ಬೆಂಗಳೂರು [ಜು.14]:  ಕುಡಿತದ ಚಟ ಬಿಡುವಂತೆ ಹೇಳಿದ್ದ ಪತ್ನಿಯ ತಲೆಗೆ ಖಾಲಿ ಸಿಲಿಂಡರ್‌ನಿಂದ ಹಲ್ಲೆ ನಡೆಸಿ ಹತ್ಯೆ ಗೈದಿರುವ ಘಟನೆ ಮೈಕೋ ಲೇಔಟ್‌ನಲ್ಲಿ ನಡೆದಿದೆ.

ತೀವ್ರ ರಕ್ತಸ್ರಾವಕ್ಕೆ ಒಳಗಾದ ಪತ್ನಿಯನ್ನು ಅದೇ ಅವಸ್ಥೆಯಲ್ಲಿ ಬಿಟ್ಟು, ಮಕ್ಕಳನ್ನು ಮನೆಯಲ್ಲಿಯೇ ಕೂಡಿ ಹಾಕಿ ಬೀಗ ಹಾಕಿಕೊಂಡು ಪತಿ ಪರಾರಿಯಾಗದ್ದಾನೆ. ಪತ್ನಿ ರಕ್ತಸ್ರಾವದಿಂದ ಮೃತಪಟ್ಟಿದ್ದಾಳೆ. ತಾಯಿಯ ಮೃತದೇಹದೊಂದಿಗಿದ್ದ ಮಕ್ಕಳ ಚೀರಾಟದಿಂದ ನೆರೆಹೊರೆಯವರು ಮನೆ ಬಾಗಿಲು ಒಡೆದು ನೋಡಿದಾಗ ಈ ಘಟನೆ ಬಹಿರಂಗವಾಗಿದೆ.

ಮೈಕೋ ಲೇಔಟ್‌ನ ಬಿಳೇಕಳ್ಳಿ ನಿವಾಸಿ ಉಮಾರಾಣಿ (30) ಮೃತ ಮಹಿಳೆ. ಆರೋಪಿ ಪತಿ ಚಿನ್ನಸ್ವಾಮಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದರು.

ಉಮಾರಾಣಿ ಮತ್ತು ಚಿನ್ನಸ್ವಾಮಿ ಮೂಲತಃ ತಮಿಳುನಾಡು ಮೂಲದವರಾಗಿದ್ದು, 12 ವರ್ಷಗಳ ಹಿಂದೆ ವಿವಾಹವಾಗಿದ್ದಾರೆ. ದಂಪತಿಗೆ ಹನ್ನೊಂದು, ಎಂಟು ವರ್ಷದ ಇಬ್ಬರು ಹೆಣ್ಣು ಮಕ್ಕಳು ಹಾಗೂ ಆರು ವರ್ಷದ ಪುತ್ರನಿದ್ದಾನೆ. ಚಿನ್ನಸ್ವಾಮಿಗೆ ಉಮಾರಾಣಿ ಎರಡನೇ ಪತ್ನಿಯಾಗಿದ್ದರು. ದಂಪತಿ ಕುಟುಂಬ ಸಮೇತ ಒಂದೂವರೆ ವರ್ಷದ ಹಿಂದೆ ನಗರಕ್ಕೆ ಬಂದು ನೆಲೆಸಿದ್ದರು.

ಉಮಾರಾಣಿ ಖಾಸಗಿ ಆಸ್ಪತ್ರೆಯಲ್ಲಿ ಹೌಸ್‌ಕೀಪಿಂಗ್‌ ಕೆಲಸ ಮಾಡುತ್ತಿದ್ದರು. ಆರೋಪಿ ಚಿನ್ನಸ್ವಾಮಿ ಗುಜರಿ ವ್ಯಾಪಾರ ಮಾಡುತ್ತಿದ್ದು, ವಿಪರೀತ ಮದ್ಯದ ಚಟಕ್ಕೆ ಬಿದ್ದಿದ್ದ. ನಿತ್ಯ ಕುಡಿದು ಬರುತ್ತಿದ್ದ ಚಿನ್ನಸ್ವಾಮಿ ಪತ್ನಿ ಜತೆ ಜಗಳವಾಡುತ್ತಿದ್ದ. ಮದ್ಯ ಸೇವನೆ ಚಟ ಬಿಡುವಂತೆ ಪತ್ನಿ ಎಷ್ಟುಬಾರಿ ಹೇಳಿದರೂ ಪತಿ ಕೇಳಿರಲಿಲ್ಲ. ಇದೇ ವಿಚಾರಕ್ಕೆ ದಂಪತಿ ನಡುವೆ ಹಲವು ಬಾರಿ ಜಗಳ ನಡೆದಿತ್ತು. ಚಿನ್ನಸ್ವಾಮಿ ಸರಿಯಾಗಿ ಕೆಲಸಕ್ಕೂ ಹೋಗುತ್ತಿರಲಿಲ್ಲ. ಉಮಾರಾಣಿ ಅವರೇ ಕುಟುಂಬ ನಿರ್ವಹಣೆ ಮಾಡುತ್ತಿದ್ದರು. ಶುಕ್ರವಾರ ಮನೆಗೆ ಕುಡಿದು ಬಂದಿರುವ ಚಿನ್ನಸ್ವಾಮಿ ಪತ್ನಿ ಬಳಿ ಜಗಳ ತೆಗೆದಿದ್ದಾನೆ. ದಂಪತಿ ನಡುವೆ ಮಾತಿನ ಚಕಮಕಿ ನಡೆದಿದ್ದು, ಆರೋಪಿ ಅಡುಗೆ ಮನೆಯಲ್ಲಿದ್ದ ಖಾಲಿ ಸಿಲಿಂಡರ್‌ನಿಂದ ಪತ್ನಿಯ ತಲೆಗೆ ಹೊಡೆದಿದ್ದಾನೆ.

ತೀವ್ರ ರಕ್ತಸ್ರಾವವಾಗಿ ಮಹಿಳೆ ಕುಸಿದು ಬಿದ್ದಿದ್ದು, ಮಕ್ಕಳು ಚೀರಾಡಲು ಶುರು ಮಾಡಿದ್ದಾರೆ. ಮಕ್ಕಳ ಚೀರಾಟದಿಂದ ಹೆದರಿದ ಆರೋಪಿ ಮನೆ ಬೀಗ ಹಾಕಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ. ಉಮಾರಾಣಿ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಅಸುನೀಗಿದ್ದಾರೆ. ಸುಮಾರು ಎರಡು ತಾಸು ಮಕ್ಕಳು ತಾಯಿ ಶವದ ಎದುರು ಕೂತು ಕಣ್ಣೀರು ಹಾಕಿದ್ದಾರೆ. ಮಕ್ಕಳ ಚೀರಾಟದ ಶಬ್ಧ ಕೇಳಿದ ನೆರೆ ಮನೆಯವರು ಮನೆ ಬೀಗ ಹೊಡೆದು ಒಳಗೆ ಪ್ರವೇಶಿಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.

ಈ ಸಂಬಂಧ ಮೈಕೋ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.