್‌.ಆರ್‌.ಮುರಳಿಗೌಡ ತಿಳಿಸಿದ್ದಾರೆ.

- ಸತ್ಯರಾಜ್‌ ಜೆ.

Follow Us:
Download App:
  • android
  • ios