ನನ್ನ ಫಾರ್ಮುಲಾ ಸರ್ಕಾರಕ್ಕೆ ಉಚಿತವಾಗಿ ನೀಡಬಲ್ಲೆ: ಡಾ. ಗಿರಿಧರ್ ಕಜೆ
ನನ್ನಿಂದ ಎಲ್ಲರಿಗೂ ಪೂರೈಸಲು ಸಾಧ್ಯವಿಲ್ಲ. ಸರ್ಕಾರ ಬೇರೆ ಬೇರೆ ಕಡೆಗಳಲ್ಲಿ ಔಷಧ ತಯಾರಿಸಲು ಮುಂದಾದರೆ ನಾನು ಉಚಿತವಾಗಿ ಫಾರ್ಮುಲಾ ನೀಡುತ್ತೇನೆ ಎಂದು ಖ್ಯಾತ ಆಯುರ್ವೇದ ತಜ್ಞ ಡಾ.ಗಿರಿಧರ ಕಜೆ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಶಿವಮೊಗ್ಗ(ಜು.30): ಕೊರೋನಾ ಸೋಂಕು ನಿವಾರಣೆ ಸಂಬಂಧ ನಾನು ಸಂಶೋಧಿಸಿರುವ ವಿಶೇಷ ಔಷಧವನ್ನು ವಾಣಿಜ್ಯ ಉದ್ದೇಶಕ್ಕೆ ಬಳಕೆ ಮಾಡಲು ನನಗೆ ಇಷ್ಟವಿಲ್ಲ. ಹೀಗಾಗಿ ಕೊರೋನಾ ಸೋಂಕಿತರ ಪ್ರಾಥಮಿಕ ಸಂಪರ್ಕವಿರುವರಿಗೆ ಈ ಔಷಧ ಉಚಿತವಾಗಿ ನೀಡಲು ಸರ್ಕಾರ ಮುಂದಾದರೆ ನಾನು ನನ್ನ ಫಾರ್ಮುಲಾ ಉಚಿತವಾಗಿ ನೀಡುತ್ತೇನೆ ಎಂದು ಖ್ಯಾತ ಆಯುರ್ವೇದ ತಜ್ಞ ಡಾ.ಗಿರಿಧರ ಕಜೆ ಹೇಳಿದರು.
ಪತ್ರಿಕಾ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನನ್ನಿಂದ ಎಲ್ಲರಿಗೂ ಪೂರೈಸಲು ಸಾಧ್ಯವಿಲ್ಲ. ಸರ್ಕಾರ ಬೇರೆ ಬೇರೆ ಕಡೆಗಳಲ್ಲಿ ಔಷಧ ತಯಾರಿಸಲು ಮುಂದಾದರೆ ನಾನು ಉಚಿತವಾಗಿ ಫಾರ್ಮುಲಾ ನೀಡುತ್ತೇನೆ ಎಂದರು.
ಈ ಔಷಧ ನಾನು ಕೊರೋನಾಕ್ಕೆಂದು ಸಂಶೋಧಿಸಿದ್ದಲ್ಲ. 20 ವರ್ಷಗಳ ಹಿಂದೆ ಆ್ಯಂಟಿ ವೈರಾಣು ಔಷಧವಾಗಿ ಇದನ್ನು ಸಂಶೋಧಿಸಿದೆ. ಅಂದಿನಿಂದ ಡೆಂಗ್ಯೂ ಸೇರಿದಂತೆ ಹಲವಾರು ವೈರಸ್ ಸಂಬಂಧಿತ ಕಾಯಿಲೆಗೆ ನೀಡಿ ಯಶಸ್ವಿಯಾಗಿ ಗುಣಪಡಿಸಿದ್ದು, ಈ ಹಿನ್ನೆಲೆಯಲ್ಲಿ ಈ ಔಷಧ ಕೊರೋನಾ ವೈರಾಣು ವಿರುದ್ಧ ಕೆಲಸ ಮಾಡಲಿದೆ. ಈ ಹಿನ್ನೆಲೆಯಲ್ಲಿ ನಾನು ಈ ಔಷಧವನ್ನು ಸರ್ಕಾರದ ಅನುಮತಿಯೊಂದಿಗೆ, ಸಂಬಂಧಿಸಿದ ಕಾನೂನು ಮತ್ತು ನಿಯಮಗಳ ಅಡಿಯಲ್ಲಿ 10 ಜನ ಮೇಲೆ ಪ್ರಯೋಗ ಮಾಡಲಾಯಿತು ಎಂದರು.
ಆಗ ಬೆಂಗಳೂರಿನಲ್ಲಿ 100 ಕೇಸುಗಳ ಮಾತ್ರ ಇದ್ದವು. ಇದರಲ್ಲಿ 10 ಜನರನ್ನು ಆಯ್ದುಕೊಳ್ಳಲಾಯಿತು. ಈ ಹತ್ತು ಜನರು ಕೂಡ ರೋಗ ಲಕ್ಷಣಗಳನ್ನು ಹೊಂದಿದ್ದರಲ್ಲದೆ, ಬೇರೆ ಬೇರೆ ರೋಗಗಳಿಂದ ಕೂಡ ಬಳಲುತ್ತಿದ್ದರು. ಇವರ ಮೇಲೆ ಪ್ರಯೋಗ ಮಾಡಿದಾಗ ಎಲ್ಲ 10 ಮಂದಿಯೂ 5 ದಿನಗಳಲ್ಲಿ ಲಕ್ಷಣಗಳಿಂದ ಮತ್ತು 10 ದಿನಗಳ ಒಳಗೆ ಕೊರೋನಾ ರೋಗದಿಂದಲೇ ಮುಕ್ತರಾದರು ಎಂದು ಹೇಳಿದರು.
