ಮಂಗಳೂರು[ಸೆ.08]: ಭಾರತೀಯ ಆಡಳಿತಾತ್ಮಕ ಸೇವೆ(ಐಎಎಸ್‌) ಯ ಹುದ್ದೆಗೆ ಶುಕ್ರವಾರ ರಾಜೀನಾಮೆ ನೀಡಿದ ದ.ಕ. ಜಿಲ್ಲಾಧಿಕಾರಿ ಸಸಿಕಾಂತ್‌ ಸೆಂಥಿಲ್‌ ಶನಿವಾರ ಕರಾವಳಿಯಲ್ಲೇ ಇದ್ದರೂ ಅಜ್ಞಾತವಾಗಿಯೇ ಉಳಿದರು. ಈ ಮಧ್ಯೆ, ರಾಜೀನಾಮೆ ವಾಪಸ್‌ ಪಡೆಯುವಂತೆ ಸಸಿಕಾಂತ್‌ ಸೆಂಥಿಲ್‌ರಿಗೆ ಸ್ನೇಹಿತರು ಹಾಗೂ ಹಿತೈಷಿಗಳಿಂದ ಒತ್ತಡ ಹೆಚ್ಚುತ್ತಿದ್ದು, ಆದರೆ ಅವರು ಮಾತ್ರ ತಮ್ಮ ನಿರ್ಧಾರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಪಟ್ಟುಹಿಡಿದಿದ್ದಾರೆ.

ಸೆಂಥಿಲ್‌ ಅವರ ಆತ್ಮೀಯ ಅಧಿಕಾರಿ ಸ್ನೇಹಿತರು ಕರೆ ಮಾಡಿ, ನೀವು ದುಡುಕಬೇಡಿ. ರಾಜೀನಾಮೆಯನ್ನು ವಾಪಸ್‌ ಪಡೆಯಿರಿ ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ. ಕೇಂದ್ರ ಅಥವಾ ರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರ ಇರಲಿ. ಐಎಎಸ್‌, ಐಪಿಎಸ್‌ ಅಧಿಕಾರಿಗಳು ಸಂವಿಧಾನ ಬದ್ಧವಾಗಿ ಕಾರ್ಯನಿರ್ವಹಿಸುವುದು ಕ್ರಮ. ಅದನ್ನು ಬಿಟ್ಟು ಸಂಬಂಧಪಡದ ವಿಚಾರಗಳಿಗೆ ತಲೆಕೆಡಿಸಿಕೊಳ್ಳಬಾರದು. ಕೇಂದ್ರ ಸರ್ಕಾರದ ಧೋರಣೆ ನೇರವಾಗಿ ಜಿಲ್ಲಾಡಳಿತಕ್ಕೆ ಯಾವುದೇ ಸಂಬಂಧ ಹೊಂದಿಲ್ಲ. ಹಾಗಿರುವಾಗ ಅದೇ ವಿಚಾರವನ್ನು ಹಿಡಿದುಕೊಂಡು ರಾಜಿನಾಮೆಗೆ ಮುಂದಾಗಿರುವುದು ಸರಿಯಾದ ಕ್ರಮವಲ್ಲ ಎಂದು ಬುದ್ಧಿಮಾತು ಹೇಳಿದ್ದಾರೆ ಎಂದು ತಿಳಿದುಬಂದಿದೆ. ಏತನ್ಮಧ್ಯೆ, ರಾಜೀನಾಮೆ ವಾಪಸ್‌ ಪಡೆಯುವಂತೆ ಸೆಂಥಿಲ್‌ ಪರವಾಗಿ ಸಿಪಿಎಂ, ಕಾಂಗ್ರೆಸ್‌, ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಒತ್ತಾಯಿಸಿವೆ.

ಆದರೆ, ಮಾಧ್ಯಮಗಳ ಜತೆಗೆ ಮಾತನಾಡಿದ ಸೆಂಥಿಲ್‌ ಅವರು, ನನ್ನ ರಾಜಿನಾಮೆಗೆ ಕಾರಣ ಹಾಗೂ ಅದಕ್ಕೆ ನಾನು ಬದ್ಧನಾಗಿರುವ ಬಗ್ಗೆ ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಅದರ ಹೊರತು ಬೇರೆ ಯಾವುದೇ ವಿಚಾರ ನನ್ನ ಮುಂದಿಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.