ಬೆಂಗಳೂರು [ಆ.29]: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಆಶಾ ಕಾರ್ಯಕರ್ತೆಯೊಬ್ಬರು ತಮ್ಮ ಪತಿಯಿಂದಲೇ ಭೀಕರವಾಗಿ ಕೊಲೆಗೀಡಾರುವ ಘಟನೆ ರಾಜಗೋಪಾಲ ನಗರ ಸಮೀಪ ನಡೆದಿದೆ.

ಬಸಪ್ಪನಕಟ್ಟೆನಿವಾಸಿ ಸರಸ್ವತಿ (36) ಹತ್ಯೆಯಾದ ದುರ್ದೈವಿ. ಈ ಘಟನೆ ಸಂಬಂಧ ಪತಿ ಮಲ್ಲಿಕಾರ್ಜುನ್‌ನನ್ನು ರಾಜಗೋಪಾಲ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೌಟುಂಬಿಕ ವಿಚಾರವಾಗಿ ಮಂಗಳವಾರ ರಾತ್ರಿ ದಂಪತಿ ಮಧ್ಯೆ ನಡೆದ ಜಗಳವು ಕೊಲೆಯಲ್ಲಿ ಅಂತ್ಯವಾಗಿದೆ ಎಂದು ಉತ್ತರ ವಿಭಾಗದ ಡಿಸಿಪಿ ಶಶಿಕುಮಾರ್‌ ತಿಳಿಸಿದ್ದಾರೆ.

ಹದಿನೈದು ವರ್ಷಗಳ ಹಿಂದೆ ಆಶಾ ಕಾರ್ಯಕರ್ತೆ ಸರಸ್ವತಿ ಮತ್ತು ಮಲ್ಲಿಕಾರ್ಜುನ್‌ ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಬಸಪ್ಪನ ಕಟ್ಟೆಯ ಮನೆ ಕಟ್ಟಡದಲ್ಲಿ ಮೊದಲ ಮಹಡಿಯಲ್ಲಿ ಮಲ್ಲಿಕಾರ್ಜುನ್‌ ಕುಟುಂಬ ನೆಲೆಸಿದ್ದು, ಕೆಳಹಂತದಲ್ಲಿ ಆತನ ಪೋಷಕರು ವಾಸವಾಗಿದ್ದಾರೆ. ವಿಪರೀತ ಮದ್ಯ ವ್ಯಸನಿಯಾದ ಆರೋಪಿ, ಇತ್ತೀಚಿಗೆ ಯಾವುದೇ ಕೆಲಸಕ್ಕೆ ಹೋಗುತ್ತಿರಲ್ಲಿಲ್ಲ. ಹೀಗಾಗಿ ಸರಸ್ವತಿ ಅವರ ದುಡಿಮೆಯಲ್ಲಿ ಕುಟುಂಬ ನಿರ್ವಹಣೆಯಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಮದ್ಯ ಸೇವನೆಗೆ ಹಣ ಕೊಡದ ಕಾರಣಕ್ಕೆ ಆಗಾಗ್ಗೆ ಪತ್ನಿ ಮೇಲೆ ಮಲ್ಲಿಕಾರ್ಜುನ್‌ ಗಲಾಟೆ ಮಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ಸತಿ-ಪತಿ ಮಧ್ಯೆ ಮನಸ್ತಾಪವಾಗಿತ್ತು. ಮಂಗಳವಾರ ರಾತ್ರಿ ಸಹ ಕಂಠಪೂರ್ತಿ ಮದ್ಯ ಸೇವಿಸಿ ಮನೆಗೆ ಬಂದ ಮಲ್ಲಿಕಾರ್ಜುನ್‌, ಪತ್ನಿ ಜೊತೆ ಜಗಳ ತೆಗೆದಿದ್ದಾನೆ. ಆಗ ದಂಪತಿ ನಡುವೆ ಮಾತಿಗೆ ಮಾತು ಬೆಳೆದು ಪರಿಸ್ಥಿತಿ ವಿಕೋಪಕ್ಕೆ ತಿರುಗಿದೆ.

ಈ ಹಂತದಲ್ಲಿ ಕೆರಳಿದ ಮಲ್ಲಿಕಾರ್ಜುನ್‌, ಸರಸ್ವತಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ. ತಾತನ ಮನೆಯಲ್ಲಿ ಮಲಗಿದ್ದ ಮಕ್ಕಳು, ಬೆಳಗ್ಗೆ ಮನೆಗೆ ಮರಳಿದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ತಾಯಿ ಮೃತದೇಹ ಕಂಡು ಕಿರುಚಿದ್ದಾರೆ. ಆಗ ಮಲ್ಲಿಕಾರ್ಜುನ್‌ನ ಪೋಷಕರು ದೌಡಾಯಿಸಿ ಬಂದಿದ್ದಾರೆ. ಆರೋಪಿಯನ್ನು ಬಂಧಿಸಲಾಗಿದೆ. ರಾಜಗೋಪಾಲ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.