ಹುಬ್ಬಳ್ಳಿ [ಆ.28]:  ಉಪ ಮುಖ್ಯಮಂತ್ರಿ ಹುದ್ದೆ ಕೊಡದಿದ್ದಕ್ಕೆ ಯಾವುದೇ ಅಸಮಾಧಾನ ಇಲ್ಲ. ಆ ಹುದ್ದೆ ಕೊಟ್ಟಿದ್ದರೂ ನಾನು ತೆಗೆದುಕೊಳ್ಳುತ್ತಿರಲಿಲ್ಲ ಎಂದು ರಾಜ್ಯ ಬೃಹತ್‌ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಸ್ಪಷ್ಟಪಡಿಸಿದ್ದಾರೆ.

ಉಪ ಮುಖ್ಯಮಂತ್ರಿ ಹುದ್ದೆ ತಪ್ಪಿದ್ದಕ್ಕೆ ಅಸಮಾಧಾನವಾಗಿದೆಯೇ ಎಂದು ಮಾಧ್ಯಮಗಳು ಮಂಗಳವಾರ ಪ್ರಶ್ನಿಸಿದಾಗ, ಉಪ ಮುಖ್ಯಮಂತ್ರಿ ಹುದ್ದೆ ಸಾಂವಿಧಾನಿಕ ಅಲ್ಲ. ಅದು ಒಂದು ಗೌರವ ಅಷ್ಟೆ. ಆದರೆ ಮುಖ್ಯಮಂತ್ರಿ, ಸಚಿವ ಸ್ಥಾನ ಹುದ್ದೆಗಳು ಸಾಂವಿಧಾನಿಕ ಹುದ್ದೆಗಳು. ಹೀಗಾಗಿ ಉಪ ಮುಖ್ಯಮಂತ್ರಿ ಹುದ್ದೆ ತಪ್ಪಿದ್ದಕ್ಕೆ ಯಾವುದೇ ಅಸಮಾಧಾನ ಇಲ್ಲ. ಒಂದು ವೇಳೆ ನನಗೆ ಉಪಮುಖ್ಯಮಂತ್ರಿ ಹುದ್ದೆ ಕೊಟ್ಟಿದ್ದರೂ ಅದನ್ನು ತೆಗೆದುಕೊಳ್ಳುತ್ತಿರಲಿಲ್ಲ. ಲಕ್ಷ್ಮಣ ಸವದಿ ಅವರಿಗೆ ಉಪ ಮುಖ್ಯಮಂತ್ರಿ ಮಾಡಿದ್ದಕ್ಕೆ ಕೇಳಿದ ಪ್ರಶ್ನೆಗೆ, ಪಕ್ಷದ ಹೈಕಮಾಂಡ್‌ ಮಾಡಿರುವ ನಿರ್ಧಾರವದು. ಏನೋ ಒಂದು ವಿಚಾರ ಇಟ್ಟುಕೊಂಡು ಹೈಕಮಾಂಡ್‌ ಆ ರೀತಿ ನಿರ್ಧಾರ ಕೈಗೊಂಡಿದೆ. ಅದಕ್ಕೆ ನಾವೆಲ್ಲರೂ ಬದ್ಧವಾಗಿರುತ್ತೇವೆ ಎಂದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಇದೇ ವೇಳೆ ಸಚಿವ ಸ್ಥಾನದ ವಿಚಾರದಲ್ಲಿ ಸಿ.ಟಿ.ರವಿ ಅವರು ಅಸಮಾಧಾನಗೊಂಡಿದ್ದಾರಲ್ವಾ ಎಂಬ ಪ್ರಶ್ನೆಗೆ, ಅಸಮಾಧಾನ ಆಗಿದೆ ಎಂದು ಸಿ.ಟಿ.ರವಿ ಎಲ್ಲಿಯಾದರೂ ಹೇಳಿದ್ದಾರಾ? ಹಾಗೊಂದು ವೇಳೆ ಅವರು ಅಸಮಾಧಾನವಾಗಿದ್ದರೆ ನಾನೇ ಅವರೊಂದಿಗೆ ಮಾತನಾಡಿ ಸರಿಪಡಿಸುತ್ತೇನೆ. ಸಚಿವ ಸ್ಥಾನ ಸಿಗದೇ ಇರುವುದಕ್ಕೆ ಕೆಲವರಲ್ಲಿ ಅಸಮಾಧಾನವಾಗಿರುವುದು ನಿಜ. ಆದರೆ ಅವುಗಳನ್ನೆಲ್ಲ ಸರಿಪಡಿಸುತ್ತೇವೆ ಎಂದು ಹೇಳಿದರು.

ಏತನ್ಮಧ್ಯೆ, ಬಿಜೆಪಿ ಸರ್ಕಾರ, ಖಾತೆ ಹಂಚಿಕೆ ಕುರಿತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿರುವ ವ್ಯಂಗ್ಯ ಕುರಿತು ಪ್ರತಿಕ್ರಿಯೆ ನೀಡಿದ ಶೆಟ್ಟರ್‌, ಬಿಜೆಪಿ ಹಾಗೂ ಯಡಿಯೂರಪ್ಪ ಮೇಲೆ ಸಿದ್ದರಾಮಯ್ಯ ಅವರಿಗೆ ಏಕೆ ಇಷ್ಟೊಂದು ಅನುಕಂಪ ಬಂದಿದೆಯೋ ಗೊತ್ತಿಲ್ಲ. ಮೊದಲು ಅವರು ತಮ್ಮ ಪಕ್ಷದಲ್ಲಿನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲಿ ಎಂದರು.