ಪ್ರಧಾನಿ ಆಗಾಗ ಬೆಂಗ್ಳೂರಿಗೆ ಬಂದರೆ ಅಭಿವೃದ್ಧಿ: ಹೈಕೋರ್ಟ್ ಜಡ್ಜ್
* ಪ್ರಧಾನಿ ಮೆಚ್ಚಿಸಲು ಅಧಿಕಾರಿಗಳು ಹಾಳಾದ ರಸ್ತೆ ಸರಿಪಡಿಸಬಹುದು
* ವಿಶ್ವೇಶ್ವರಯ್ಯ ಲೇಔಟ್‌ಗೆ ಸೌಕರ್ಯ ಕಲ್ಪಿಸದ ಬಿಡಿಎಗೆ ಕೋರ್ಟ್ ತರಾಟೆ
* ಬಿಡಿಎ ಧೋರಣೆಯನ್ನು ಆಕ್ಷೇಪಿಸಿ ಹೈಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ
ಬೆಂಗಳೂರು(ಜೂ.24): ನಗರದಲ್ಲಿ ಮೂಲ ಸೌಕರ್ಯ ಅಭಿವೃದ್ಧಿ ಆಗಬೇಕಾದರೆ ಪ್ರಧಾನಿ ಮತ್ತು ರಾಷ್ಟ್ರಪತಿಗಳು ಆಗಾಗ್ಗೆ ನಗರಕ್ಕೆ ಭೇಟಿ ನೀಡಬೇಕಿದೆ ಎಂದು ಸೂಚ್ಯವಾಗಿ ನುಡಿಯುವ ಮೂಲಕ ಬಡಾವಣೆಗೆ ಮೂಲ ಸೌಕರ್ಯ ಕಲ್ಪಿಸದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವನ್ನು (ಬಿಡಿಎ) ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಹೈಕೋರ್ಟ್ ಆದೇಶ ನೀಡಿದ್ದರೂ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಕೆಲ ನಿವೇಶನಗಳಿಗೆ ಒಳಚರಂಡಿ, ಕುಡಿಯುವ ನೀರಿನ ಸಂಪರ್ಕ ಮತ್ತು ರಸ್ತೆ ಸೌಲಭ್ಯ ಕಲ್ಪಿಸದ ಬಿಡಿಎ ಧೋರಣೆಯನ್ನು ಆಕ್ಷೇಪಿಸಿ ಪಿ.ಮಂಜುಳಾ ಮತ್ತು ಶಾರದಮ್ಮ ಎಂಬುವರು ಹೈಕೋರ್ಟ್‌ಗೆ ನ್ಯಾಯಾಂಗ ನಿಂದನೆ ಅರ್ಜಿ ದಾಖಲಿಸಿದ್ದರು.
ಪ್ರಧಾನಿ ಮೋದಿ ಸ್ವಾಗತಕ್ಕೆ ಟಾರು ಹಾಕಿದ್ದ ರಸ್ತೆ ಈಗಲೇ ಹಾಳು..!
ಗುರುವಾರ ಅರ್ಜಿ ವಿಚಾರಣೆ ನಡೆಸಿದ ಹಿರಿಯ ನ್ಯಾಯಮೂರ್ತಿ ಬಿ.ವೀರಪ್ಪ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ, ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಕೆಲ ನಿವೇಶನಗಳಿಗೆ ಮೂಲಸೌಕರ್ಯ ಕಲ್ಪಿಸುವಂತೆ ಹೈಕೋರ್ಚ್, ಬಿಡಿಎಗೆ ನಿರ್ದೇಶಿಸಿ ಒಂದೂವರೆ ವರ್ಷ ಕಳೆದಿದೆ. ಆದರೆ, ಬಿಡಿಎ ಅಧಿಕಾರಿಗಳು ಕೋರ್ಟ್ ಆದೇಶಕ್ಕೆ ಬೆಲೆಗೆ ಬೆಲೆ ನೀಡುತ್ತಿಲ್ಲ ಎಂದು ತರಾಟೆಗೆ ತೆಗೆದುಕೊಂಡಿತು.
ಪ್ರಧಾನ ಮಂತ್ರಿ ಮತ್ತು ರಾಷ್ಟ್ರಪತಿಗಳು ಆಗಾಗ್ಗೆ ಭೇಟಿ ನೀಡಿದರೆ ನಗರದ ರಸ್ತೆಗಳು ಉತ್ತಮಗೊಳ್ಳಬಹುದು. ಮೊನ್ನೆ ಪ್ರಧಾನ ಮಂತ್ರಿಗಳು ಆಗಮಿಸಿದ್ದ ಹಿನ್ನೆಲೆಯಲ್ಲಿ .23 ಕೋಟಿ ಖರ್ಚು ಮಾಡಿ ನಗರದಲ್ಲಿ ಗುಂಡಿ ಮುಚ್ಚಲಾಗಿದೆ.ಪ್ರಧಾನ ಮಂತ್ರಿಗಳು ನಗರಕ್ಕೆ ಭೇಟಿ ನೀಡಿದ ಪ್ರತಿ ಬಾರಿ ಬೇರೆ ಬೇರೆ ಮಾರ್ಗದಲ್ಲಿ ಸಂಚರಿಸಬೇಕು. ಆಗ ಅವರನ್ನು ಮೆಚ್ಚಿಸುವ ಸಲುವಾಗಿ ಹಾಳಾದ ರಸ್ತೆಗಳನ್ನು ಅಧಿಕಾರಿಗಳು ಸರಿಪಡಿಸಬಹುದು ಎಂದು ತರಾಟೆಗೆ ತೆಗೆದುಕೊಂಡಿತು.
ಬಳಿಕ ಎರಡು ವಾರದಲ್ಲಿ ಹೈಕೋರ್ಟ್ ಆದೇಶದಂತೆ ವಿಶ್ವೇಶ್ವರಯ್ಯ ಬಡಾವಣೆ ನಿವೇಶನಗಳಿಗೆ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ನಿರ್ದೇಶಿಸಿ ವಿಚಾರಣೆ ಮುಂದೂಡಿತು.