ಬೆಂಗಳೂರು[ಆ.14] ಭಾರತದ ಕಾರ್ಯನಿರತ ಪತ್ರಕರ್ತರ ಸಂಘ [ಇಂಡಿಯನ್ ಫೆಡರೇಶನ್  ಆಫ್ ವರ್ಕಿಂಗ್ ಜರ್ನಲಿಸ್ಟ್]ದ 71 ನೇ ರಾಷ್ಟ್ರೀಯ ಸಮ್ಮೇಳನ ಆಗಸ್ಟ್ 18 ಮತ್ತು 19 ರಂದು ಕನಕಪುರ ರಸ್ತೆಯ ಶ್ರೀ ರವಿಶಂಕರ್ ಗುರೂಜಿ ಆಶ್ರಮದಲ್ಲಿ ನಡೆಯಲಿದೆ. ಕಾರ್ಯಕ್ರಮಕ್ಕೆ ರಾಜ್ಯ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಹಕಾರವೂ ಇರಲಿದೆ.

ಆಗಸ್ಟ್ 18 ರಂದು ಸಿಎಂ ಕುಮಾರಸ್ವಾಮಿ ಕಾರ್ಯಕ್ರಮ ಉದ್ಘಾಟಿಸಲಿದ್ದು ರವಿಶಂಕರ್ ಗುರೂಜಿ ಸಾನ್ನಿಧ್ಯ ವಹಿಸಲಿದ್ದಾರೆ. ಇಂಡಿಯನ್ ಫೆಡರೇಶನ್  ಆಫ್ ವರ್ಕಿಂಗ್ ಜರ್ನಲಿಸ್ಟ್ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ, ನಿವೃತ್ತ ಲೋಕಾಯುಕ್ತ ಜಸ್ಟಿಸ್ ಸಂತೋಷ್ ಹೆಗ್ಡೆ, ಕೇಂದ್ರ ಸಚಿವ ಅನಂತ್‌ ಕುಮಾರ್, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಮೇಯರ್ ಸಂಪತ್‌ರಾಜ್, ಶಾಸಕ ಎಸ್‌.ಟಿ.ಸೋಮಶೇಖರ್, ಇಂಡಿಯನ್ ಫೆಡರೇಶನ್  ಆಫ್ ವರ್ಕಿಂಗ್ ಜರ್ನಲಿಸ್ಟ್ ಕಾರ್ಯದರ್ಶಿ ಪರಮಾನಂದ ಪಾಂಡೆ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎನ್‌.ರಾಜು, ಉಪಾಧ್ಯಕ್ಷ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಮದನ್ ಗೌಡ, ಬಿಬಿಎಂಪಿ ಸದಸ್ಯ ಆರ್ಯ ಶ್ರೀನಿವಾಸ್ ಭಾಗವಹಿಸಲಿದ್ದಾರೆ.

ಆಗಸ್ಟ್ 18 ರಂದು ಮಧ್ಯಾಹ್ನ 3ಕ್ಕೆ ‘ಕಿಚಡಿ ಸರ್ಕಾರ್‌ ಆರ್ ಸಿಂಗಲ್ ಸರ್ದಾರ್’ ವಿಷಯದ ಮೇಲೆ ಸಂವಾದ ನಡೆಯಲಿದ್ದು, ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್, ಪರಿಸರ ಸಚಿವ ಶಂಕರ್, ಆಫ್ ವರ್ಕಿಂಗ್ ಜರ್ನಲಿಸ್ಟ್ ಕಾರ್ಯದರ್ಶಿ ಪರಮಾನಂದ ಪಾಂಡೆ,ಚಿಂತಕ ಬಸವರಾಜ್ ಪಾಟೀಲ್, ಕನ್ನಡಪ್ರಭ ಪ್ರಧಾನ ಸಂಪಾದಕ ರವಿ ಹೆಗಡೆ, ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ ಮತ್ತು ಏಷ್ಯಾನೆಟ್ ಕನ್ನಡ ಡಿಜಿಟಲ್ ಪ್ರಧಾನ ಸಂಪಾದಕ ಎಸ್.ಕೆ.ಶಾಮಸುಂದರ್ ಪಾಲ್ಗೊಂಡು ವಿಚಾರ ವಿನಿಮಯ ಮಾಡಲಿದ್ದಾರೆ.

ಆಗಸ್ಟ್ 19ರಂದು ಬೆಳಗ್ಗೆ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ವರದಿ ಮಂಡನೆಯಾಗಲಿದ್ದು ವಾರ್ತಾ ಇಲಾಖೆ ಆಯುಕ್ತ ಡಾ.ಪಿ.ಎಸ್.ಹರ್ಷ ಪಾಲ್ಗೊಳ್ಳುವರು. ಮಧ್ಯಾಹ್ನದ ಸಮಾರೋಪದಲ್ಲಿ ಡಿಸಿಎಂ ಡಾ.ಜಿ.ಪರಮೇಶ್ವರ, ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಸದಾನಂದ ಗೌಡ ಭಾಗವಹಿಸಲಿದ್ದಾರೆ.