ಬಳಿಕ 1 ಸಾವಿರ ಜನರ ಮೇಲೆ ಪ್ರಯೋಗಕ್ಕೆ ಸರ್ಕಾರವನ್ನು ಕೋರಿದ್ದೇನೆ. ಶೀಘ್ರದಲ್ಲಿ ಇದಕ್ಕೆ ಅನುಮತಿ ಸಿಗಲಿದೆ ಎಂಬ ನಂಬಿಕೆಯಿದೆ. ನನ್ನ ಸಂಶೋಧನೆಗೆ ಪ್ರಾಥಮಿಕ ಯಶಸ್ಸು ಸಿಕ್ಕಿದೆ ಮಾತ್ರ. ಇದು ಇನ್ನಷ್ಟುವಿಸ್ತಾರವಾಗಿ ನಡೆಯಬೇಕು. ಸಮುದಾಯದಲ್ಲಿ ಇದು ಯಶಸ್ವಿಯಾಗಬೇಕು. ದೀರ್ಘ ಕಾಲದಲ್ಲಿ ಯಾವುದೇ ಬೇರೆ ಪರಿಣಾಮ ಇಲ್ಲ ಎನ್ನುವುದು ಕೂಡ ಗೊತ್ತಾಗಬೇಕು. ಆದರೆ ಈಗಾಗಲೇ 20 ವರ್ಷಗಳಿಂದ ಈ ಆ್ಯಂಟಿ ವೈರಾಯು ಔಷಧವನ್ನು ಯಶಸ್ವಿಯಾಗಿ ನೀಡಿ ರೋಗಗಳನ್ನು ಗುಣಪಡಿಸುತ್ತಲೇ ಇದ್ದೇನೆ ಎಂದರು.
ತಂಬಾಕುದಾಸರಿಗೆ ಕೊರೋನಾ ಸೋಂಕು ಹಬ್ಬುವ ಸಾಧ್ಯತೆ ಹೆಚ್ಚು!
ಈ ಔಷಧಕ್ಕೆ 14 ಬಗೆಯ ಗಿಡಮೂಲಿಕೆ ಸೇರಿಸಿದ್ದೇನೆ. ಈ ಗಿಡಮೂಲಿಕೆ ಎಲ್ಲರಿಗೂ ಗೊತ್ತಿರುವಂತಹದೇ. ಆದರೆ ಪ್ರಮಾಣ ಬಹಳ ಮುಖ್ಯ. ಅದು ನನ್ನ ಔಷಧದ ವಿಶೇಷ. ಆಯುರ್ವೇದದಲ್ಲಿ ನೂರಾರು ಆ್ಯಂಟಿ ವೈರಲ್ ಡ್ರಗ್ಸ್‌ಗಳಿವೆ. ಔಷಧ ಸಸ್ಯಗಳಿವೆ. ಆಲೋಪತಿಯಲ್ಲಿ ಇಷ್ಟೊಂದು ಇಲ್ಲ. ಬ್ರಾಡ್ ಸ್ಪೆಕ್ಟ್ರಮ್ ಆ್ಯಂಟಿ ವೈರಲ್ ಡ್ರಗ್ಸ್ ಆಯುರ್ವೇದಲ್ಲಿ ಮಾತ್ರವಿದೆ. ಜೊತೆಗೆ ಆಯುರ್ವೇದ ತುಂಬಾ ಸೇಫ್ ಎಂದು ವಿವರಿಸಿದರು.
ದೂರದ ಮಡಗಾಸ್ಕರ್ ದೇಶದಲ್ಲಿ ಎಲ್ಲ ಶಾಲಾ ಮಕ್ಕಳಿಗೆ ಆಯುರ್ವೇದ ಕಷಾಯ ನೀಡಿ ಕೊರೋನಾ ಬಾರದಂತೆ ತಡೆಯುವ ಪ್ರಯತ್ನ ನಡೆದಿದೆ. ಆದರೆ ನಮ್ಮ ದೇಶದ್ದೇ ಆಯುರ್ವೇದ ಬಳಸಲು ನಾವು ಹಿಂದೆ ಸರಿಯ ಬಾರದು ಎಂದು ತಿಳಿಸಿದರು.
ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಡಾ. ಕಜೆ ಅವರು ಈ ರಾಜ್ಯದ ಅಸ್ತಿ. ತಲೆಮಾರುಗಳಿಂದ ಬಂದ ಈ ವೈದ್ಯ ಪದ್ಧತಿಯಲ್ಲಿ ಮನುಷ್ಯನ ಎಲ್ಲ ರೋಗಗಳಿಗೂ ಮದ್ದಿದೆ. ಆದರೆ ನಂಬಿಕೆ, ತಾಳ್ಮೆ ಬೇಕು. ಡಾ. ಗಿರಿಧರ್ ಕಜೆಯವರು ಕೊರೋನಾ ಸೋಂಕಿಗೆ ಔಷಧ ಸಂಶೋಧಿಸಿದ್ದಾರೆ. ಸರ್ಕಾರ ಇವರಿಗೆ ಎಲ್ಲ ರೀತಿಯ ನೆರವು ನೀಡಲಿದೆ ಎಂದು ಹೇಳಿದರು. ಹಿರಿಯ ಪತ್ರಕರ್ತ ಚಂದ್ರಹಾಸ ಹಿರೇಮಳಲಿ ಸ್ವಾಗತಿಸಿದರು. ಜಿಪಂ ಸದಸ್ಯ ಕೆ. ಇ. ಕಾಂತೇಶ್ ಇತರರು ಇದ್ದರು.