* ಕಾಲಿನ ಗಾಯದಲ್ಲಿ 14 ಕಲ್ಲುಗಳಿದ್ದರೂ ಸ್ವಚ್ಛಗೊಳಿಸದೆ ಹೊಲಿಗೆ* ದ.ಕ ಜಿಲ್ಲೆಯ ಕಡಬದ ಸಮುದಾಯ ಆಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯ* ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಬೇಜವಾಬ್ದಾರಿಗೆ ಭಾರೀ ಆಕ್ರೋಶ
ಭರತ್ ರಾಜ್ ಏಷ್ಯಾನೆಟ್ ಸುವರ್ಣ ನ್ಯೂಸ್
ಮಂಗಳೂರು(ಮೇ.06): ಕಾಲಿನ ಗಾಯದಲ್ಲಿ 14 ಕಲ್ಲುಗಳಿದ್ದರೂ ಗಾಯ ಸ್ವಚ್ಛಗೊಳಿಸದೇ ಆಸ್ಪತ್ರೆ ಸಿಬ್ಬಂದಿ ಹೊಲಿಗೆ ಹಾಕಿದ ಘಟನೆ ದ.ಕ ಜಿಲ್ಲೆಯ ಕಡಬದ ಸಮುದಾಯ ಆಸ್ಪತ್ರೆಯಲ್ಲಿ ನಡೆದಿದೆ. ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಬೇಜವಾಬ್ದಾರಿಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯ ಚಿಕಿತ್ಸೆಯಲ್ಲಿ ಗಂಭೀರ ನಿರ್ಲಕ್ಷ್ಯ ವಹಿಸಲಾಗಿದ್ದು, ಗಾಯ ಸ್ವಚ್ಛಗೊಳಿಸದೇ 14 ಕಲ್ಲುಗಳು ಗಾಯದಲ್ಲಿದ್ದರೂ ಹೊಲಿಗೆ ಹಾಕಿದ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ. ಗಾಯ ಉಲ್ಭಣಗೊಂಡ ಬೆನ್ನಲ್ಲೇ ಖಾಸಗಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. ದ.ಕ ಜಿಲ್ಲೆಯ ಕಡಬ ತಾಲೂಕಿನ ಕೋಡಿಂಬಾಳ ಗ್ರಾಮದ ರೈಲ್ವೇ ಉದ್ಯೋಗಿ ಪುರುಷೋತ್ತಮರ ಬೈಕ್ ಸ್ಕಿಡ್ ಆಗಿ ಮೊಣಕಾಲಿಗೆ ಗಂಭೀರ ಗಾಯವಾಗಿತ್ತು. ಹೀಗಾಗಿ ತಕ್ಷಣ ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಈ ವೇಳೆ ಗಾಯ ಪರಿಶೀಲಿಸಿ ಸಿಬ್ಬಂದಿಗೆ ಹೊಲಿಗೆ ಹಾಕಲು ಆಸ್ಪತ್ರೆ ವೈದ್ಯರು ಸೂಚಿಸಿದ್ದರು. ಆದರೆ ಗಾಯ ಕ್ಲೀನ್ ಮಾಡದೇ ಕಲ್ಲುಗಳನ್ನು ತೆಗೆಯದೇ ಆಸ್ಪತ್ರೆ ಸಿಬ್ಬಂದಿ ಗಾಯಕ್ಕೆ ಹೊಲಿಗೆ ಹಾಕಿದ್ದರು.
ವಾರವಾದರೂ ಗಾಯ ಗುಣಮುಖವಾಗದ ಹಿನ್ನೆಲೆಯಲ್ಲಿ ಎಕ್ಸ್ ರೇ ಮಾಡಿಸಿದಾಗ ವಿಚಾರ ಬೆಳಕಿಗೆ ಬಂದಿತ್ತು. ತಕ್ಷಣ ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಈ ವೇಳೆ ಹೊಲಿಗೆ ಬಿಚ್ಚಿದಾಗ 14 ಕಲ್ಲುಗಳು ಪತ್ತೆಯಾಗಿದೆ. ಬೈಕ್ ಸ್ಕಿಡ್ ಆಗಿ ಬಿದ್ದಾಗ ಮೊಣಕಾಲಿನೊಳಗೆ ಕಲ್ಲುಗಳು ಹೊಕ್ಕಿದ್ದವು. ಸದ್ಯ ಪ್ರಕರಣ ಸಂಬಂಧ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದ ವಿರುದ್ದ ಆಕ್ರೋಶ ವ್ಯಕ್ತವಾಗಿದೆ. ಈ ಹಿಂದೆಯೂ ಕಡಬದ ಆಸ್ಪತ್ರೆ ಸಿಬ್ಬಂದಿ ವಿರುದ್ದ ನಿರ್ಲಕ್ಷ್ಯದ ಆರೋಪ ಕೇಳಿ ಬಂದಿದ್ದು, ಈ ಬಾರಿಯೂ ಮತ್ತೆ ಗಂಭೀರ ನಿರ್ಲಕ್ಷ್ಯ ತೋರಲಾಗಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೂ ತರಲಾಗಿದ್ಧು, ಸಿಬ್ಬಂದಿ ವಿರುದ್ದ ಕ್ರಮಕ್ಕೆ ಆಗ್ರಹಿಸಲಾಗಿದೆ.