ಕಾನೂನು ವ್ಯಾಪ್ತಿಯಲ್ಲಿ ಫೋನ್‌ ಕದ್ದಾಲಿಕೆಗೆ ಅವಕಾಶವಿದೆ ಎಂದು ಹೇಳುವ ಮೂಲಕ ಮಾಜಿ ಸಚಿವ, ಶಿರಾ ಜೆಡಿಎಸ್‌ ಶಾಸಕ ಬಿ.ಸತ್ಯನಾರಾಯಣ್‌ ಫೋನ್‌ ಕದ್ದಾಲಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ತುಮಕೂರು [ಸೆ.15]: ಅಧಿಕಾರದಲ್ಲಿರುವವರಿಗೆ ಕಾನೂನು ವ್ಯಾಪ್ತಿಯಲ್ಲಿ ಫೋನ್‌ ಕದ್ದಾಲಿಕೆಗೆ ಅವಕಾಶವಿದೆ ಎಂದು ಹೇಳುವ ಮೂಲಕ ಮಾಜಿ ಸಚಿವ, ಶಿರಾ ಜೆಡಿಎಸ್‌ ಶಾಸಕ ಬಿ.ಸತ್ಯನಾರಾಯಣ್‌ ಫೋನ್‌ ಕದ್ದಾಲಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಫೋನ್‌ ಕದ್ದಾಲಿಕೆ ಪ್ರಕ್ರಿಯೆ ಸಾಮಾನ್ಯ. ಆದರೆ, ಅಧಿಕಾರದಲ್ಲಿರುವ ಕೆಲವರು ಅದನ್ನು ದುರುಪಯೋಗಪಡಿಸಿಕೊಳ್ಳುತ್ತಾರೆ. ಗುಬ್ಬಿ ಶಾಸಕ ಶ್ರೀನಿವಾಸ್‌ ಅವರು ತಮ್ಮ ಫೋನೂ ಕದ್ದಾಲಿಕೆಯಾಗಿತ್ತು ಎಂದಿದ್ದಾರೆ. ಯಾವ ಕಾರಣಕ್ಕೆ ಟ್ರ್ಯಾಪ್‌ ಮಾಡಲಾಗಿತ್ತು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಬಂಧನಕ್ಕೆ ಪ್ರತಿಕ್ರಿಯಿಸಿದ ಸತ್ಯನಾರಾಯಣ, ದೇಶದಲ್ಲಿ ಇಂತಹ ಹಲವಾರು ಪ್ರಕರಣಗಳಿವೆ. ಏಕ ಪಕ್ಷೀಯವಾಗಿ ಡಿಕೆಶಿ ವಿರುದ್ಧ ಕ್ರಮ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಡಿಕೆಶಿ ಪರ ನಡೆದ ಒಕ್ಕಲಿಗರ ಪ್ರತಿಭಟನೆಗೆ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಕರೆಯಬೇಕಿತ್ತು ಎಂದರು.

ಬಿಜೆಪಿ ಸೇರಲ್ಲ- ಸತ್ಯನಾರಾಯಣ ಸ್ಪಷ್ಟನೆ : ಗುಬ್ಬಿ ಶಾಸಕ ಎಸ್‌.ಆರ್‌.ಶ್ರೀನಿವಾಸ್‌ ಅವರಿಗೆ ಬಹಳ ಅನ್ಯಾಯವಾಗಿರಬಹುದೇನೊ ನನಗೆ ಅದು ಗೊತ್ತಿಲ್ಲ. ಶಾಸಕನಾಗಿ ನನಗೆ ಏನೇನು ಸಿಗಬೇಕೊ ಅದೆಲ್ಲಾ ಸಿಕ್ಕಿದೆ. ತುಮಕೂರು ರಾಜಕಾರಣದಲ್ಲಿ ನಾನು ಒಬ್ಬಂಟಿ. ಕಳೆದ ಬಾರಿ ಕೆಲ ಮುಖಂಡರು ಏಜೆಂಟ್‌ಗಳ ಮೂಲಕ ಬಿಜೆಪಿಗೆ ಕರೆದರು. 

ಅವರಿಗೆ ನೇರವಾಗಿಯೇ ಬಿಜೆಪಿಗೆ ಬರುವುದಿಲ್ಲ ಎಂದು ಹೇಳಿದ್ದೆ. ಈ ಬಾರಿ ಬಿಜೆಪಿಯಿಂದ ಯಾವುದೆ ರೀತಿ ಆಹ್ವಾನವೂ ಬಂದಿಲ್ಲ. ಯಾವುದೆ ಕಾರಣಕ್ಕೂ ಬಿಜೆಪಿಗೆ ಹೋಗುವುದಿಲ್ಲ ಎಂದು ಎಂದು ಸತ್ಯನಾರಾಯಣ ಸ್ಪಷ್ಟಪಡಿಸಿದರು.