ಚನ್ನರಾಯಪಟ್ಟಣ (ನ.19):   ತವರು ಮನೆಯಿಂದ ವರದಕ್ಷಿಣೆ ತರುವಂತೆ ಒತ್ತಾಯಿಸಿ ಕಿರುಕುಳ ನೀಡುತ್ತಿದ್ದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಮಂಗಳವಾರ ರಾತ್ರಿ ಮಚ್ಚಿನಿಂದ ಮನಬಂದಂತೆ ಕೊಚ್ಚಿ ಕೊಲೆಗೈದ ಘಟನೆ ತಾಲೂಕಿನ ದಂಡಿಗನಹಳ್ಳಿ ಹೋಬಳಿ ಕಾಚೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಪೂಜಾ(25) ಕೊಲೆಯಾದ ಮಹಿಳೆ. ಆಕೆಯ ಪತಿ ಗಂಗಾಧರ್‌(31) ಕೊಲೆ ಮಾಡಿ ತಲೆಮರೆಸಿಕೊಂಡಿರುವ ಆರೋಪಿ.

ತಾಲೂಕಿನ ಕಾಚೇನಹಳ್ಳಿ ಗ್ರಾಮದ ನಿವಾಸಿ ಸಣ್ಣೇಗೌಡರ ಮಗ ಗಂಗಾಧರ್‌ ಹಾಗೂ ಹೊಳೆನರಸೀಪುರ ತಾಲೂಕು ಹಳೇಕೋಟೆ ಹೋಬಳಿ ಕುರುಬರಹಳ್ಳಿ ಗ್ರಾಮದ ನಿಂಗೇಗೌಡರ ಪುತ್ರಿ ಪೂಜಾ ಅವರೊಂದಿಗೆ 2014 ರಲ್ಲಿ ಮದುವೆಯಾಗಿದ್ದರು. ಸದ್ಯ 5 ವರ್ಷದ ಪ್ರಥಮ್‌ ಎಂಬ ಮಗನಿದ್ದಾನೆ.

ಅವನ ಸಂಗಕ್ಕಾಗಿ ಗಂಡನನ್ನೇ ಕೊಂದಳು : ದೇಹದ ಖಾಸಗಿ ಅಂಗಗಳ ಹಿಸುಕಿ ಹಿಂಸೆ ಕೊಟ್ಟರು ..

ಮದುವೆಯಾದ ಮೊದಲ ಮೂರು ವರ್ಷ ಚೆನ್ನಾಗಿಯೇ ಇದ್ದ ದಂಪತಿಗಳ ನಡುವೆ ನಂತರದ ದಿನಗಳಲ್ಲಿ ಹಣದ ವಿಚಾರವಾಗಿ ಬಿರುಕು ಮೂಡಿದೆ. ಹಾಗಾಗ್ಗೆ ಜಗಳವಾಡುತ್ತಿದ್ದರು. ನಿಮ್ಮ ಮನೆಯವರು ಮದುವೆ ವೇಳೆ ಕಡಿಮೆ ವರದಕ್ಷಿಣೆ ನೀಡಿದ್ದಾರೆ. ಇನ್ನಷ್ಟುಹಣ ಕೇಳು ಎಂದು ಗಂಗಾಧರ್‌ ಪೂಜಾಳಿಗೆ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ.

ಇದರಿಂದ ಬೇಸತ್ತ ಪೂಜಾ ಒಂದೆರೆಡು ಬಾರಿ ತವರು ಮನೆಗೆ ತೆರಳಿದ್ದು, ಪೂಜಾಳ ಮನೆಯವರು ನ್ಯಾಯ ಪಂಚಾಯ್ತಿ ನಡೆಸಿ ರಾಜಿ ಮಾಡಿ 7 ಗ್ರಾಂ ಚಿನ್ನದ ಓಲೆ ಹಾಗೂ ಒಂದು ಜೊತೆ ಕಿವಿಯ ಚಿನ್ನದ ಗುಂಡು ಕೊಡಿಸಿ ಗಂಡನ ಮನೆಗೆ ಕಳಿಸಿದ್ದರು.

ನಂತರದ ದಿನಗಳಲ್ಲಿಯೂ ಇಬ್ಬರ ನಡುವೆ ಮತ್ತದೇ ಜಗಳ ಮುಂದುವರಿದಿದೆ. ಮಂಗಳವಾರ ರಾತ್ರಿ 9.30 ರ ಸುಮಾರಿನಲ್ಲಿ ನಡೆದ ಜಗಳದಲ್ಲಿ ರೊಚ್ಚಿಗೆದ್ದ ಗಂಗಾಧರ್‌ ತನ್ನ ಪತ್ನಿಯನ್ನು ಮಚ್ಚಿನಿಂದ ಮನಬಂದಂತೆ ಕೊಚ್ಚಿ ಹಲ್ಲೆ ನಡೆಸಿದ್ದಾನೆ. ಕುತ್ತಿಗೆ, ಮುಖ, ಕೈ ಹಾಗೂ ದೇಹದ ವಿವಿಧೆಡೆಗೆ ಬಿದ್ದ ಮಚ್ಚಿನ ಏಟಿನಿಂದ ಪೂಜಾ ತೀವ್ರ ಗಾಯಗೊಂಡಿದ್ದಾಳೆ. ಪೂಜಾಳ ಕಿರುಚಾಟ ಕೇಳಿಸಿಕೊಂಡ ಅಕ್ಕಪಕ್ಕದವರು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾಳೆ. ಚನ್ನರಾಯಪಟ್ಟಣ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಪೂಜಾಳ ಮೃತ ದೇಹವನ್ನು ಸಂಬಂ​ಧಿಕರಿಗೆ ಹಸ್ತಾಂತರಿಸಲಾಗಿದೆ. ಕೊಲೆ ಮಾಡಿದ ಗಂಗಾಧರ್‌ ತಲೆಮರೆಸಿಕೊಂಡಿದ್ದಾನೆ.

ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.