ಮೈಸೂರು [ಡಿ.02]: ಹುಣಸೂರು ಕ್ಷೇತ್ರದಿಂದ ಗೆಲುವು ಸಾಧಿಸಿ ರಾಜೀನಾಮೆ ನೀಡಿ ಮತ್ತೊಮ್ಮೆ ಚುನಾವಣೆಗೆ ಸ್ಪರ್ಧಿಸಿರುವ ಎಚ್. ವಿಶ್ವನಾಥ್ ವಿರುದ್ಧ ಮತದಾರನ ಮುನಿಸು ಮುಗಿದಂತೆ ಕಾಣುತ್ತಿಲ್ಲ. ಇದೀಗ ಪ್ರಚಾರಕ್ಕೆ ತೆರಳಿದ್ದಾಗ ಮತ್ತೊಮ್ಮೆ ಆಕ್ರೋಶ ಹೊರಹಾಕಿದ್ದಾರೆ. 

ಹುಣಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ವಿಶ್ವನಾಥ್ ಪರವಾಗಿ ಪ್ರಚಾರಕ್ಕೆ ತೆರಳಿದ್ದ ಬಿಜೆಪಿಯ ವಿಜಯ್ ಶಂಕರ್ ಗೆ ಹುಣಸೂರು ತಾಲೂಕಿನ ಮಲ್ಲಯ್ಯನ ಗೌಡನ ಕೊಪ್ಪಲು ಗ್ರಾಮದಲ್ಲಿ ಘೇರಾವ್ ಹಾಕಿದ್ದಾರೆ. 

ವಿಶ್ವನಾಥ್ ಪರ ಪ್ರಚಾರಕ್ಕೆ ತೆರಳಿದ್ದ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯ ಪರವಾಗಿ ಜನರು ಘೋಷಣೆ ಕೂಗಿ ಜೈಕಾರ ಹಾಕಿದ್ದಾರೆ. ಇದರಿಂದ ವಿಶ್ವನಾಥ್ ಪರವಾಗಿ ಮತಯಾಚನೆಗೆ ತೆರಳಿದ್ದ ವಿಜಯ ಶಂಕರ್ ಮುಜುಗರ ಎದುರಿಸುವಂತಾಯಿತು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಕೆಲದಿನಗಳ ಹಿಂದಷ್ಟೇ ವಿಜಯ ಶಂಕರ್ ಕಾಂಗ್ರೆಸ್ ತೊರೆದು ತಮ್ಮ ಮಾತೃಪಕ್ಷವಾಗಿ ಬಿಜೆಪಿ ವಾಪಸಾಗಿದ್ದು, ಇದೀಗ ಉಪಚುನಾವಣೆ ಹಿನ್ನೆಲೆಯಲ್ಲಿ ಭರ್ಜರಿ ಪ್ರಚಾರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 

ಡಿಸೆಂಬರ್ 5ರಂದು ರಾಜ್ಯದಲ್ಲಿ ಉಪ ಚುನಾವಣೆ ನಡೆಯಲಿದ್ದು, ಡಿಸೆಂಬರ್ 9 ರಂದು 15 ಕ್ಷೇತ್ರಗಳ ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.